ರೈತರಿಗೆ ಸ್ಮಾಟ್ ಪ್ರೀಪೈಡ್ ಮೀಟರ್ ಅಳವಡಿಸುವುದಿಲ್ಲ: ಸಚಿವ ಸುನಿಲ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.20- ಕೇಂದ್ರ ಸರ್ಕಾರದ ಸೂಚನೆಯಂತೆ ಸದ್ಯಕ್ಕೆ ಮೂರು ಹಂತದಲ್ಲಿ ಸ್ಮಾಟ್ ಹಾಗೂ ಪ್ರೀಪೈಡ್ ಮೀಟರ್ ಗಳನ್ನೂ ವಿದ್ಯುತ್ ಬಳಕೆಯ ಗ್ರಾಹಕರಿಗೆ ಅಳವಡಿಸಲಾಗುತ್ತದೆ, ರೈತರಿಗೆ ಈ ಮೀಟರ್‍ಗಳನ್ನು ಅಳವಡಿಸುವುದಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.

ವಿಧಾನ ಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‍ನ ಹಿರಿಯ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶೇ.15ರಷ್ಟು ಗ್ರಾಹಕರಿಗೆ ಪ್ರಿಪೈಡ್ ಮತ್ತು ಸ್ಮಾರ್ಟ್ ಮೀಟರ್ ಅಳವಡಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಆರಂಭದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸ್ಮಾರ್ಟ್ ಹಾಗೂ ಪ್ರಿಪೈಡ್ ಮೀಟರ್ ಅಳವಡಿಸಲು ನಿರ್ಧರಿಸಲಾಗಿದೆ.

ಸರ್ಕಾರಿ ಕಚೇರಿಗಳಿಂದ ಎಸ್ಕಾಂಗಳಿಗೆ 5792 ಕೋಟಿ ರೂಪಾಯಿ ಬಾಕಿ ಬರಬೇಕಿದೆ. ನಂತರ ಹೊಸ ಕಟ್ಟಡಗಳಿಗೆ ಹಾಗೂ ರಾಜ್ಯದಲ್ಲಿ 27 ಅಮೃತ್ ಸಿಟಿಗಳಲ್ಲಿ ಸ್ಮಾರ್ಟ್ ಹಾಗೂ ಪ್ರಿಪೈಡ್ ಮೀಟರ್‍ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ನಷ್ಟ ಉಂಟಾಗುತ್ತಿರುವ ಕಡೆ ಸ್ಮಾರ್ಟ್ ಮೀಟರ್ ಅಳವಡಿಸಲು ಸೂಚನೆ ನೀಡಿದೆ. ಮೀಟರ್ ಅಳವಡಿಸಲು ದರ ನಿಗದಿ ಮಾಡಿಲ್ಲ, ಗ್ರಾಹಕರ ಮೇಲೆ ಹೊರೆ ಹಾಕುವುದಿಲ್ಲ, ಮೀಟರ್ ಅಳವಡಿಕೆ ವೆಚ್ಚವನ್ನು ಎಸ್ಕಾಂಗಳೇ ಭರಿಸುತ್ತವೆ. ಕುಟೀರ ಮತ್ತು ನಿರಂತರ ಜ್ಯೋತಿಗೆ ಸ್ಮಾರ್ಟ್ ಮೀಟರ್ ಅಳವಡಿಸುವುದಿಲ್ಲ ಎಂದು ಹೇಳಿದರು.

ಉಪಪ್ರಶ್ನೆ ಕೇಳಿದ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ ಅವರು, ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮುಖ್ಯಕಾರ್ಯದರ್ಶಿ ಅವರು ಸ್ಮಾರ್ಟ್ ಮೀಟರ್ ಅಳವಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾಗಿ ಇಲ್ಲಿಯೆ ಉತ್ತರ ನೀಡಿದ್ದರು. ಈಗ ಅಳವಡಿಕೆ ಮಾಡುತ್ತೇವೆ ಎಂದು ಸಚಿವರು ಹೇಳುತ್ತಿದ್ದಾರೆ ಎಂದಾಗ, ಸಚಿವ ಸುನೀಲ್ ಕುಮಾರ್ ಅವರು, ಎಲ್ಲಾ ಗ್ರಾಹಕರಿಗೆ ಶೇ.25ರೊಳಗೆ ಅಳವಡಿಸಿ ಎಂದು ಹೇಳಿದೆ. ಅದು ಸಾಧ್ಯವಿಲ್ಲ ಎಂದು ಆಕ್ಷೇಪಣೆ ಸಲ್ಲಿಸಿದ್ದೇವೆ.

