ಶಿರಾ ವಶಪಡಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.11-ಪ್ರತಿಷ್ಠೆಯ ಕಣವಾಗಿ ಪರಿಣಮಿಸಲಿರುವ ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಆಡಳಿತಾರೂಢ ಬಿಜೆಪಿ ಜಾತಿಗೊಬ್ಬರನ್ನು ಉಸ್ತುವಾರಿಯಾಗಿ ನೇಮಿಸಲು ಮುಂದಾಗಿದೆ.  ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜಾತಿ ಮುಖಂಡರನ್ನು ಉಸ್ತುವಾರಿಗಳನ್ನಾಗಿ ನೇಮಿಸಿ ಯಶಸ್ವಿಯಾಗಿದ್ದರು.

ಅಲ್ಲದೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಡೆದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಇದೇ ತಂತ್ರವನ್ನು ಅನುಸರಿಸಿ ಬಿಜೆಪಿಗೆ ಠಕ್ಕರ್ ಕೊಡಲಾಗಿತ್ತು.  ಈಗ ಇದೇ ತಂತ್ರವನ್ನು ಹೆಣೆದಿರುವ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಸಮಬಲವಾಗಿ ಸ್ಪರ್ಧೆ ನೀಡಲು ವಿಶೇಷ ತಂತ್ರವನ್ನು ರೂಪಿಸಿದೆ.

ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಕುಂಚಿಟಿಗ ಒಕ್ಕಲಿಗ, ನಾಯಕ ಸಮುದಾಯ, ಪರಿಶಿಷ್ಟ ಜಾತಿ, ಕುರುಬರು, ಗೊಲ್ಲರು, ಯಾದವರು ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳನ್ನು ಸೆಳೆಯಲು ಆಯಾ ಜಾತಿಯ ಸಚಿವರು ಮತ್ತು ಶಾಸಕರನ್ನೇ ಉಸ್ತುವಾರಿ ಹೊಣೆಗಾರಿಕೆ ನೀಡಲಾಗಿದೆ.

ಈಗಾಗಲೇ ಕ್ಷೇತ್ರದಲ್ಲಿ ಯಾವ ಯಾವ ಸಮುದಾಯದ ಎಷ್ಟು ಮತಗಳಿವೆ ಎಂಬುದನ್ನು ಖುದ್ದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಾಧುಸ್ವಾಮಿ ಅಂಕಿಸಂಖ್ಯೆಗಳ ಪಟ್ಟಿ ತೆಗೆದಿದ್ದಾರೆ.  ಇದರಂತೆಯೇ ಬಿಜೆಪಿ ಉಸ್ತುವಾರಿಗಳ ನೇಮಕಾತಿಗೆ ಚಾಲನೆ ಕೊಟ್ಟಿದ್ದು, ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸುತ್ತಿದ್ದಂತೆ ಅಖಾಡಕ್ಕಿಳಿಸಲಿದೆ. ಬಿಹಾರ ವಿಧಾನಸಭಾ ಚುನಾವಣಾ ಸಂದರ್ಭದಲ್ಲೇ ಈ ಕ್ಷೇತ್ರಕ್ಕೂ ದಿನಾಂಕ ನಿಗದಿಯಾಗಲಿದೆ ಎಂದು ಹೇಳಲಾಗುತ್ತಿದೆ.

# ಯಾರ್ಯಾರಿಗೆ ಉಸ್ತುವಾರಿ:
ಕಳೆದ ನವೆಂಬರ್-ಡಿಸೆಂಬರ್‍ನಲ್ಲಿ ನಡೆದಿದ್ದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್‍ನ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಸಿಎಂ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಉಸ್ತುವಾರಿ ವಹಿಸಿದ್ದರು. ಅಚ್ಚರಿ ಎಂಬಂತೆ ಮೊದಲ ಬಾರಿಗೆ ಬಿಜೆಪಿ ಇಲ್ಲಿ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಶಿರಾದಲ್ಲೂ ಇದೇ ತಂತ್ರ ಅನುಸರಿಸಲಿದೆ.

ಕುಂಚಿಟಿಗ ಒಕ್ಕಲಿಗರ ಮತಗಳನ್ನು ಸೆಳೆಯಲು ಕಂದಾಯ ಸಚಿವ ಆರ್.ಅಶೋಕ್, ಡಿಸಿಎಂ ಅಶ್ವಥ್ ನಾರಾಯಣ, ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್‍ಗೌಡ ಸೇರಿದಂತೆ ಮತ್ತಿತರರು ಉಸ್ತುವಾರಿಯಾಗಿ ನೇಮಕವಾಗಲಿದ್ದಾರೆ.  ನಾಯಕ ಸಮುದಾಯದ ಮತ ಸೆಳೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ರಾಜುಗೌಡ ನಾಯಕ್, ಶಿವನಗೌಡ ನಾಯಕ್ ಮತ್ತಿತರರು ಉಸ್ತುವಾರಿ ವಹಿಸಿಕೊಳ್ಳುವರು.

ಪರಿಶಿಷ್ಟ ಸಮುದಾಯದಿಂದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್, ನಾರಾಯಣಸ್ವಾಮಿ, ರಮೇಶ್ ಜಿಣಜಿಣಗಿ, ಮುನಿಸ್ವಾಮಿ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕರು ಸಾಥ್ ನೀಡುವರು. ಕುರುಬ ಸಮುದಾಯದ ಮತಗಳಿಗಾಗಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಭೈರತಿ ಬಸವರಾಜ್, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ರಘುನಾಥ್ ಮಲ್ಕಾಪುರೆ ಮತ್ತಿತರರು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ.

