ಮೂರೂ ಪಕ್ಷಗಳಿಗೆ ‘ಶಿರಾ’ ಅಗ್ನಿಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಸೆ.21- ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ ಶಿರಾ ಉಪಚುನಾವಣೆ ಅಗ್ನಿಪರೀಕ್ಷೆಯಾಗಿದೆ. ಹಾಗಾಗಿ ಎಲ್ಲರೂ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳುತ್ತಾರೆ.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರು 10 ರಿಂದ 12 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಶತಸಿದ್ಧ ಎಂದು ಕೆ.ಎನ್.ರಾಜಣ್ಣ ಭವಿಷ್ಯ ನುಡಿದಿದ್ದಾರೆ.

ಶಿರಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅಗಿರುವ ಟಿ.ಬಿ.ಜಯಚಂದ್ರ ಅವರು ಕುಟುಂಬ ಸಮೇತರಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.  ನಗರದ ಹೊರವಲಯದ ಕ್ಯಾತ್ಸಂದ್ರದಲ್ಲಿನ ಕೆ.ಎನ್. ರಾಜಣ್ಣನವರ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಚಿವ ಜಯಚಂದ್ರ ಅವರು ಉಪಹಾರ ಸೇವಿಸಿ ಉಭಯ ಕುಶಲೋಪಹರಿ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್. ರಾಜಣ್ಣ, ಜಯಚಂದ್ರ ಅವರ ಜಯ ಕಾಂಗ್ರೆಸ್‍ಗೆ ಮುಂದಿನ ಎಲ್ಲ ಚುನಾವಣೆಯ ಗೆಲುವಿಗೆ ಮಾರ್ಗಸೂಚಿಯಾಗಲಿದೆ ಎಂದರು. ಶಿರಾ ಉಪಚುನಾವಣೆಯಲ್ಲಿ ಜಯಚಂದ್ರ ಅವರು ಅಭ್ಯರ್ಥಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೆಪಿಸಿಸಿ ಈ ಬಗ್ಗೆ ಒಮ್ಮತದ ನಿರ್ಣಯ ಕೈಗೊಂಡು ಎಐಸಿಸಿಗೆ ಶಿಫಾರಸು ಮಾಡಿದೆ. ಎಐಸಿಸಿಯಿಂದ ಜಯಚಂದ್ರ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವ ವಿಶ್ವಾಸವಿದೆ ಎಂದರು.

ಜಯಚಂದ್ರ ಮತ್ತು ತಮ್ಮ ನಡುವೆ ಯಾವುದೇ ರೀತಿಯ ವೈಯಕ್ತಿಕವಾಗಿ ಭಿನ್ನಾಭಿಪ್ರಾಯಗಳಿಲ್ಲ. ಆದರೆ, ಸಚಿವ ಸ್ಥಾನ ಹಂಚಿಕೆ ವೇಳೆ ಕೆಲವು ಗೊಂದಲಗಳಾಗಿದ್ದವು. ಅಂತಹ ಸಂದರ್ಭದಲ್ಲಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದಾಗ ಅದಕ್ಕೆ ಬೇರೆ ರೀತಿಯ ರಾಜಕೀಯ ಬಣ್ಣ ಬಳಿಯುತ್ತಾರೆ.

ಅದನ್ನು ನಾನು ಮನಸ್ಸಿನಲ್ಲಿಟ್ಟುಕೊಂಡಿಲ್ಲ. ಈ ಹಿಂದಿನಿಂದಲೂ ನಾವು ಪಕ್ಷದ ತೀರ್ಮಾನದಂತೆ ಅಭ್ಯರ್ಥಿ ಪರವಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಅದರಂತೆ ಈಗಲೂ ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಟಿ.ಬಿ. ಜಯಚಂದ್ರ ಅವರ ಗೆಲುವಿಗಾಗಿ ಕೆಲಸ ಮಾಡುತ್ತೇವೆ ಎಂದರು.  ಜಿ¯್ಲÉಯ ಮುಖಂಡರು ಇನ್ನೊಮ್ಮೆ ಸಭೆ ಸೇರಿ ಯಾರ್ಯಾರಿಗೆ ಯಾವ್ಯಾವ ಜವಾಬ್ದಾರಿ ನೀಡಬೇಕು ಎಂಬುದನ್ನು ತೀರ್ಮಾನಿಸುತ್ತೇವೆ ಎಂದು ಅವರು ಹೇಳಿದರು.

ಶಿರಾ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣ ಅವರು ಹೇಳಿದ ನಂತರ ಹೊರಗಡೆ ಇದ್ದ ಶಿರಾದ ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಿರಾ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು ಅಭಿನಂದಿಸಿದ ನಂತರ ಕೆ.ಎನ್. ರಾಜಣ್ಣ, ಈ ಉಪಚುನಾವಣೆಯ ರಣರಂಗಕ್ಕೆ ನಾವು ಇಬ್ಬರೂ ಇಳಿದಿದ್ದೇವೆ ಎಂದರು.

ಸವಾಲಿದೆ: ಈಗ ನಮ್ಮ ಮುಂದೆ ಉಪಚುನಾವಣೆಯ ಸವಾಲಿದೆ. ಇದನ್ನು ಹೊರತುಪಡಿಸಿ ಉಳಿದ ಎಲ್ಲವೂ ಗೌಣ. ಹಾಗಾಗಿ ನಮ್ಮ ಎಲ್ಲರ ಲಕ್ಷ್ಯ ಚುನಾವಣೆಯತ್ತ ನೆಟ್ಟಿದೆ. ಉಪ ಚುನಾವಣೆಯಲ್ಲಿ ಜಯಚಂದ್ರ ಅವರು ಕನಿಷ್ಠ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  ನಾನು ಮತ್ತು ಜಯಚಂದ್ರ ಅವರು ಒಳ್ಳೆಯ ಸ್ನೇಹಿತರು. ಹಾಗೆಯೇ ಪರಮೇಶ್ವರ್ ನಾವು ಎಲ್ಲರೂ ಜತೆಗೂಡಿ ಶಿರಾದಲ್ಲಿ ಜಯಚಂದ್ರ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಶಿರಾ ಉಪಚುನಾವಣೆಯಲ್ಲಿ ಕೆ.ಎನ್.ರಾಜಣ್ಣ ಹಾಗೂ ಟಿ.ಬಿ.ಜಯಚಂದ್ರ ನೀವು ಇಬ್ಬರೂ ಜೋಡೆತ್ತುಗಳಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯದಲ್ಲಿ ಒಂದು ಕರಿ ಎತ್ತು ಒಂದು ಬಿಳಿ ಎತ್ತು ಇದ್ದವು. ಆದರೆ, ಅವು ಜೋಡೆತ್ತುಗಳು ಆಗುತ್ತಿರಲಿಲ್ಲ ಎಂದು ಮಂಡ್ಯ ಉಪಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರನ್ನು ವ್ಯಂಗ್ಯವಾಗಿ ಚುಚ್ಚಿದರು.

ಇತ್ತೀಚಿನ ದಿನಗಳಲ್ಲಿ ಜಿ¯್ಲÁ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಜಯಚಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ವಿಷಯವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಾಧುಸ್ವಾಮಿ ಅವರ ನಡೆ ಹಾಗೂ ಬಿಜೆಪಿ ಪಕ್ಷದ ತತ್ವ-ಸಿದ್ಧಾಂತಗಳ ಬಗ್ಗೆ ಕೆಂಡಾಮಂಡಲರಾದರು. ಇದುವರೆಗೂ ಯಾರೂ ಇತ್ತ ತಲೆ ಹಾಕದವರು ಶಿರಾ ಉಪಚುನಾವಣೆ ಬಂದ ತಕ್ಷಣವೇ ಅವರಿಗೆ ಅಭಿವೃದ್ಧಿಯ ನೆನಪಾಗಿಬಿಟ್ಟಿದೆ. ಇಲ್ಲಿಯತನಕ ಎಲ್ಲಿ ಹೋಗಿದ್ದರು. ಈಗ ಈ ಕ್ಷೇತ್ರದ ಅಭಿವೃದ್ಧಿ ಬೇಕಾಗಿದೆ. ಆದರೆ, ಶಿರಾ ತಾಲೂಕಿನ ಜನರ ಮುಂದೆ ಇದ್ಯಾವುದೂ ನಡೆಯುವುದಿಲ್ಲ ಎಂದು ತಿಳಿಸಿದರು.

ಕಳೆದ 50 ವರ್ಷಗಳಿಂದ ತುಮಕೂರು ರಾಜಕಾರಣದಲ್ಲಿ ಉಳಿದವರು ನಾವಿಬ್ಬರೇ. ಐದು ದಶಕದ ಅವಧಿಯಲ್ಲಿ ಒಂದೇ ಪಕ್ಷದಲ್ಲಿ ಇರಬೇಕಾದರೆ ಭಿನ್ನಾಭಿಪ್ರಾಯ. ವ್ಯತ್ಯಾಸಗಳು ಸಹಜ. ಹೀಗಾಗಿ ಕೆಲವೊಮ್ಮೆ ರಾಜಕೀಯ ತಪ್ಪು ನಿರ್ಧಾರಗಳು ಆಗಿರಬಹುದು ಎಂದು ಜಯಚಂದ್ರ ಹೇಳಿದರು.  ಶಿರಾ ಉಪಚುನಾವಣೆ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.

ಈ ಚುನಾವಣೆಯನ್ನು ಎಲ್ಲ ಪಕ್ಷಗಳೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜತೆ ಸುದೀರ್ಘ ಚರ್ಚೆ ಮಾಡಿದ್ದೇವೆ. ಬಳಿಕ ನಾವೆಲ್ಲ ಒಂದಾಗಿ ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ ಎಂದ ಅವರು, ರಾಜಣ್ಣ ನಮಗೆ ಸಹಕಾರ ನೀಡಲಿದ್ದಾರೆ ಎಂದರು.

ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಹೊರತುಪಡಿಸಿ ಬೇರೆ ಯಾವುದೇ ಪಕ್ಷದ ಅಭ್ಯರ್ಥಿಗೆ ನಾನು ಬೆಂಬಲ ಸೂಚಿಸಲು ಸಾಧ್ಯವಿಲ್ಲ. ಸಂಸದರ ಚುನಾವಣೆಯಲ್ಲಿ ದೇವೇಗೌಡರು ಮಾಡಿದ ಒಂದು ಸಣ್ಣ ತಪ್ಪಿನಿಂದ ನಾನೇನು ಎಂಬುದನ್ನು ತೋರಿಸಿಕೊಟ್ಟಿದ್ದೇನೆ.ಆದರೂ ನನಗೆ ಜೆಡಿಎಸ್ ಪಕ್ಷದ ಋಣ ಇದೆ.

ಅದನ್ನು ಸಮಯ ಸಂದರ್ಭದಲ್ಲಿ ನಾನು ತಿರಿಸುತ್ತೇನೆ. ಏಕೆಂದರೆ, ಜೆಡಿಎಸ್ ಪಕ್ಷದಲ್ಲಿ ನನಗೆ ಬಿ ಫಾರಂ ನೀಡಿ ದೇವೇಗೌಡರು ಶಾಸಕರನ್ನಾಗಿ ಮಾಡಿದರು. ಅದರ ಋಣ ನನ್ನ ಮೇಲಿದೆ ಎಂದು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ನೆನಪಿಸಿಕೊಂಡರು.ಮಧುಗಿರಿಯ ಜಿ.ಜೆ.ರಾಜಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.

Facebook Comments