ಸೊರಗುತ್ತಿವೆ ಕೈಗಾರಿಕೆಗಳು,  ತಕ್ಷಣ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಅಪಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.7- ದೇಶದ ಆರ್ಥಿಕತೆಯ ಬೆನ್ನೆಲೆಬೆಂದೇ ಬಿಂಬಿಸಲಾಗಿರುವ ಕೈಗಾರಿಕೆಗಳು ಹಿಂದೆಂದೂ ಇಲ್ಲದಂತಹ ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದ ಖಜಾನೆ ತುಂಬಿಸುವ ಬಹು ದೊಡ್ಡ ವಲಯವೆಂದೇ ಗುರುತಿಸಲಾಗಿರುವ ಕೈಗಾರಿಕೆಗಳ ಪುನಃಶ್ಚೇತನಕ್ಕೆ ಹಲವಾರು ಮಾರ್ಗೋಪಾಯಗಳನ್ನು ಹುಡುಕಿದರೂ ಸಹ ಬೆಳವಣಿಗೆಯ ಹಾದಿಗೆ ತಲುಪುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಒಂದು ಕಾಲದಲ್ಲಿ ಕರ್ನಾಟಕ ರಾಜ್ಯ ಹೂಡಿಕೆಯ ಸ್ವರ್ಗವೆಂದೇ ಹೇಳಲಾಗಿತ್ತು. ಹಲವಾರು ಬಹು ರಾಷ್ಟ್ರೀಯ ಕಂಪೆನಿಗಳು, ದೇಶೀಯ ಕಂಪೆನಿಗಳು ಇಲ್ಲಿ ನೆಲೆ ಕಂಡುಕೊಂಡಿತ್ತು. ಲಕ್ಷಾಂತರ ಉದ್ಯೋಗಿಗಳನ್ನು ನೀಡಿತ್ತು. ಆದರೆ ಇಂದಿನ ಪರಿಸ್ಥಿತಿ ನೋಡಿದರೆ ಸರಿ ಸುಮಾರು ಎರಡು ಕೋಟಿಗೂ ಹೆಚ್ಚು ಕಾರ್ಮಿಕರು ಬೀದಿಗೆ ಬೀಳುವ ಸಾಧ್ಯತೆ ಇದೆ.

ಇದಕ್ಕೆ ಪ್ರಮುಖವಾಗಿ ಸರ್ಕಾರ ರೂಪಿಸುವ ನೀತಿಗಳು ಹಾಗೂ ಅಧಿಕಾರಿಶಾಹಿಗಳ ಅಸಮರ್ಪಕ ಸ್ಪಂದನೆ ಪ್ರಮುಖ ಕಾರಣವಾಗಿದೆ ಎಂದು ಕೈಗಾರಿಕೋದ್ಯಮಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಇಡೀ ದೇಶದ ರ್ಯಾಂಕಿಂಗ್‍ನಲ್ಲಿ ಕರ್ನಾಟಕ 17ನೆ ಸ್ಥಾನಕ್ಕೆ ತಲುಪಿರುವುದು ಕೈಗಾರಿಕಾ ವಲಯದಲ್ಲಿ ಭಾರೀ ಆತಂಕ ಮೂಡಿಸಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು.

ಏಕಗವಾಕ್ಷಿ ಪದ್ದತಿ ಯನ್ನು ಬಲಪಡಿಸಬೇಕು. ಕೈಗಾರಿಕೆಗಳಿಗೆ ಮಂಜೂರಾತಿ ನೀಡುವ ಉನ್ನತಾಧಿಕಾರಿ ಸಮಿತಿಯ ಸಭೆ ಪ್ರತಿ ಆರು ತಿಂಗಳಿಗೊಮ್ಮೆ ಕಾಲ ಮಿತಿಯಲ್ಲಿ ನಡೆಯಬೇಕು. ಮೂಲ ಸೌಲಭ್ಯಗಳ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕಾರ್ಮಿಕ ಇಲಾಖೆಗಳ ಕಿರುಕುಳ ತಪ್ಪಿಸಬೇಕು.

ಕೈಗಾರಿಕಾ ನೀತಿಯಲ್ಲಿರುವ ಉದ್ಯಮ ಸ್ನೇಹಿ ಅಂಶಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಹಾಗಾದಾಗ ಮಾತ್ರ ಬಂಡವಾಳ ಹೂಡಿಕೆಯಲ್ಲಿ ರಾಜ್ಯದ ಪರಿಸ್ಥಿತಿ ಮತ್ತಷ್ಟು ಸುಧಾರಣೆಯಾಗಬೇಕೆಂಬ ಬೇಡಿಕೆ ವ್ಯಕ್ತವಾಗುತ್ತಿದೆ. ಕೈಗಾರಿಕಾ ಉದ್ದೇಶಕ್ಕೆ ಭೂಮಿ ಹಂಚಿಕೆಯೂ ಸರಳವಾಗಿಲ್ಲ.

ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕೈಗಾರಿಕೆಗಳಿಗೆ ನೀಡುವ ಭೂಮಿಯ ಬೆಲೆ ಹಾಗೂ ಗುತ್ತಿಗೆ ದರ ತುಂಬಾ ಕಡಿಮೆ ಇದೆ ಈ ಎಲ್ಲ ಕಾರಣಗಳಿಂದಾಗಿ ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ದಿನೇ ದಿನೇ ಕುಂಠಿತಗೊಳ್ಳುತ್ತಿದೆ. ಏಷ್ಯಾದ ಎರಡನೇ ಅತಿ ದೊಡ್ಡ ಪೀಣ್ಯ ಕೈಗಾರಿಕಾ ಪ್ರದೇಶ ಸರ್ಕಾರಕ್ಕೆ ಹೆಚ್ಚು ತೆರಿಗೆಯನ್ನು ಪಾವತಿಸುತ್ತಿದ್ದರು. ಮೂಲ ಸೌಕರ್ಯಗಳಿಂದ ಸೊರಗಿ ಹೋಗಿದೆ.

ಕೈಗಾರಿಕಾ ಉದ್ಯಮಿಗಳು ಈ ಕಾರಣದಿಂದ ಬಂಡವಾಳ ಹೂಡಲು ಹಿಂಜರಿಯುತ್ತಿದ್ದು ಕೈಗಾರಿಕಾ ಬೆಳವಣಿಗೆಗೆ ದೊಡ್ಡ ತೊಡಕಾಗಿದೆ.  ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಪರಿಣಿತ ಕಾರ್ಮಿಕರನ್ನು ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದ್ದು ನೀರು ಹಾಗೂ ವಿದ್ಯುತ್ ಪೂರೈಕೆಗೂ ಗಮನ ಹರಿಸುತ್ತಿಲ್ಲ.

ರಾಜ್ಯದಲ್ಲಿ ಹೈಡ್ರಾಲಿಕ್ ಸೋಲಾರ್ ಸೇರಿದಂತೆ ಸಾಕಷ್ಟು ವಿದ್ಯುತ್ ಶಕ್ತಿ ಲಭ್ಯವಿದ್ದರೂ ಕೈಗಾರಿಕೆಗಳಿಗೆ ಪೂರೈಸುವಲ್ಲಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣವಾಗಿ ಸೋತಿವೆ. ಇವೆಲ್ಲಾ ಲಕ್ಷಣಗಳು ಇರುವುದರಿಂದ ಈಗ ಭೂ ಸುಧಾರಣೆ ಕಾಯ್ದೆಯೂ ಕೂಡ ಎಷ್ಟು ಪೂರಕವಾಗಲಿದೆ ಎಂದು ಕಾಲವೇ ನಿರ್ಧರಿಸಬೇಕಿದೆ. ಎಂಎಸ್‍ಎಂಇಗಳಲ್ಲಿ ಸುಮಾರು ಆರೂವರೆ ಲಕ್ಷಕ್ಕೂ ಹೆಚ್ಚು ಉದ್ಯಮಿಗಳಿದ್ದರೆ ಸಣ್ಣ ಕೈಗಾರಿಕೆಗಳು ಸರಿ ಸುಮಾರು ಒಂದು ಕೋಟಿಗೂ ಹೆಚ್ಚಿದೆ.

ಖಾಸಗಿ ಭಾರೀ ಕೈಗಾರಿಕೆಗಳ ಪಟ್ಟಿಗೆ ಬಂದರೆ ಸಾವಿರಕ್ಕೂ ಹೆಚ್ಚು ಮುಟ್ಟುತ್ತದೆ. ಇಲ್ಲಿ ಅಸಂಘಟಿತ ಕಾರ್ಮಿಕ ವಲಯವೂ ಕೂಡ ಹೆಚ್ಚಾಗಿರುತ್ತವೆ. ಕೊರೊನಾ ಸಂಕಷ್ಟದಿಂದ ಭಾರೀ ಹೊಡೆತಕ್ಕೆ ಬಿದ್ದಿರುವುದು ಕೈಗಾರಿಕಾ ಉತ್ಪನ್ನಗಳು, ಸೇವಾ ಕ್ಷೇತ್ರಗಳು ಮತ್ತು ಆಹಾರ ಉತ್ಪನ್ನಗಳ ವಲಯ ಭಾರೀ ತೊಂದರೆಗೆ ಒಳಗಾಗಿದೆ.

