ಈ ಬಾರಿ ಸರಳ ದಸರಾ ಆಚರಣೆಗೆ ತೀರ್ಮಾನ, ಏನೇನಿರುತ್ತೆ ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.8- ಕೋವಿಡ್ -19 ಹಿನ್ನಲೆಯಲ್ಲಿ ಈ ಬಾರಿಯ ಮೈಸೂರು ದಸರಾವನ್ನು ಸಂಪ್ರದಾಯಕ್ಕೆ ದಕ್ಕೆಯಾಗದ ರೀತಿಯಲ್ಲಿ ಅರಮನೆ ಮತ್ತು ಚಾಮುಂಡಿ ಬೆಟ್ಟಕ್ಕೆ ಸೀಮಿತವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ದಸರಾ ಮಹೋತ್ಸವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಾಡ ಹಬ್ಬ ಮೈಸೂರು ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಲು ಸಭೆ ಒಮ್ಮತದ ತೀರ್ಮಾನ ಕೈಗೊಂಡಿತು.

ಸಭೆಯ ಬಳಿಕ ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಸಭೆಯ ತೀರ್ಮಾನವನ್ನು ಪ್ರಕಟಿಸಿದರು.

ಸಂಪ್ರದಾಯಕ್ಕೆ ದಕ್ಕೆಯಾಗದಂತೆ ಅರಮನೆ ಮತ್ತು ಚಾಮುಂಡಿ ಬೆಟ್ಟದಲ್ಲಿ ಸೀಮಿತವಾಗಿ ಹೆಚ್ಚು ಜನ ಸಂದಣೆ ಸೇರದೆ ದಸರಾವನ್ನು ಆಚರಣೆ ಮಾಡಲಾಗುವುದು. ಕೋವಿಡ್-19 ಹಿನ್ನೆಲೆಯಲ್ಲಿ ನಮ್ಮ ಸಂಪ್ರದಾಯಕ್ಕೆ ದಕ್ಕೆಯಾಗದಂತೆ ಉತ್ಸವವನ್ನು ಆಚರಣೆ ಮಾಡಲಾಗುವುದು ಎಂದು ಹೇಳಿದರು.

ನಾಡ ಹಬ್ಬದ ಪ್ರಮುಖ ಆಕರ್ಷಣೆಯಾದ ಜಂಬುಸವಾರಿಯನ್ನು ಅರಮನೆಯ ಆವರಣದಲ್ಲಿ ಆಚರಣೆ ಮಾಡಲಾಗುವುದು. ಪ್ರತಿ ವರ್ಷ ನಡೆಯುತ್ತಿದ್ದ ಯುವ ದಸರಾ, ಸಾಂಸ್ಕøತಿಕ ಕಾರ್ಯಕ್ರಮ, ಚಲನಚಿತ್ರೋತ್ಸವ, ಮಹಿಳಾ ಕಾರ್ಯಕ್ರಮಗಳು, ಮೇಳಗಳು, ಯೋಗ ದಸರಾ, ರೈತ ದಸರಾ, ಕ್ರೀಡಾಕೂಟ, ಕವಿಗೋಷ್ಠಿ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಚಾಮುಂಡಿಬೆಟ್ಟದಲ್ಲಿ ನಡೆಯುವ ಸಂಪ್ರದಾಯ ಮತ್ತು ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳು ಎಂದಿನಂತೆ ಮುಂದುವರೆಯಲಿವೆ. ಕೆಲ ಕಾರ್ಯಕ್ರಮಗಳನ್ನು ಚಿತ್ರೀಕರಣ ಮಾಡಿಕೊಂಡು ಮಾಧ್ಯಮಗಳ ಮೂಲಕ ಪ್ರಚಾರ ಮಾಡುವಂತೆ ಸಲಹೆ ಬಂದಿದೆ ಎಂದು ಹೇಳಿದರು.

ಕುಸ್ತಿ ಪಂದ್ಯಗಳು ಸಂಪ್ರದಾಯಕ್ಕೆ ಅನುಗುಣವಾಗಿ ನಡೆಯಲಿವೆ. ಹಾಸ್ಯೋತ್ಸವ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಅಲ್ಲದೆ ಪಂಜಿನ ಕವಾಯತು ಕೂಡ ಈ ಬಾರಿ ಇರುವುದಿಲ್ಲ ಎಂದು ಸಿ.ಟಿ.ರವಿ ತಿಳಿಸಿದರು.

ಮನೆ ಮನೆ ದಸರಾವನ್ನು ಅವರವರ ಮನೆಯಲ್ಲಿ ಆಚರಣೆ ಮಾಡಿಕೊಳ್ಳಬಹುದು. ಮತ್ತೊಮ್ಮೆ ಶೀಘ್ರದಲ್ಲೇ ಮೈಸೂರಿನಲ್ಲಿ ಸಭೆ ಸೇರಿ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದೇವೆ. ಸರಳ ದಸರಾ ಹಬ್ಬ ಮಾಡಲು ತೀರ್ಮಾನಿಸಿರುವುದರಿಂದ ಗಣ್ಯ, ಅತಿಗಣ್ಯ ವ್ಯಕ್ತಿಗಳಿಗೆ ಪಾಸ್ ನೀಡುವ ಪ್ರಯವೇ ಬರುವುದಿಲ್ಲ. ಜತೆಗೆ ಹೆಚ್ಚು ಜನರು ಸೇರುವುದಿಲ್ಲ ಎಂದ ಮೇಲೆ ಈ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ಅದ್ಧೂರಿಯಾಗಿ ಆಚರಿಸಿದರೆ ಹೆಚ್ಚಿನ ಜನರು ಸೇರ ಬಹುದು. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡವುದನ್ನು ತಡೆಗಟ್ಟುವುದು ಅವಶ್ಯಕವಾಗಿರುವುದರಿಂದ ಸರಳ ದಸರಾ ಆಚರಣೆ ಮಾಡಬೇಕೆಂದು ಸದಸ್ಯರು ಸಲಹೆಗಳನ್ನು ನೀಡಿದ್ದಾರೆ.

ಸಂಪ್ರದಾಯಿಕ ಆಚರಣೆಯನ್ನು ಕೈ ಬಿಡದೆ ವೈಭವಕ್ಕೆ ಕಡಿವಾಣ ಹಾಕುವುದು ಸೂಕ್ತ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಹೆಚ್ಚಿನ ಜನ ಸಂದಣಿ ಸೇರದಂತೆ ಸಾಂಕೇತಿಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಈ ಬಾರಿಯ ದಸರಾ ಆಚರಣೆಗೆ ಸರ್ಕಾರದ ವತಿಯಿಂದ 10 ಕೋಟಿ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 5 ಕೋಟಿ ಅನುದಾನ ನೀಡಲಿದೆ. ಅಗತ್ಯವಿದ್ದರೆ ಇನ್ನೂ ಹೆಚ್ಚಿನ ಆರ್ಥಿಕ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಅಶ್ವತ್ಥನಾರಾಯಣ, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್‍ಸೇಠ್, ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಕೆಎಸ್‍ಟಿಡಿಸಿ ಅಧ್ಯಕ್ಷೆ ಶೃತಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Facebook Comments