ಯಾದವ ಸಮುದಾಯಕ್ಕೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ವಹಿಸಿಕೊಂಡರೆ, ಸಲ್ಪಸಂಖ್ಯಾತ ಮತಕ್ಕಾಗಿ ಅಬ್ದುಲ್ ಅಜೀಮ್ ಮತಯಾಚನೆ ಮಾಡುವರು. ಉಳಿದಂತೆ ಕ್ಷೇತ್ರದಲ್ಲಿ ಅಲ್ಪ ಪ್ರಮಾಣದಲ್ಲಿರುವ ವೀರಶೈವ ಮತಗಳಿಗಾಗಿ ಸಚಿವರಾದ ಮಾಧುಸ್ವಾಮಿ, ವಿ.ಸೋಮಣ್ಣ, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕರು ಭಾಗವಹಿಸುವರು.

ಚುನಾವಣೆ ದಿನಾಂಕ ಘೋಷಣೆಯಾದ ಮರು ದಿನದಿಂದಲೇ ಇಡೀ ಸಚಿವ ಸಂಪುಟ ಹಾಗೂ ಶಾಸಕರು ಶಿರಾದಲ್ಲೇ ಠಿಕಾಣಿ ಹೂಡಲಿದ್ದು, ಗೆಲುವಿಗೆ ಎಲ್ಲ ತಂತ್ರವನ್ನು ಅನುಸರಿಸುವರು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಕ್ಷೇತ್ರದಲ್ಲಿ ಬೀಡುಬಿಟ್ಟು ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ.

# ಬಿಜೆಪಿ ವಿಶೇಷ ತಂತ್ರ:
ಶಿರಾ ಉಪಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನಾಂಕ ಪ್ರಕಟಿಸಬೇಕಾಗಿದೆ, ಹೀಗಿರುವಾಗಲೇ ಬಿಜೆಪಿ ಶಿರಾದಲ್ಲಿ ತನ್ನ ಖಾತೆ ತೆರೆಯಲು ಕಾರ್ಯತಂತ್ರ ಪ್ರಾರಂಭಿಸಿದೆ. ಈ ಮೊದಲು ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೋರಾಟ ನಡೆಯುತ್ತಿತ್ತು. 2018 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಸತ್ಯನಾರಾಯಣ ಶೇ.41ರಷ್ಟು ಮತ ಪಡೆದಿದ್ದರು.

ಟಿ.ಬಿ.ಜಯಚಂದ್ರ ಶೇ.35ರಷ್ಟು ಮತ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಎಸ್ ಆರ್ ಗೌಡ ಮೂರನೇ ಸ್ಥಾನ ಪಡೆದಿದ್ದರು. ಶೇ,9 ರಷ್ಟು ಮತ ಸ್ವತಂತ್ರ ಅಭ್ಯರ್ಥಿ ಪಾಲಾಗಿತ್ತು.ಈ ಬಾರಿ ಆಡಳಿತಾರೂಡ ಬಿಜೆಪಿ ಶಿರಾ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿ ಕುಮಾರ್ ಸೆಪ್ಟಂಬರ್ 21 ರಿಂದ ಶಿರಾದಲ್ಲಿ ಸಭೆಗಳನ್ನು ನಡೆಸಲಿದ್ದಾರೆ, ಪೇಜ್ ಪ್ರಮುಖ್ ಕಾನ್ಸೆಪ್ಟ್ ಅಡಿಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಲು ರೂಟ್ ಮ್ಯಾಪ್ ಸಿದ್ದಗೊಳಿಸಿದ್ದಾರೆ.

ಅಲ್ಲಿ ಪ್ರತಿ ಬೂತ್ನಿಂದ ಮತದಾರರ ಪಟ್ಟಿಯ ಒಂದು ಪುಟವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಪ್ರತಿ ಪುಟದಲ್ಲಿ 10 ರಿಂದ 12 ಕುಟುಂಬಗಳು ಮತದಾರರನ್ನು ಹೊಂದಿದ್ದಾರೆ. ಮತದಾನದ ದಿನದಂದು ಈ ಮತದಾರರು ಬೂತ್ ತಲುಪಿ ಬಿಜೆಪಿಗೆ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳುವುದು ಪೇಜ್ ಪ್ರಮುಖ್ ಅವರ ಕೆಲಸವಾಗಿರುತ್ತದೆ.

ಶಿರಾದಲ್ಲಿ 264 ಬೂತ್ ಗಳಿದ್ದು, ಪ್ರತಿಯೊಂದು ಬೂತ್ ಗೆ ಒಂದರಂತೆ ಒಟ್ಟು 264 ಸಮಿತಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತದಾರರನ್ನು ತಲುಪಲು ವಾಟ್ಸಾಪ್ ಗುಂಪು ರಚಿಸಲಾಗಿದೆ. ಪೇಜ್ ಪ್ರಮುಖ್ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ವಿಧಾನಸಭೆ ಅಧಿವೇಶನ ಆರಂಭವಾಗುವವರೆಗೂ ಶಿರಾದಲ್ಲಿಯೇ ಉಳಿಯುವುದಾಗಿ ಪಕ್ಷದ ಪ್ರಮುಖರೊಬ್ಬರು ತಿಳಿಸಿದ್ದಾರೆ.

ಒಂದು ವೇಳೆ ಕಾಂಗ್ರೆಸ್ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡದಿದ್ದರೇ , ಬಿಜೆಪಿ ಅವರನ್ನು ಸಂಪರ್ಕಿಸಿ ಪಕ್ಷದಿಂದ ಸ್ಪರ್ಧಿಸಲು ಕೇಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Facebook Comments