# ಕೈಗಾರಿಕಾ ನೀತಿ ವಿಳಂಬದಿಂದ ಹಿನ್ನಡೆ
ಬೆಂಗಳೂರು, ಸೆ.7- ಕರ್ನಾಟಕದಲ್ಲಿ ವಿದ್ಯುತ್ ಪೂರೈಕೆ ಸರಿಯಿರಲಿಲ್ಲ, ಭೂಮಿ ಪಡೆಯಲು ಸಾಕಷ್ಟು ಸಮಸ್ಯೆಗಳಿದ್ದವು. ಕೈಗಾರಿಕಾ ನೀತಿ ರೂಪಿಸಲು ವಿಳಂಬವಾಗಿ ದ್ದರಿಂದ ಕೈಗಾರಿಕಾ ರ್ಯಾಂಕಿಂಗ್‍ನಲ್ಲಿ ಕರ್ನಾಟಕಕ್ಕೆ ಹಿನ್ನೆಡೆಯಾಗಿದೆ ಎಂದು ಎಫ್‍ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ದನ್ ಹೇಳಿದ್ದಾರೆ.

ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಈ ಮೊದಲು ಕರ್ನಾಟಕ 8ನೆ ಸ್ಥಾನದಲ್ಲಿತ್ತು. ಈಗ 17ನೇ ಸ್ಥಾನಕ್ಕೆ ಕುಸಿದಿದೆ. ರ್ಯಾಂಕಿಂಗ್ ಸಮೀಕ್ಷೆ ನಡೆದಿದ್ದು, 2019ರಲ್ಲಿ. ಆ ವೇಳೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಇತ್ತು. ಅಧಿಕಾರದಲ್ಲಿದ್ದ ಸರ್ಕಾರವನ್ನು ಪತನಗೊಳಿಸುವ ಮತ್ತು ಹೊಸ ಸರ್ಕಾರ ರಚಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದವು.

ಆಗ ನಡೆಸಿದ ಸಮೀಕ್ಷೆಯಲ್ಲಿ ಸಹಜವಾಗಿ ರಾಜ್ಯಕ್ಕೆ ಹಿನ್ನೆಡೆಯಾಗಿದೆ ಈಗ ಸಮೀಕ್ಷೆ ನಡೆದರೆ ಕನಿಷ್ಠ 10ರ ರ್ಯಾಂಕಿಂಗ್ ಒಳಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದರು. ಈಗಿನ ಸಂದರ್ಭದಲ್ಲಿ ಕೈಗಾರಿಕೆ ಉತ್ತೇಜನಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79 ಎ, ಬಿ,ಸಿಗೆ ತಿದ್ದುಪಡಿ ತಂದು ಭೂಮಿ ಪಡೆಯುವ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಲಾಗಿದೆ.

ಹೊಸ ಕೈಗಾರಿಕಾ ನೀತಿಯನ್ನು ರೂಪಿಸಲಾಗಿದೆ. ಹೆಚ್ಚಿನ ವಿದ್ಯುತ್ ಉತ್ಪಾದನೆಯಾಗಿದ್ದು ಕೊರತೆ ನೀಗಿಸಲಾಗಿದೆ. ಈ ಸಂದರ್ಭದಲ್ಲಿ ಸಮೀಕ್ಷೆ ನಡೆಸಿದರೆ ರಾಜ್ಯಕ್ಕೆ ಒಳ್ಳೆಯ ರ್ಯಾಂಕಿಂಗ್ ಬರಬಹುದು ಎಂದು ಸಿ.ಆರ್.ಜನಾರ್ದನ್ ತಿಳಿಸಿದ್ದಾರೆ.

# ಕೈಗಾರಿಕಾ ಪ್ರಗತಿಗೆ ಪೂರಕ ವಾತಾವರಣವಿಲ್ಲ
ಬೆಂಗಳೂರು, ಸೆ.7- ಸರ್ಕಾರಗಳ ತಪ್ಪು ನಿರ್ಧಾರಗಳಿಂದಾಗಿ ಕರ್ನಾಟಕ ದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಗಳು ಸಂಕಷ್ಟಕ್ಕೆ ಸಿಲುಕಿವೆ. ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ, ಮುಂದೆ ಭಾರಿ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಎದುರಾಗ ಬಹುದು ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಅರಸಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೋನಾ ಸಂಕಷ್ಟದ ನಡುವೆ ಕೈಗಾರಿಕೆಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ನಮ್ಮ ಸಂಘದ ವ್ಯಾಪ್ತಿಗೆ ಬರುವ ಸುಮಾರು ಆರೂವರೆ ಲಕ್ಷಕ್ಕೂ ಸಣ್ಣ ಕೈಗಾರಿಕೆಗಳು ಸ್ಥಗಿತಗೊಳ್ಳುವ ಹಂತ ತಲುಪುವ ಮುನ್ನ ಸರ್ಕಾರ ಕಣ್ಣು ತೆರೆಯಬೇಕು. ಪ್ರಸ್ತುತ ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಿದೆ. ಅದು ಫಲ ನೀಡುವ ಕಾಲ ದೂರವಿದೆ.

ಆದರೆ, ಈಗಲೇ ಉದ್ಯಮಿಗಳ ನೆರವಿಗೆ ಸರ್ಕಾರ ಬರದಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ. ಅಧಿಕಾರಿ ವಲಯದಿಂದ ನಮಗಾಗುವ ಕಿರುಕುಳಗಳು ಅಷ್ಟಿಷ್ಟಲ್ಲ. ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆಗಳನ್ನು ನಡೆಸುವುದಿಲ್ಲ. ಹೊಸ ಉದ್ಯಮ ಆರಂಭಿಸಲು ಬರುವವರಿಗೆ ಆದ್ಯತೆ ನೀಡುವ ಏಕಗವಾಕ್ಷಿ ಮಂಜೂರಾತಿ ನೀಡುವ ಸಭೆಗಳು ನಡೆದು ಹಲವು ವರ್ಷಗಳು ಕಳೆದಿವೆ.

ಹೀಗಿರುವಾಗ ಕೈಗಾರಿಕೆಗಳನ್ನು ಹೇಗೆ ನಡೆಸಬೇಕು ಎಂಬುದೇ ದೊಡ್ಡ ಸವಾಲಾಗಿದೆ. ನಮ್ಮನ್ನು ನಂಬಿರುವ ಉದ್ಯೋಗಿಗಳು ಹಾಗೂ ಅವರ ಕುಟುಂಬ ನೆನೆಸಿಕೊಂಡರೆ, ಈಗಿನ ಪರಿಸ್ಥಿತಿ ಡಂಗುಬಡಿಸುತ್ತದೆ ಎಂದು ಹೇಳಿದರು.

# ಅಸಮರ್ಪಕ ನೀತಿಯಿಂದಲೇ ಕೈಗಾರಿಕಾ ಕ್ಷೇತ್ರ ಕುಸಿತ
ಬೆಂಗಳೂರು,ಸೆ.7- ಕರ್ನಾಟಕ ರಾಜ್ಯ ಕೈಗಾರಿಕಾ ಬೆಳವಣಿಗೆಯಲ್ಲಿ ಹಿಂದುಳಿದ 17ನೇ ಸ್ಥಾನಕ್ಕೆ ಕುಸಿದಿರುವುದಕ್ಕೆ ಸರ್ಕಾರದ ಅಸಮರ್ಪಕ ಕೈಗಾರಿಕಾ ನೀತಿ ಕಾರಣ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ ಆರೋಪಿಸಿದ್ದಾರೆ.  ರಾಜ್ಯದಲ್ಲಿ ಉದ್ಯಮಿಗಳು ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಹರಸಾಹಸ ಪಡಬೇಕಾದ ವಾತಾವರಣವಿದೆ.

ಕೈಗಾರಿಕೆಯನ್ನು ಪ್ರಾರಂಭಿಸಬೇಕಾದರೆ ಸುಮಾರು 17 ಪರವಾನಗಿಗಳನ್ನು ಪಡೆಯುವ ದುಸ್ಥಿತಿ ಇದೆ. ಸುಮಾರು 2 ವರ್ಷ ಅಲೆದರೂ ಕೈಗಾರಿಕೆ ಸ್ಥಾಪನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೆಐಎಡಿಬಿ ಹಾಗೂ ಕೆಎಸ್‍ಎಸ್‍ಐಡಿಸಿ ಉದ್ಯಮದ ಬೆಳವಣಿಗೆಗೆ ಪೂರಕವಾದ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸುತ್ತಿಲ್ಲ. ಅಭಿವೃದ್ಧಿ ಪಡಿಸಿರುವ ಕೈಗಾರಿಕಾ ಪ್ರದೇಶಗಳು ವಿಪರೀತ ದುಬಾರಿಯಾಗಿದ್ದು ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತಿಲ್ಲ ಎಂದರು.

Facebook Comments