ಜ.4ರಂದು ಎಸ್.ಎಂ.ಕೆ ಆತ್ಮಚರಿತ್ರೆ ‘ಸ್ಮೃತಿವಾಹಿನಿ’ ಲೋಕಾರ್ಪಣೆ, ಬಯಲಾಗಲಿವೆ ರಾಜಕೀಯ ರಹಸ್ಯಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.2-ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣರ ರಾಜಕೀಯ ಜೀವನದ ವಿವರಗಳನ್ನು ಒಳಗೊಂಡ ಸ್ಮೃತಿವಾಹಿನಿ ಜೊತೆಗೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಭವಿಷ್ಯ ದರ್ಶನ ಪುಸಕ್ತ ಜ. 4ರಂದು ಬಿಡುಗಡೆ ಆಗಲಿದೆ.  ಪುಸ್ತಕದಲ್ಲಿ ಪ್ರಮುಖ ರಾಜಕೀಯ ರಹಸ್ಯಗಳು ಸ್ಮೃತಿವಾಹಿನಿ ಮೂಲಕ ಬಹಿರಂಗವಾಗುವ ಸಾಧ್ಯತೆಗಳಿವೆ.

ಇದರಲ್ಲಿ ಎಸ್.ಎಂ. ಕೃಷ್ಣರ ಜೀವನ ಹಾಗೂ ಅವರು ಸಿಎಂ ಆಗಿದ್ದಾಗಿನ ಕಾಲಘಟ್ಟದ ಬಗ್ಗೆ ಹಲವು ವಿಷಯಗಳಿವೆ ಎನ್ನಲಾಗಿದೆ. ಈ ಪೈಕಿ, ವರನಟ ಡಾ. ರಾಜಕುಮಾರ್ ಅಪಹರಣದ ಕುರಿತು ಹಲವು ಅಚ್ಚರಿಯ ಮಾಹಿತಿಗಳು ಪುಸ್ತಕದಲ್ಲಿ ಹೊರಬರುವ ಸಾಧ್ಯತೆ ಇದೆ. ಪಾವಗಡ ಪ್ರಕಾಶ್ ರಾವ್ ಕೃತಿಯನ್ನು ರಚಿಸುತ್ತಿದ್ದು, ಸುಮಾರು 700 ಪುಟಗಳಿರಲಿವೆ.

ಎಸ್.ಎಂ. ಕೃಷ್ಣ ಅವರ ಆತ್ಮಕಥನ ಸ್ಮೃತಿ ವಾಹಿನಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಿಡುಗಡೆ ಆಗಲಿದೆ. ಎಲ್ಲ ಪಕ್ಷಗಳ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಅವರ ಆತ್ಮಕತೆಯಲ್ಲಿ ಮತ್ತಷ್ಟು ರಾಜಕೀಯ ನಾಯಕರ ರಹಸ್ಯಗಳು ಅಡಗಿರುವ ಸಾಧ್ಯತೆಗಳಿವೆ. ರಾಜಕೀಯ ಸಂಧ್ಯಾಕಾಲದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವ ಮೂಲಕ ರಾಜಕೀಯ ಸಂಚಲನವನ್ನು ಮಾಜಿ ಸಿಎಂ ಎಸ್.ಕೆ. ಕೃಷ್ಣ ಉಂಟುಮಾಡಿದ್ದರು. ಇದೀಗ ತಮ್ಮ ಆತ್ಮಕಥನ ಬರೆಯುವ ಮೂಲಕ ಮತ್ತೊಮ್ಮೆ ರಾಜಕೀಯ ಸಂಚಲನಕ್ಕೆ ಮುನ್ನುಡಿ ಹಾಡಿದ್ದಾರೆ.

ಎಸ್.ಎಂ.ಕೃಷ್ಣ ತಮ್ಮ ಆತ್ಮಕತೆ ಸ್ಮೃತಿ ವಾಹಿನಿಯಲ್ಲಿ ದೇವೇಗೌಡರ ರಾಜಕಾರಣದ ಬಗ್ಗೆ ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ. ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ಮೊದಲ ಸಲ ದೇವೇಗೌಡರು ಜನತಾ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದ ವಿಚಾರವನ್ನು ಸ್ವತಃ ಮಾಜಿ ಸಿಎಂ ಎಸ್.ಎಂ. ಕೃಷ್ಣ ತಮ್ಮ ಆತ್ಮಕತೆಯಲ್ಲಿ ವಿವರಿಸಿದ್ದಾರೆ.

ಕನ್ನಡದ ವರನಟನನ್ನು ಕಾಡುಗಳ್ಳ ವೀರಪ್ಪನ್‍ನಿಂದ ಸುರಕ್ಷಿತವಾಗಿ ಬಿಡುಗಡೆ ಮಾಡಿದ ಬಗ್ಗೆ ಹಾಗೂ ಈ ವಿಚಾರದಲ್ಲಿ ಗುಪ್ತವಾಗಿ ಉನ್ನತ ಮಟ್ಟದಲ್ಲಿ ನಡೆದಿದೆ ಎನ್ನಲಾದ ಹಲವು ಮಾತುಕತೆಗಳ ಬಗ್ಗೆ ಮಾಜಿ ಸಿಎಂ ಕುರಿತ ಪುಸ್ತಕದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ.  ಕೃಷ್ಣರ 50 ವರ್ಷಗಳ ರಾಜಕೀಯ ಜೀವನ, ಮುಖ್ಯಮಂತ್ರಿಯಾಗಿದ್ದ ಅವಧಿ ಹಾಗೂ ನಟ ರಾಜಕುಮಾರ್ ಅಪಹರಣವಾದ ಒತ್ತಡದ ಅವಧಿಯ ಬಗ್ಗೆ ಹಲವು ಆಸಕ್ತಿಕರ ಮಾಹಿತಿಗಳು ಈ ಪುಸ್ತಕದಲ್ಲಿ ಅಡಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದರಲ್ಲಿ ಕೃಷ್ಣ ಅವರು ತಂದೆ ಮಲ್ಲಯ್ಯನವರೊಂದಿಗಿನ ತಮ್ಮ ಆತ್ಮೀಯತೆ, ಅವರಿಗೂ ಮೈಸೂರು ಮಹಾರಾಜರಿಗೂ ಇದ್ದ ಆತ್ಮೀಯ ಸಂಬಂಧ, ಮಿಜರ್ ಇಸ್ಮಾಯಿಲ್ ಅವರ ಸ್ನೇಹ, ಇವರ ಮನೆಗೆ ಮಹಾತ್ಮ ಗಾಂಧಿಯವರು ಭೇಟಿ ಕೊಟ್ಟ ಸಂದರ್ಭ, ನಂತರ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ತಮ್ಮ ರಾಜಕೀಯ ಬದುಕು ಪ್ರಾರಂಭವಾದ ಬಗೆ, ಚುನಾವಣೆಯಲ್ಲಿ ಗೆದ್ದಿದ್ದು, ಎಚ್‍ಕೆ ವೀರಣ್ಣ ಗೌಡರನ್ನು ಸೋಲಿಸಿ ಸಂಸತ್ ಸೇರಿದ್ದು, ಕಾಂಗ್ರೆಸ್‍ಗೆ ಸೇರಿದ ಸಂದರ್ಭ, ಅಶೋಕ್ ಮೆಹ್ತಾ- ಚಂದ್ರಶೇಖರ್ ಮುಂತಾದವರ ಒಡನಾಟ, ಕಾಂಗ್ರೆಸ್ ಬಿಡಬೇಕಾದ ಹಾಗೂ ರೆಡ್ಡಿ ಕಾಂಗ್ರೆಸ್ ಸೇರಬೇಕಾದ ಸನ್ನಿವೇಶ, ಮತ್ತೆ ಇಂದಿರಾ ಗಾಂಧಿಯವರು ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಂತಾಗ ಅವರ ಬೆಂಬಲಿಗರಾಗಿ ಕಾಂಗ್ರೆಸ್‍ಗೆ ಮರಳಿದ್ದು,

84ನೇ ಇಸವಿಯಲ್ಲಿ ಮಂಡ್ಯದಿಂದ ಚುನಾವಣೆಗೆ ನಿಂತು ಅನಿರೀಕ್ಷಿತ ಸೋಲು ಕಂಡದ್ದು, ಇಂದಿರಾ, ಸೋನಿಯಾ, ರಾಜೀವ್ ಗಾಂಧಿ ಮುಂತಾದ ನಾಯಕರ ಜೊತೆಗಿನ ಒಡನಾಟ – ಭಿನ್ನಾಭಿಪ್ರಾಯ ಹಾಗೂ ಆ ಕಾಲದ ಘಟನಾವಳಿಗಳು ಇವೆಲ್ಲವನ್ನೂ ಬಿಚ್ಚಿಟ್ಟಿದ್ದಾರೆ. ರಾಜ್ಯದ ಮೊದಲ ಸಿಎಂ ಕೆ.ಸಿ.ರೆಡ್ಡಿಯವರಿಂದ ಯಡಿಯೂರಪ್ಪನವರವರೆಗೆ ಅವರ ನೆನಪುಗಳು ಸ್ಮೃತಿವಾಹಿನಿಯಲ್ಲಿ ದಾಖಲಾಗಿವೆ.

ದೇವರಾಜು ಅರಸು ಮುಖ್ಯಮಂತ್ರಿಯಾದಾಗಿನ ಸಂದರ್ಭದ ಪ್ರಮುಖ ಚರ್ಚೆ, ವಿವಾದ, ಘಟನಾವಳಿಗಳು ಇಲ್ಲಿವೆ. ಹೀಗೆ ಇದು ಕರ್ನಾಟಕದ ರಾಜಕೀಯ ಇತಿಹಾಸ ಅಧ್ಯಯನ ಮಾಡುವರಿಗೆ ಆಕರ ಗ್ರಂಥವಾಗುವಂತೆ ರೂಪುಗೊಂಡಿದೆ. ಇದರ ಸಂಪಾದಕ ಮಂಡಳಿಯಲ್ಲಿ ದೇಜಗೌ, ಎಂಎಂ ಕಲಬುರ್ಗಿ, ಎಲ್‍ಎಸ್ ಶೇಷಗಿರಿರಾವ್, ಎಂ.ಎನ್. ವೆಂಕಟಾಚಲಯ್ಯ, ಎಸ್‍ಜಿ ಸಿದ್ದರಾಮಯ್ಯ, ಕೆಆರ್ ಕಮಲೇಶ್ ಮುಂತಾದವರು ಮಹತ್ವದ ಪಾತ್ರ ವಹಿಸಿದ್ದಾರೆ. ಕೃಷ್ಣ ಅವರು ಸಂಸತ್ತಿನಲ್ಲಿ ನಡೆಸಿದ ಚರ್ಚೆಗಳ ಬಗ್ಗೆ ನಾಲ್ಕಾರು ಮಂದಿಯ ಅಧ್ಯಯನ ಮಂಡಳಿ ರಚಿಸಿ ಮಾಹಿತಿ ಸಂಗ್ರಹಿಸಿ ಅಳವಡಿಸಲಾಗಿದೆ. 6 ಪುಸ್ತಕ ಹಾಗೂ 2 ಚಿತ್ರಸಂಪುಟಗಳಾಗಿ ರೂಪುಗೊಂಡಿವೆ.

ಎಸ್.ಎಂ. ಕೃಷ್ಣ ರಾಜ್ಯ ಕಂಡ ಅಪರೂಪದ ರಾಜಕಾರಣಿಯಾಗಿದ್ದು, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಸಂಸತ್ ಸದಸ್ಯರು, ಸ್ಪೀಕರ್, ಕೇಂದ್ರ ಸಚಿವ, ಡೆಪ್ಯುಟಿ ಸಿಎಂ, ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿಯೂ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ವರನಟ ರಾಜಕುಮಾರ್‍ರನ್ನು ವೀರಪ್ಪನ್ ಕಪಿಮುಷ್ಠಿಯಿಂದ ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಹಾಗೂ ಕಾನೂನು, ಸುವ್ಯವಸ್ಥೆ ಕಾಪಾಡಲು ಹಲವು ರಾಜಕಾರಣಿಗಳ ಜತೆ ಮಾಜಿ ಸಿಎಂ ಮಾತುಕತೆ ನಡೆಸಿದ್ದರು. ಅಂದಿನ ಸಿಎಂ ಎಂ. ಕರುಣಾನಿಧಿ ಹಾಗೂ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ನಕ್ಕೀರನ್ ಗೋಪಾಲ್ ಹಾಗೂ ನೆಡುಮಾರನ್ ಸೇರಿ ಹಲವರ ಜತೆ ಎಸ್.ಎಂ.ಕೃಷ್ಣ ಚರ್ಚೆ ನಡೆಸಿದ್ದರು.

ತಮ್ಮ ಸುದೀರ್ಘ ರಾಜಕೀಯದುದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧವೇ ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಒಂದು ಕಾಲದಲ್ಲಿ ಜನತಾ ಪರಿವಾರ ಪಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನವನ್ನು ತೊರೆದು ಕಾಂಗ್ರೆಸ್ ಪಕ್ಷದ ಕದ ತಟ್ಟಿದ್ದರು.

ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದರ ಜತೆಗೆ ರಾಜಕೀಯವಾಗಿ ಚರ್ಚೆಗೆ ಬರದ, ಇದುವರೆಗೂ ರಹಸ್ಯವಾಗಿದ್ದ ಹಲವಾರು ಆಸಕ್ತಿದಾಯಕ ಸಂಗತಿಗಳು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿವೆ. ಎಸ್.ಎಂ.ಕೃಷ್ಣ ಅವರ ಆತ್ಮಕಥೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ವರನಟ ಡಾ. ರಾಜಕುಮಾರ್ ಅಪಹರಣ, ಅವರ ಬಿಡುಗಡೆಗಾಗಿ ಸಿಎಂ ಆಗಿದ್ದಾಗ ನಡೆಸಿದ ಕಸರತ್ತು, ನರಹಂತಕ ವೀರಪ್ಪನ್ ಉಪಟಳಗಳು, ಕಾಂಗ್ರೆಸ್ ಪಕ್ಷದಲ್ಲಿನ ರಾಜಕಾರಣದ ಅನುಭವ, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ ಕಾರಣಗಳು ಹೀಗೆ ಹಲವಾರು ಸಂದರ್ಭಗಳ ಬಗ್ಗೆ ಕುತೂಹಲಕಾರಿ ಅಂಶಗಳು ಪುಸ್ತಕದಲ್ಲಿವೆ ಎಂದು ಹೇಳಲಾಗಿದೆ.

ಜತೆಗೆ ರಾಜಕೀಯ ಜೀವನದ ಅಂತ್ಯದ ವೇಳೆಯಲ್ಲಿ ಕೃಷ್ಣ ಬಿಜೆಪಿಗೆ ಸೇರುವ ನಿರ್ಧಾರದ ಕುರಿತು ಹಲವರಲ್ಲಿ ಆಸಕ್ತಿಯಿದೆ. ಕೃಷ್ಣ ಬಿಜೆಪಿಗೆ ಸೇರಿದ ನಿರ್ಧಾರ ಹಲವು ಆಪ್ತರಲ್ಲಿ ಹಾಗೂ ಕಾಂಗ್ರೆಸ್ ನಾಯಕರಲ್ಲಿ ಅಚ್ಚರಿ ತಂದಿತ್ತು. ಕೃತಿಯಲ್ಲಿ ಇನ್ನೇನಿರಲಿದೆ?: ಕೃಷ್ಣ ಅವರ ಬಾಲ್ಯ, ವಿದ್ಯಾಭ್ಯಾಸ, ರಾಜಕೀಯ ಜೀವನದ ಪ್ರಮುಖ ಘಟನೆಗಳು, ಸರ್ಕಾರ ನಡೆಸುವ ಸಂದರ್ಭದಲ್ಲಿ ಎದುರಾದ ಮುಖ್ಯ ಸವಾಲುಗಳು, ಕಾವೇರಿ ವಿವಾದ ವಿಚಾರವಾಗಿ ನಡೆದ ಘಟನೆಗಳು, ಚುನಾವಣಾ ರಾಜಕೀಯದ ಏಳು-ಬೀಳುಗಳನ್ನು ಒಳಗೊಂಡಿವೆ.

# ಎಸ್‍ಎಂಕೆ ರಾಜಕೀಯ ಹಾದಿ:
* 1932ರಲ್ಲಿ ಮಂಡ್ಯ ಜಿಲ್ಲೆ ಸೋಮನಹಳ್ಳಿಯಲ್ಲಿ ಜನನ, * ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ, * ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ, * ಅಮೆರಿಕದ ಸದರ್ನ್ ಮೆಥಡಿಸ್ಟ್ ವಿವಿಯಲ್ಲಿ ಕಾನೂನು ಅಭ್ಯಾಸ, * ಜಾರ್ಜ್ ವಾಷಿಂಗ್ಟನ್ ವಿವಿಯಲ್ಲಿ ಫುಲ್‍ಬ್ರೈಟ್ ವಿದ್ಯಾರ್ಥಿಯಾಗಿದ್ದರು, *ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ, * 1962ರಲ್ಲಿ ವಿಧಾನಸಭೆಗೆ ಮೊದಲ ಬಾರಿ ಆಯ್ಕೆ, * 1965ರಲ್ಲಿ ಭಾರತದ ಪ್ರತಿನಿಧಿಯಾಗಿ ಕಾಮನ್‍ವಲ್ತ್ ಒಕ್ಕೂಟದಲ್ಲಿ ಭಾಗಿ, * 1968ರಲ್ಲಿ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ, * 1971ರಲ್ಲಿ ಮಂಡ್ಯದಿಂದಲೇ ಮರು ಆಯ್ಕೆಯಾದರು. * 1972ರಲ್ಲಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದರು. * 1977ರಲ್ಲಿ ಕರ್ನಾಟಕದ ವಿಧಾನ ಪರಿಷತ್ತಿಗೆ ಚುನಾಯಿತರಾದರು. * 1977ರಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಆಯ್ಕೆಯಾದರು. * 1983ರಲ್ಲೂ ಉದ್ಯಮ ಖಾತೆ ಸಚಿವರಾದರು. * 1984 ರಲ್ಲಿ ವಿತ್ತ ಖಾತೆಯ ಸಚಿವರಾಗಿದ್ದ ಎಸ್.ಎಂ.ಕೃಷ್ಣ * 1989 ರಿಂದ 1992ರವರೆಗೆ ವಿಧಾನಸಭೆಯ ಸ್ಪೀಕರ್ ಆದರು. * 1992 ರಿಂದ 1994ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಯಾಗಿ ನೇಮಕ. * 1996 ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಎಸ್.ಎಂ.ಕೃಷ್ಣ* 1999 ರಲ್ಲಿ ಕರ್ನಾಟಕದ 16ನೇ ಮುಖ್ಯಮಂತ್ರಿಯಾಗಿ ಸೇವೆ * 1999ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. * 2004ರಲ್ಲಿ ಮುಖ್ಯಮಂತ್ರಿ ಅವಧಿ ಮುಕ್ತಾಯ. * 2004- 2008ರವರೆಗೆ ಮಹಾರಾಷ್ಟ್ರ ರಾಜ್ಯಪಾಲರಾಗಿ ಆಯ್ಕೆಯಾದರು. * 2008-2014ರವರೆಗೆ ಕರ್ನಾಟಕದ ರಾಜ್ಯಸಭಾ ಸದಸ್ಯರು * 2009 – 2012ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದರು.

Facebook Comments