ಉತ್ತಮ ಶಾಸಕರನ್ನು ಆರಿಸಿಕೊಳ್ಳುವ ಅವಕಾಶ ಕಳೆದುಕೊಳ್ಳಬೇಡಿ : ಎಂ.ಶಿವರಾಜ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ಸರಳ ಸಜ್ಜನಿಕೆಯ, ಜನಸಾಮಾನ್ಯರ ಕೈಗೆ ಸಿಗುವ ಶಾಸಕರನ್ನು ಆರಿಸಿಕೊಳ್ಳುವ ಅದೃಷ್ಟ ಮತ್ತೊಮ್ಮೆ ನಿಮ್ಮ ಪಾಲಿಗೆ ಬಂದಿದೆ. ಈ ಅವಕಾಶವನ್ನು ಸದುಪ ಯೋಗಪಡಿಸಿಕೊಳ್ಳಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜ್ ಅವರನ್ನು ಗೆಲ್ಲಿಸಿಕೊಳ್ಳಬೇಕು ಎಂದು ಬಿಬಿಎಂಪಿ ಸದಸ್ಯ ಕೇಶವಮೂರ್ತಿ ಇಂದಿಲ್ಲಿ ಮನವಿ ಮಾಡಿಕೊಂಡರು. ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ವೃಷಭಾವತಿ ನಗರ ವಾರ್ಡ್‍ನಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿವರಾಜ್ ಅವರು ಬಿಬಿಎಂಪಿ ಸದಸ್ಯರಾಗಿ, ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನಗರದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಅಜಾತಶತ್ರು ಎಂದೇ ಗುರುತಿಸಿಕೊಂಡಿರುವ ಇವರು ಎಲ್ಲ 198 ಸದಸ್ಯರಿಗೆ ಹಾಗೂ ನಗರದ ಜನರಿಗೆ ಚಿರಪರಿಚಿತ ವ್ಯಕ್ತಿಯಾಗಿದ್ದಾರೆ. ಮೂರು ಬಾರಿ ಬಿಬಿಎಂಪಿ ಸದಸ್ಯರಾಗಿ ಆರಿಸಿಬಂದಿದ್ದರೂ ಜನಸಾಮಾನ್ಯರೊಂದಿಗೆ ಅವರು ಬೆರೆಯುವ ಪರಿ ಇತರರಿಗೆ ಮಾದರಿಯಾಗಿದೆ. ಇಂತಹ ವ್ಯಕ್ತಿಯನ್ನು ಶಾಸಕರನ್ನಾಗಿ ಆರಿಸಿಕೊಂಡರೆ ನಿಮ್ಮ ಮನೆ ಬಾಗಿಲಿಗೆ ಬಂದು ಸೇವೆ ಮಾಡಲು ಅವರು ಸಿದ್ಧ ಎಂದು ಕೇಶವಮೂರ್ತಿ ಹೇಳಿದರು.

ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿದ ಶಿವರಾಜ್ ಅವರು, ಜನರಿಗೆ ಮೋಸ ಮಾಡುವುದು, ಸುಳ್ಳು ಹೇಳುವುದೇ ಬಿಜೆಪಿ ಪಕ್ಷದ ಸಾಧನೆ. ದೇಶದ ಇಂದಿನ ಆರ್ಥಿಕ ದುಸ್ಥಿತಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಹೊಣೆ ಎಂದು ದೂಷಿಸಿದರು. ಯುಪಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದ ಮನಮೋಹನ್‍ಸಿಂಗ್ ಅವರ ಆಡಳಿತಾವಧಿಯ ಆರ್ಥಿಕ ಸ್ಥಿತಿಗೂ, ಇಂದಿನ ಆರ್ಥಿಕ ಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಹೀಗಾಗಿ ಈ ಬಾರಿ ಕಾಂಗ್ರೆಸ್‍ಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

ಬಿಎಸ್‍ವೈ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲದಂತಾಗಿದೆ. ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಎಂಬಂತಾಗಿದೆ ಸರ್ಕಾರದ ಸ್ಥಿತಿ. ಇಂತಹ ಬೇಜವಾಬ್ದಾರಿ ಸರ್ಕಾರವನ್ನು ಕಿತ್ತೊಗೆಯುವ ಅವಕಾಶ ಮತ್ತೊಮ್ಮೆ ನಿಮಗೆ ಲಭಿಸಿದೆ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಶಿವರಾಜ್ ಕಿವಿಮಾತು ಹೇಳಿದರು.

ನಾನು ಈ ಭಾಗದಲ್ಲೇ ಹುಟ್ಟಿ ಬೆಳೆದವನು. ಇಲ್ಲಿನ ಜನರ ಕಷ್ಟ-ಸುಖದ ಅರಿವಿದೆ. ನಾನು ಶಾಸಕನಾಗಿ ಆರಿಸಿ ಬಂದರೂ ನಿಮ್ಮ ಸೇವೆಗೆ ಸದಾ ಸಿದ್ಧನಾಗಿರುತ್ತೇನೆ ಎಂದು ಭರವಸೆ ನೀಡಿದರು.  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಮಾರ್, ಸ್ಥಳೀಯ ಮುಖಂಡರಾದ ವೀರಣ್ಣ ಮತ್ತಿತರ ಮಹಿಳಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತ ರೊಂದಿಗೆ ವೃಷಭಾವತಿನಗರದಲ್ಲಿ ಮನೆ ಮನೆಗೆ ತೆರಳಿ ಶಿವರಾಜ್ ಮತ ಯಾಚಿಸಿದರು.

Facebook Comments