ಶಿರಾ ವಶಪಡಿಸಿಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.28-ಶತಾಯಗತಾಯ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ವಿಶೇಷ ರಣತಂತ್ರ ರೂಪಿಸಿದ್ದು, ಪ್ರಮುಖವಾಗಿ ಸಣ್ಣ ಸಣ್ಣ ಸಮುದಾಯಗಳನ್ನು ಸೆಳೆಯಲು ಮುಂದಾಗಿದೆ.  ಕ್ಷೇತ್ರದಲ್ಲಿ ಗೊಲ್ಲರು, ಪರಿಶಿಷ್ಟ ವರ್ಗ, ಕುರುಬ ಸೇರಿದಂತೆ ಸೋಲುಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ಸೆಳೆಯಲು ನಾನಾ ಕಸರತ್ತು ನಡೆಸಿದೆ.

ಹೀಗಾಗಿಯೇ ಸಮುದಾಯದ ಪ್ರಮುಖರನ್ನು ಮುಂದಿಟ್ಟುಕೊಂಡು ಮತ ಬುಟ್ಟಿಗೆ ಕೈ ಹಾಕಿದೆ. ಕಳೆದ 10 ದಿನಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಕ್ಷೇತ್ರದ ಉಸ್ತುವಾರಿಗಳಾದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವಥ್ ನಾರಾಯಣ, ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಾಜಿ ಶಾಸಕ ಸುರೇಶ್‍ಗೌಡ ಸೇರಿದಂತೆ ಪಕ್ಷದ ಪ್ರಮುಖರು ಸಣ್ಣ ಸಮುದಾಯಗಳನ್ನು ಸೆಳೆಯಲು ರಣತಂತ್ರ ರೂಪಿಸಿದೆ.

ಈ ಮೊದಲು ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೋರಾಟ ನಡೆಯುತ್ತಿತ್ತು. 2018 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಸತ್ಯನಾರಾಯಣ ಶೇ.41ರಷ್ಟು ಮತ ಪಡೆದಿದ್ದರು. ಟಿಬಿ ಜಯಚಂದ್ರ ಶೇ.35ರಷ್ಟು ಮತ ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಎಸ್ ಆರ್ ಗೌಡ ಮೂರನೇ ಸ್ಥಾನ ಪಡೆದಿದ್ದರು. ಶೇ,9 ರಷ್ಟು ಮತ ಸ್ವತಂತ್ರ್ಯ ಅಭ್ಯರ್ಥಿ ಪಾಲಾಗಿತ್ತು.

ಈ ಬಾರಿ ಆಡಳಿತಾರೂಢ ಬಿಜೆಪಿ ಶಿರಾ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಶಿರಾದಲ್ಲಿ ಸಭೆಗಳನ್ನು ನಡೆಸಲಿದ್ದಾರೆ, ಪೇಜ್ ಪ್ರಮುಖ್‍ಅಡಿಯಲ್ಲಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಲು ರೂಟ್ ಮ್ಯಾಪ್ ಸಿದ್ದಗೊಳಿಸಿದ್ದಾರೆ.  ಅಲ್ಲಿ ಪ್ರತಿ ಬೂತ್‍ನಿಂದ ಮತದಾರರ ಪಟ್ಟಿಯ ಒಂದು ಪುಟವನ್ನು ಬಿಜೆಪಿ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಪ್ರತಿ ಪುಟದಲ್ಲಿ 10ರಿಂದ 12 ಕುಟುಂಬಗಳು ಮತದಾರರನ್ನು ಹೊಂದಿದ್ದಾರೆ.

ಮತದಾನದ ದಿನದಂದು ಈ ಮತದಾರರು ಬೂತ್‍ಗೆ ತಲುಪಿ ಬಿಜೆಪಿಗೆ ಮತ ಚಲಾಯಿಸುವುದನ್ನು ಖಚಿತಪಡಿಸಿಕೊಳ್ಳುವುದು ಪೇಜ್ ಪ್ರಮುಖ್ ಅವರ ಕೆಲಸವಾಗಿರುತ್ತದೆ. ಶಿರಾದಲ್ಲಿ ಈ ಬಾರಿ ಬಿಜೆಪಿ ಗೆಲ್ಲುತ್ತದೆ ಎಂದು ಪಕ್ಷದ ಪ್ರಮುಖರೊಬ್ಬರು ಆತ್ಮವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಶಿರಾದಲ್ಲಿ 264 ಬೂತ್ ಗಳಿದ್ದು, ಪ್ರತಿಯೊಂದು ಬೂತ್ ಗೆ ಒಂದರಂತೆ ಒಟ್ಟು 264 ಸಮಿತಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತದಾರರನ್ನು ತಲುಪಲು ವಾಟ್ಸಾಪ್ ಗುಂಪು ರಚಿಸಲಾಗಿದೆ. ಪೇಜ್ ಪ್ರಮುಖ್ ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಈ ಹಿಂದೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಣ್ಣ ಸಮುದಾಯಗಳನ್ನು ಸೆಳೆದಿದ್ದರ ಪರಿಣಾಮ ಗೆಲುವು ಸಾಧಿಸಲು ಕಾರಣವಾಯಿತು. ಈ ಮಾದರಿಯನ್ನೇ ಶಿರಾದಲ್ಲೂ ಅನುಸರಿಸಲಾಗುತ್ತಿದೆ.  ಇದಕ್ಕಾಗಿ ಪಕ್ಷದ ನಿಷ್ಠಾವಂತರ ಒಂದು ತಂಡ ಕಳೆದ ಎರಡು ವಾರದಿಂದ ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಸರ್ಕಾರದ ಸಾಧನೆಗಳು, ಸಮುದಾಯಕ್ಕೆ ನೀಡಿರುವ ಕೊಡುಗೆಗಳು ಸೇರಿದಂತೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ.

ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಮುನ್ನಡೆ ಬಂದಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಗೆಲ್ಲಲು ತನ್ನೆಲ್ಲ ಶಕ್ತಿಯನ್ನು ಬಿಜೆಪಿ ಧಾರೆ ಎರೆಯುತ್ತಿದೆ.

Facebook Comments