ವಿಪಕ್ಷಗಳಿಗೆ ದೇಶದ ಕಾಳಜಿ ಇಲ್ಲ, ವೋಟ್‍ಬ್ಯಾಂಕ್ ರಾಜಕಾರಣ ಮಾಡುತ್ತಿವೆ : ಎಸ್.ಎಲ್.ಭೈರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜ.10-ದೇಶದಲ್ಲಿನ ವಿಪಕ್ಷಗಳವರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರೆ ಗಲಭೆಗಳು ನಡೆಯುತ್ತಿರಲಿಲ್ಲ ಎಂದು ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪ ತಿಳಿಸಿದರು.
ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷಗಳವರು ಕೇವಲ ಧರ್ಮ, ಜಾತಿಗಳ ಬಗ್ಗೆ ಒಡೆದು ಆಳುವ ನೀತಿ ಅನುಸರಿಸುತ್ತಾ ವೋಟ್‍ಬ್ಯಾಂಕ್ ಮಾಡಿಕೊಳ್ಳುತ್ತಿವೆಯೇ ಹೊರತು ದೇಶದ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜವಾಹರಲಾಲ್ ನೆಹರೂ ಅವರು ವೋಟ್ ಬ್ಯಾಂಕ್‍ಗಾಗಿ ಮುಸ್ಲಿಮರ ಓಲೈಕೆ ಮಾಡುತ್ತಿದ್ದರು. ಅದೇ ತಂತ್ರವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅನುಸರಿಸುತ್ತಿವೆ ಎಂದು ಗಂಭೀರ ಆರೋಪ ಮಾಡಿದರು. ಹೊರಗಿನಿಂದ ಮುಸ್ಲಿಮರು ಬರಬಾರದು ಎಂದು ಸಿಎಎನಲ್ಲಿ ಹೇಳಲಾಗಿದೆ. ಅದಕ್ಕಾಗಿ ತೀವ್ರ ಹೋರಾಟ ನಡೆದಿದೆ. ಇದಕ್ಕೆ ಕಾರಣ ವೋಟ್ ಬ್ಯಾಂಕ್ ಎಲ್ಲಿ ಕಡಿಮೆಯಾಗುತ್ತದೋ ಎಂಬ ಉದ್ದೇಶದಿಂದ ವಿಪಕ್ಷಗಳು ಗೊಂದಲವನ್ನು ಸೃಷ್ಟಿಸುತ್ತಿವೆ ಎಂದು ಹೇಳಿದರು.

ದೇಶದಲ್ಲಿರುವ ಯಾವೊಬ್ಬ ಮುಸ್ಲಿಮರಿಗೂ ಸಿಎಎನಿಂದ ತೊಂದರೆಯಾಗುವುದಿಲ್ಲ. ಇದರ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡಿ ಮುಸ್ಲಿಮರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನೋಡಿ ಜನರಿಗೆ ಸ್ಪಷ್ಟನೆ ನೀಡಲು ಪತ್ರಿಕಾಗೋಷ್ಠಿ ನಡೆಸಿದೆ ಎಂದು ಭೈರಪ್ಪ ತಿಳಿಸಿದರು.ಇಷ್ಟೆಲ್ಲ ಗೊಂದಲ, ಗಲಭೆ ನಡೆಯುತ್ತಿದ್ದರೂ ಪ್ರಧಾನಿ ಮೋದಿಯವರು ಸುಮ್ಮನಿದ್ದಾರಲ್ಲ. ಏಕೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿಲ್ಲ ಎಂಬ ವರದಿಗಾರರ ಪ್ರಶ್ನೆಗೆ, ಮೋದಿಯವರೇ ಏಕೆ ಉತ್ತರಿಸಬೇಕು ಎಂದು ಮರುಪ್ರಶ್ನೆ ಮಾಡಿದರು.

ಇಂದಿನ ಮಾಧ್ಯಮಗಳನ್ನು ಮೋದಿ ಅವರು ದೂರ ಇಟ್ಟಿದ್ದಾರೆ. ಹೊರದೇಶದ ಮಾಧ್ಯಮಗಳಿಂದ ಪ್ರಭಾವಿತರಾಗಿ ನಮ್ಮಲ್ಲಿನ ಮಾಧ್ಯಮದವರು ಸ್ಥಳೀಯ ಕಾನೂನು ಕಟ್ಟಳೆ ಪ್ರಶ್ನಿಸುವಂತಹ ವರದಿಗಳನ್ನು ಮಾಡುತ್ತಿದ್ದಾರೆ. ಹಾಗಾಗಿ ಪ್ರಧಾನಿ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿಲ್ಲ ಎಂದು ಹೇಳಿದರು.

ಜೆಎನ್‍ಯು ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭೈರಪ್ಪ, ವಿದ್ಯಾರ್ಥಿಗಳು ಕೇವಲ ತಮ್ಮ ಪಠ್ಯಕ್ಕೆ ಸಂಬಂಧಪಟ್ಟಂತೆ ಪ್ರಶ್ನಿಸಬೇಕೆ ಹೊರತು ರಾಜಕೀಯ ಪ್ರೇರಿತರಾಗಿ ಪ್ರತಿಭಟನೆಗೆ ಇಳಿಯಬಾರದು. ಪ್ರತಿಯೊಬ್ಬ ನಾಗರಿಕನ ಹಣದಿಂದ ವಿಶ್ವವಿದ್ಯಾಲಯಗಳು ನಡೆಯುತ್ತವೆ. ಹಾಗಾಗಿ ಓದಿನ ಕಡೆ ಗಮನಹರಿಸಬೇಕೇ ಹೊರತು ವಿದ್ಯಾರ್ಥಿಗಳು ಅನ್ಯ ವಿಷಯಗಳತ್ತ ಗಮನಹರಿಸಬಾರದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಾಹಿತಿ ಪ್ರದಾನ ಗುರುದತ್ ಉಪಸ್ಥಿತರಿದ್ದರು.

Facebook Comments