ಏ.15ಕ್ಕೆ ಸ್ಕೈಬಾರ್ ಪ್ರಕರಣದ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8- ಸ್ಕೈ ಬಾರ್‍ನಲ್ಲಿ ಪೊಲೀಸ್ ಕಾನ್ಸ್‍ಟೆಬಲ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪನ್ನು ನ್ಯಾಯಾಲಯ ಏ.15ಕ್ಕೆ ನಿಗದಿಪಡಿಸಿದೆ. ಪ್ರಕರಣದ ಪ್ರಮುಖ ಆರೋಪಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಹಾಗೂ ಸೋಮಶೇಖರ್‍ಗೌಡ ಇಂದು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ತೀರ್ಪನ್ನು ಸಿಟಿ ಸಿವಿಲ್ ಕೋರ್ಟ್ ಏ.15ಕ್ಕೆ ಕಾಯ್ದಿರಿಸಿದೆ. ಹಾಜರಾತಿ ವಿನಾಯಿತಿ ಕೋರಿ ವಿಜಯಾನಂದ ಕಾಶಪ್ಪನವರ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಸೋಮಶೇಖರ್‍ಗೌಡ ವಿರುದ್ಧ ಬಂಧನ ರಹಿತ ವಾರೆಂಟ್ ಜಾರಿಯಾಗಿತ್ತು. ಸ್ಕೈ ಬಾರ್‍ನಲ್ಲಿ 2014 ಜುಲೈ 1ರ ಮಧ್ಯರಾತ್ರಿಯಲ್ಲಿ ನಡೆದ ಹಲ್ಲೆ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಆಗ ಶಾಸಕರಾಗಿದ್ದ ವಿಜಯಾನಂದ ಕಾಶಪ್ಪನವರ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ವಿಷಯ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಪ್ರಕರಣ ದಾಖಲಾಗಿ ಅಂದಿನಿಂದ ವಿಚಾರಣೆ ನಡೆದು ಇಂದು ಅಂತಿಮ ತೀರ್ಪು ಪ್ರಕಟವಾಗಬೇಕಿತ್ತು. ಪ್ರಕರಣದ ಪ್ರಮುಖ ಆರೋಪಿಗಳು ಗೈರು ಹಾಜರಾಗಿದ್ದು, ತೀರ್ಪನ್ನು ನ್ಯಾಯಾಲಯ ಏ.15ಕ್ಕೆ ಕಾಯ್ದಿರಿಸಿದೆ.

Facebook Comments