ಬೆಂಗಳೂರಿನಲ್ಲಿ ಒಂದು ಲಕ್ಷ ಮೀಟರ್‍ಗಳನ್ನು ಪ್ರಾಯೋಗಿಕವಾಗಿ ಅಳವಡಿಸಿದ್ದೇವೆ. ಅದರ ಪರಿಣಾಮ ಆಧರಿಸಿ ಕಡಿಮೆ ನಷ್ಟ ಇರುವ ಜಾಗಗಳಲ್ಲಿ ಹೊಸ ಮೀಟರ್‍ಗಳನ್ನು ಅಳವಡಿಸಲು ಪರಿಶೀಲಿಸುತ್ತಿದ್ದೇವೆ ಎಂದರು. ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು ವಿದ್ಯುತ್ ಸಚಿವ ವಿ.ಸುನೀಲ್ ಕುಮಾರ್, ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಲೋಡ್‍ಶೆಡ್ಡಿಂಗ್ ಜಾರಿ ಮಾಡುತ್ತಿಲ್ಲ ಎಂದರು.

ಬೆಂಗಳೂರು ನಗರದಲ್ಲಿ ಕಳೆದ ಮಾರ್ಚ್‍ನಲ್ಲಿ 2748 ಮೆಗಾವ್ಯಾಟ್ ಗರಿಷ್ಠ ಬೇಡಿಕೆ ಉಂಟಾಗಿತ್ತು. ತಾಂತ್ರಿಕ ಕೊರತೆಯಿಂದ ಮೂರು ದಿನ ಲೋಡ್ ಶಡ್ಡಿಂಗ್ ಜಾರಿಗೊಳಿಸಲಾಗಿದೆ. ಆಗ ಕೊರತೆಯಾದ ವಿದ್ಯುತ್ ಅನ್ನು ಯೂನಿಟ್‍ಗೆ 4.86 ರೂ.ನಂತೆ 4.8 ಮಿಲಿನಯನ್ ಯುನಿಟ್ ಖರೀದಿ ಮಾಡಲಾಗಿದೆ.

2018ರ ನಂತರ ಉತ್ಪಾದನೆಯಲ್ಲಿ ನಮ್ಮ ರಾಜ್ಯ ಸ್ವಾವಲಂಬನೆ ಸಾಧಿಸಿದೆ, ವಿದ್ಯುತ್ ಖರೀದಿಯ ಅವಶ್ಯತೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು. ಶ್ರೀನಿವಾಸ ಮಾನೆ ಅವರ ಬದಲು ಕಾಂಗ್ರೆಸ್ ಶಾಸಕ ವಿಜಯ್ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನೀಲ್ ಕುಮಾರ್ ಅವರು, ರೈತರ ವಾಹನಗಳಲ್ಲಿ ಟಿಸಿ ಸಾಗಾಣಿಕೆ ಮಾಡಬಾರದು. ಇಲಾಖೆಯ ವಾಹನಗಳನ್ನೇ ಬಳಸಬೇಕು. ಟಿಸಿ ಸುಟ್ಟು ಹೋದರೆ 24 ಗಂಟೆಗಳಲ್ಲಿ ಬದಲಾವಣೆ ಮಾಡಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಗ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಧ್ಯ ಪ್ರವೇಶ ಮಾಡಿ, ಟಿಸಿ ಕೆಟ್ಟರೆ 15 ದಿನ, ತಿಂಗಳು ಕಳೆದರೂ ಬದಲಾವಣೆ ಆಗುವುದಿಲ್ಲ. ಸಿಬ್ಬಂದಿ ಸಹಕಾರ ಮಾಡುವುದಿಲ್ಲ. ರೈತರೆ ತೆಗೆದುಕೊಂಡು ಹೋಗಬೇಕು. ಅವರೇ ಜೋಡಿಸಬೇಕು ಎಂಬ ವಾತಾವರಣ ಇದೆ. ವ್ಯಾಪಕ ಭ್ರಷ್ಟಚಾರ ನಡೆಯುತ್ತಿದೆ. ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.

ಸಚಿವ ಸುನೀಲ್ ಕುಮಾರ್ ಉತ್ತರ ನೀಡಿ, ಎಲ್ಲಾ ವಿಭಾಗಗಳಲ್ಲಿ ಟಿಸಿ ಬ್ಯಾಂಕ್ ಮಾಡಿ, ಕೆಟ್ಟು ಹೋಗಿರುವ ಅಥವಾ ಸುಟ್ಟು ಹೋಗಿದ್ದರೆ ತಕ್ಷಣ ಬದಲಾವಣೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಭ್ರಷ್ಟಚಾರ ನಡೆಸಿದ ಬಗ್ಗೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

Facebook Comments

Sri Raghav

Admin