ಉಪಚುನಾವಣೆ : ಇಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಸಾಧ್ಯತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.9- ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಲಿರುವ ಪ್ರತಿಷ್ಠಿತ ರಾಜರಾಜೇಶ್ವರಿನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗುವ ಸಂಭವವಿದೆ.
ಸಂಜೆಯೊಳಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ.

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಬೆಂಗಳೂರಿನ ಆರ್‍ಆರ್‍ನಗರಕ್ಕೆ ಮಾಜಿ ಶಾಸಕ ಮುನಿರತ್ನ ನಾಯ್ಡುಗೆ ಟಿಕೆಟ್ ಬಹುತೇಕ ಖಚಿತವಾಗಿದೆ.
ಶಿರಾದಲ್ಲಿ ಮಾಜಿ ಸಂಸದ ಮೂಡಲಗಿರಿಯಪ್ಪ ಪುತ್ರ ಡಾ.ರಾಜೇಶ್‍ಗೌಡ ಅವರಿಗೆ ಹಲವರ ವಿರೋಧದ ನಡುವೆಯೂ ಪಕ್ಷದ ವರಿಷ್ಠರು ಮಣೆ ಹಾಕಲಿದ್ದಾರೆ.

ಕಳೆದ ರಾತ್ರಿಯೇ ಬಿಜೆಪಿಯ ಸಂಸದೀಯ ಮಂಡಳಿಯ ಸಭೆ ನಡೆಯಬೇಕಿತ್ತು. ಆದರೆ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್ ಅವರು ಹಠಾತ್ ನಿಧನರಾದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿತ್ತು.
ಔಪಚಾರಿಕವಾಗಿ ಈಗಾಗಲೇ ರಾಜ್ಯ ನಾಯಕರ ಜೊತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾತುಕತೆ ನಡೆಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಒಂದೇ ವಾರ ಇರುವ ಹಿನ್ನೆಲೆಯಲ್ಲಿ ವಿಳಂಬ ಮಾಡುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಪರ ವಿರೋಧದ ನಡುವೆಯೇ ಎರಡು ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗಲಿದೆ.

ತೀವ್ರ ವಿವಾದಕ್ಕೆ ಕಾರಣವಾಗಿದ್ದ ಆರ್‍ಆರ್‍ನಗರದಿಂದ ಮಾಜಿ ಶಾಸಕ ಮುನಿರತ್ನ ನಾಯ್ಡು ಟಿಕೆಟ್ ಪಡೆಯುವುದು ಖಾತ್ರಿಯಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸೇರ್ಪಡೆಯಾಗಿದ್ದ ಅವರಿಗೆ ವರಿಷ್ಠರು ಟಿಕೆಟ್ ಖಾತ್ರಿ ಪಡಿಸಿದ್ದಾರೆ.

ಎಲ್ಲರಿಗೂ ಟಿಕೆಟ್ ಕೊಟ್ಟು ಮುನಿರತ್ನಗೆ ಮಾತ್ರ ಟಿಕೆಟ್ ಕೈತಪ್ಪಿದರೆ ಮುಂದೆ ಅನ್ಯ ಪಕ್ಷಗಳಿಂದ ಬರುವವರು ಹಿಂದೇಟು ಹಾಕಬಹುದು. ಅಲ್ಲದೆ ಕಾಂಗ್ರೆಸ್-ಜೆಡಿಎಸ್‍ನಿಂದ ಬಂದಿರುವ ವಲಸಿಗರು ಸಿಡಿದೇಳಬಹುದು ಎಂಬ ಕಾರಣಕ್ಕಾಗಿ ವರಿಷ್ಠರು ಮುನಿರತ್ಯಗೆ ಟಿಕೆಟ್ ನೀಡುವುದು ಪಕ್ಕಾ ಎಂದು ತಿಳಿದುಬಂದಿದೆ.

ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ತುಳಸಿ ಮುನಿರಾಜುಗೌಡ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವ ಆಶ್ವಾಸನೆ ಕೊಡಲಾಗಿದೆ. ಟಿಕೆಟ್ ಕೈತಪ್ಪಿದರೆ ಮುನಿಸಿಕೊಳ್ಳಬಾರದೆಂದು ಸೂಚನೆ ನೀಡಿದ್ದಾರೆ.

ಶಿರಾದಿಂದಲೂ ಡಾ.ರಾಜೇಶ್‍ಗೌಡ ಅವರಿಗೆ ಟಿಕೆಟ್ ನೀಡಲು ಸ್ಥಳೀಯ ನಾಯಕರು ವಿರೋಸಿದ್ದರು. ಆದರೆ ಇದಾವುದನ್ನೂ ಪರಿಗಣಿಸದ ವರಿಷ್ಠ ಮಂಡಳಿ ರಾಜ್ಯ ಕೋರ್ ಕಮಿಟಿ ಶಿಫಾರಸ್ಸಿನಂತೆ ಅವರಿಗೆ ಮಣೆ ಹಾಕಿದೆ.

ಒಂದು ವೇಳೆ ಸ್ಥಳೀಯ ನಾಯಕರು ಬಂಡಾಯವೆದ್ದರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹೊಣೆಗಾರಿಕೆ ರಾಜ್ಯ ಘಟಕದ ನಾಯಕರಿಗೆ ನೀಡಲಾಗಿದೆ. ಯಾವುದೇ ಸಂದರ್ಭದಲ್ಲೂ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದ್ದು, ಹಲವು ದಿನಗಳ ಕುತೂಹಲಕ್ಕೆ ಸಂಜೆ ತೆರೆಬೀಳಲಿದೆ.

Facebook Comments

Sri Raghav

Admin