ದಸರಾ ಉದ್ಘಾಟನೆ ನನ್ನ ಬಾಳಿನ ಸುದೈವ : ಎಸ್.ಎಂ.ಕೃಷ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.30- ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಮಂತ್ರಿಸಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಧನ್ಯವಾದ ತಿಳಿಸಿದ್ದಾರೆ. ಯದುವಂಶದ ಮಹಾರಾಜರುಗಳು ನಾಡಿನ ಸಾಂಸ್ಕøತಿಕ ಹಿರಿಮೆಯನ್ನು ವಿಶ್ವಕ್ಕೆ ಪಸರಿಸಲು ಆ ಮೂಲಕ ನಾಡಿನ ಹಿರಿಮೆಯನ್ನು ಎತ್ತಿ ಹಿಡಿಯಲು ಪ್ರಾರಂಭಿಸಿದ ದಸರಾ ಸರಿಸುಮಾರು 400 ವರ್ಷಗಳನ್ನು ಕಳೆದರೂ ತನ್ನ ವೈಭವವನ್ನು ಕಳೆದುಕೊಂಡಿಲ್ಲ.

ಪ್ರಥಮವಾಗಿ ವಿಜಯನಗರದ ಸಾಮ್ರಾಟ ಕೃಷ್ಣದೇವರಾಯರ ಕಾಲದಲ್ಲಿ ಪ್ರಾರಂಭಗೊಂಡ ದಸರಾ ಶ್ರೀ ರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ಸಾಮ್ರಾಜ್ಯಕ್ಕೆ ವಿಸ್ತರಿಸಿ ಇಂದಿಗೂ ನಾಡಿನ ಸಾಂಸ್ಕøತಿಕ ಪರಂಪರೆಯನ್ನು ಅನಾವರಣಗೊಳಿಸುತ್ತಿದೆ. ರಾಜಪ್ರಭುತ್ವದ ನಂತರ ಬಂದ ಪ್ರಜಾ ಸರ್ಕಾರಗಳು ದಸರಾ ಆಚರಣೆಗೆ ಕಿಂಚಿತ್ತೂ ಚ್ಯುತಿ ಬರದ ಹಾಗೆ ಆಚರಿಸುತ್ತ ಬಂದಿರುವುದು ನಾಡಿನ ಹಿರಿಮೆಯನ್ನು ಎತ್ತಿ ಹಿಡಿದಿದೆ.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರ ದೃಷ್ಟಿಯಿಂದ ಪ್ರತಿಷ್ಠಾಪನೆಗೊಂಡ ರೈತಾಪಿ ವರ್ಗವೆ ಅಕವಾಗಿರುವ ಮಂಡ್ಯ ಜಿಲ್ಲಾಯಿಂದ ಬಂದ ನಾನು ಈ ಬಾರಿ ದಸರಾ ಉದ್ಘಾಟಿಸುತ್ತಿರುವುದು ನನ್ನ ಬಾಳಿನ ಸುದೈವ ಎಂದು ಹೇಳಿದ್ದಾರೆ.

ತಾಯಿ ಚಾಮುಂಡೇಶ್ವರಿ ಮನುಕುಲಕ್ಕೆ ಬಂದಿರುವ ಕೊರೊನಾ ಮಹಾಮಾರಿಯಿಂದ ಮುಕ್ತಿಗೊಳಿಸಿ ನಾಡು ತಮ್ಮ ನೇತೃತ್ವದಲ್ಲಿ ಮತ್ತೆ ಅಭಿವೃದ್ಧಿಯೆಡೆಗೆ ಮುನ್ನಡೆಯಲಿ ಎಂದು ಎಸ್.ಎಂ.ಕೃಷ್ಣ ಆಶಿಸಿದ್ದಾರೆ.

ಎಸ್.ಟಿ.ಸೋಮಶೇಖರ್‍ಗೆ ಧನ್ಯವಾದ: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರನ್ನಾಗಿ ರಾಜ್ಯ ಸರ್ಕಾರ ಅವಕಾಶ ನೀಡಿದ್ದಕ್ಕೆ ಸಹಕಾರ ಸಚಿವರು ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೂ ಕೂಡ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಧನ್ಯವಾದ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ಧ ನಾಡ ದಸರಾಗೆ ನನ್ನನ್ನು ಆಹ್ವಾನಿಸಿರುವ ತಮ್ಮ ಹೃದಯ ವೈಶಾಲ್ಯತೆಗೆ ನಾನು ಆಭಾರಿಯಾಗಿದ್ದೇನೆ. ನಾಡಿದ ದಸರಾ ಯಶಸ್ವಿಯಾಗಿ ಜರುಗಿ ಜನರ ಸಂಕಷ್ಟಗಳು ದೂರವಾಗಿ ಸಾಂಸ್ಕøತಿಕ ಜಾತ್ರೆ ಯಶಸ್ಸು ಕಾಣಲು ತಾಯಿ ಚಾಮುಂಡೇಶ್ವರಿ ತಮಗೆ ಶಕ್ತಿ ನೀಡಲಿ ಎಂದು ಎಸ್.ಎಂ.ಕೃಷ್ಣ ಆಶಿಸಿದ್ದಾರೆ.

Facebook Comments