ಮನೆಗಳ್ಳನ ಬಂಧನ : ಬೆಳ್ಳಿ-ಹಿತ್ತಾಳೆ ಸಾಮಾನು ವಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.2- ಮನೆಯ ಟೆರೆಸ್ ಮೂಲಕ ಬಾಗಿಲು ಮೀಟಿ ಒಳನುಗ್ಗಿ ಕಳ್ಳತನ ಮಾಡಿದ್ದ ತಮಿಳುನಾಡಿನ ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿ 2.50 ಲಕ್ಷ ರೂ. ಬೆಲೆ ಬಾಳುವ 4 ಕೆಜಿ 385 ಗ್ರಾಂ ಬೆಳ್ಳಿ ಸಾಮಾನುಗಳು, 5 ಕೆಜಿ ತೂಕದ ಹಿತ್ತಾಳೆ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ರಾಜ್ಯದ ಡಂಕಣಿಕೋಟೆ, ಬಂಡೆಲೂರು ಗ್ರಾಮದ ಮುರುಗನ್(24) ಬಂಧಿತ ಆರೋಪಿ. ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಮನೆಯೊಂದರ ಕುಟುಂಬಸ್ಥರು ಜೂ.16ರಂದು ಸಂಜೆ 4 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು ಮೈಸೂರಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ಚೋರ ಮನೆಯ ಟೆರೆಸ್‍ಗೆ ಹೋಗಿ ಬಾಗಿಲನ್ನು ಮೀಟಿ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿ ಪರಾರಿಯಾಗಿದ್ದರು.

ಜೂ.24ರಂದು ಬೆಳಗ್ಗೆ 11.30ರ ಸುಮಾರಿಗೆ ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದನ್ನು ಗಮನಿಸಿ ಜ್ಞಾನಭಾರತಿ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಇನ್‍ಸ್ಪೆಕ್ಟರ್ ಲಕ್ಷ್ಮಣ್ ನಾಯಕ್ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ಕಳವು ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments