ಶಿರಾ ವಿಧಾನಸಭೆ ಉಪ ಚುನಾವಣೆ ಕುರಿತು ಸಿದ್ದರಾಮಯ್ಯ-ಡಿಕೆಶಿ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.13- ಶಿರಾ ವಿಧಾನಸಭೆ ಉಪ ಚುನಾವಣೆಗೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದಾರೆ. ಶಿರಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನ ಮಾಜಿ ಶಾಸಕ ಕೆ.ಎನ್.ರಾಜಣ್ಣ ಬಂಡಾಯವಾಗಿ ಅಥವಾ ಬೇರೆ ಪಕ್ಷದಿಂದ ಕಣಕ್ಕಿಳಿಯುವ ನಿರೀಕ್ಷೆಗಳಿರುವುದರಿಂದ ಕಾಂಗ್ರೆಸ್‍ನಲ್ಲಿ ಸಂಚಲನ ಸೃಷ್ಟಿಯಾಗಿದೆ.

ಕಳೆದ ಬಾರಿ ಸೋಲುಕಂಡ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಒಂದು ವೇಳೆ ರಾಜಣ್ಣ ಕಣಕ್ಕಿಳಿದರೆ ಕಾಂಗ್ರೆಸ್‍ಗೆ ಹೊಡೆತ ಬೀಳುವ ಲೆಕ್ಕಾಚಾರಗಳಿದ್ದು, ಶತಾಯಗತಾಯ ಕ್ಷೇತ್ರವನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರು ರಣ ತಂತ್ರ ರೂಪಿಸಲು ಮುಂದಾಗಿದ್ದಾರೆ.

ಶಿರಾದಲ್ಲಿ ಈವರೆಗೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ಪೈಪೋಟಿ ಇದ್ದು, ಬಿಜೆಪಿಗೆ ನೆಲೆ ಇರಲಿಲ್ಲ. ಈ ಬಾರಿ ಬಿಜೆಪಿ ಆಡಳಿತದಲ್ಲಿದ್ದು, ಉಪ ಚುನಾವಣೆಯನ್ನು ಗೆಲ್ಲಲು ಈಗಾಗಲೇ ತಯಾರಿಗಳನ್ನು ಆರಂಭಿಸಿದೆ.

ಜೆಡಿಎಸ್-ಕಾಂಗ್ರೆಸ್ ಪಕ್ಷಗಳಿಗೆ ಶಿರಾ ವಿಧಾನಸಭಾ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಟಿ.ಬಿ.ಜಯಚಂದ್ರ ಅವರು ಕಣಕ್ಕಿಳಿದರೆ ಈವರೆಗೂ ಗೆಲುವು ಸುಲಭ ಎಂಬ ಮಾತುಗಳಿದ್ದವು. ಆದರೆ, ಬಿಜೆಪಿ ತಯಾರಿಗಳು ಹಾಗೂ ರಾಜಣ್ಣ ಅವರ ಮುನ್ಸೂಚನೆ ಶಿರಾ ಕ್ಷೇತ್ರ ಕಬ್ಬಿಣದ ಕಡಲೆಯಂತಾಗಿದೆ.

ಕಳೆದ 10 ದಿನಗಳಿಂದಲೂ ಕಾಂಗ್ರೆಸ್‍ನಲ್ಲಿ ತಯಾರಿಗಳು ಆರಂಭಗೊಂಡಿವೆ. ಇಂದು ಪ್ರಮುಖವಾಗಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಚರ್ಚೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಕೊರೊನಾದಿಂದ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದು, ಹೋಮ್ ಕ್ವಾರಂಟೈನ್‍ನಲ್ಲಿ ಇದ್ದಾರೆ. ಹೀಗಾಗಿ ನೇರವಾಗಿ ಭೇಟಿ ಮಾಡಲು ಸಾಧ್ಯವಾಗಿಲ್ಲ. ಮುಂದಿನ ವಾರ ಬೆಂಗಳೂರಿನಲ್ಲಿ ಸಭೆ ಮಾಡಿ ಚುನಾವಣಾ ಕಣಕ್ಕೆ ನಾಯಕರು ದುಮುಕಲ್ಲಿದ್ದಾರೆ ಎಂದು ಹೇಳಲಾಗಿದೆ.

Facebook Comments