ಕಳ್ಳಂಬೆಳ್ಳ ಕೆರೆಯಲ್ಲಿ ಮುಳುಗಿ ಅಕ್ಕ-ತಂಗಿ ಸಾವು..!
ತುಮಕೂರು, ನ.8- ಇಂದು ಬೆಳಗ್ಗೆ ಶಿರಾ ಬಳಿಯ ಕಳ್ಳಂಬೆಳ್ಳ ಕೆರೆಯಲ್ಲಿ ಈಜಾಡಲು ತೆರಳಿದ ಅಕ್ಕ-ತಂಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿಲ್ಪಾ (18), ಸುಶ್ಮಿತಾ (16) ಮೃತಪಟ್ಟ ಸಹೋದರಿಯರು.
ಬೆಂಗಳೂರಿನಿಂದ ಆಗಮಿಸಿದ್ದ ಸಂಬಂ ಸಂಜನಾ ಎಂಬುವವರ ಜತೆ ಕೆರೆ ಬಳಿ ವಾಯು ವಿಹಾರಕ್ಕೆ ತೆರಳಿದ್ದರು. ಈ ನಡುವೆ ಈಜಾಡಲು ನೀರಿಗಿಳಿದಿದ್ದಾರೆ.
ಸಂಜನಾ ಈಜು ಕಲಿಸಲು ಪ್ರಯತ್ನ ನಡೆಸುವ ಸಂದರ್ಭದಲ್ಲೇ ಶಿಲ್ಪಾ ಮತ್ತು ಸುಶ್ಮಿತಾ ನೀರಿನಲ್ಲಿ ಮುಳುಗಿದ್ದಾರೆ. ಸಂಜನಾ ಅವರನ್ನು ರಕ್ಷಿಸಲು ಪ್ರಯತ್ನಿಸಿ ಸಹಾಯಕ್ಕಾಗಿ ಕೆರೆ ಏರಿ ಮೇಲೆ ಬಂದು ಕೂಗಿಕೊಂಡಿದ್ದಾರೆ. ಈ ವೇಳೆ ಯಾರೂ ಅಲ್ಲಿ ಇರದ ಕಾರಣ ದುರಂತ ಸಂಭವಿಸಿದೆ.
ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲವರು ಕೆರೆ ಬಳಿ ಬಂದು ವಿಷಯ ತಿಳಿದು ನೀರಿಗಿಳಿದು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೂ ಅದು ಸಾಧ್ಯವಾಗದ ಕಾರಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸಿ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ಕಳ್ಳಂಬೆಳ್ಳ ಠಾಣೆ ಎಸ್ಐ ಅವಿನಾಶ್, ಸಿಪಿಐ ಶಿವಕುಮಾರ್, ಡಿವೈಎಸ್ಪಿ ಕುಮಾರಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದ್ದು, ಜನತೆ ಕಂಬನಿ ಮಿಡಿದಿದ್ದಾರೆ.