ಬೆಂಗಳೂರಲ್ಲಿ ಸೋಂಕಿತರ ಪತ್ತೆಗೆ ಸ್ಮೆಲ್‍ಕಾರ್ಡ್ ಪ್ರಯೋಗಕ್ಕೆ ಮುಂದಾದ ಬಿಬಿಎಂಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.28- ನಗರದಲ್ಲಿರುವ ಕೊರೊನಾ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಥರ್ಮಲ್ ಸ್ಕ್ಯಾನರ್ ವಿಫಲವಾಗಿರುವ ಹಿನ್ನೆಲೆಯಲ್ಲಿ ಸ್ಮೆಲ್‍ಕಾರ್ಡ್ ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದೆ.

ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಜರ್ ಬಳಕೆ ಮಾಡಿದರೂ ಕೊರೊನಾ ಸೋಂಕು ಕಡಿಮೆಯಾಗದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸ್ಮೆಲ್‍ಕಾರ್ಡ್ ಬಳಕೆ ಮಾಡಿ ಸೋಂಕಿತರನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗಿದೆ ಎಂದು ಮೇಯರ್ ಗೌತಮ್‍ಕುಮಾರ್ ತಿಳಿಸಿದ್ದಾರೆ.

ಇನ್ನು ಮುಂದೆ ಮಾಲ್, ಕಚೇರಿಗಳ ಮುಂಭಾಗ ಥರ್ಮಲ್ ಸ್ಕ್ಯಾನರ್ ಮಾದರಿಯಲ್ಲೇ ಸ್ಮೆಲ್‍ಕಾರ್ಡ್ ಬಳಕೆ ಮಾಡಿ ಸೋಂಕಿತರನ್ನು ಪತ್ತೆಹಚ್ಚಲು ತೀರ್ಮಾನಿಸಲಾಗಿದೆ.

ಆರೇಂಜ್, ಮ್ಯಾಂಗೋ, ಲೆಮನ್ ಸೇರಿದಂತೆ ಹಲವು ರೀತಿಯ ಫ್ಲೇವರ್ ಇರುವ ಸ್ಮೆಲ್‍ಕಾರ್ಡ್ ಬಳಕೆ ಮಾಡಿ ಸೋಂಕಿತರನ್ನು ಪತ್ತೆಹಚ್ಚುವುದೇ ಈ ಹೊಸ ಐಡಿಯಾವಾಗಿದೆ.

ಮಾಲ್, ಕಚೇರಿ ಪ್ರವೇಶಿಸುವವರು ಆಯಾ ಫ್ಲೇವರ್‍ಗಳನ್ನು ಸರಿಯಾಗಿ ಗುರುತಿಸಿದರೆ ಮಾತ್ರ ಪ್ರವೇಶ ನೀಡಲಾಗುವುದು. ಇಲ್ಲದಿದ್ದರೆ ಅವರನ್ನು ವಾಪಸ್ ಕಳುಹಿಸಲಾಗುವುದು.

ಹೊಸ ರೀತಿಯ ಸ್ಮೆಲ್‍ಕಾರ್ಡ್ ಪ್ರಯೋಗದ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗುವುದು. ಸರ್ಕಾರದಿಂದ ಅನುಮತಿ ದೊರೆತರೂ ಸ್ಮೆಲ್‍ಕಾರ್ಡ್ ಬಳಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೇಯರ್ ವಿವರಿಸಿದರು.

ಥರ್ಮಲ್ ಸ್ಕ್ಯಾನರ್ ವಿಫಲ: ಮನುಷ್ಯರ ಉಷ್ಣಾಂಶ ಪತ್ತೆಹಚ್ಚುವ ಥರ್ಮಲ್ ಸ್ಕ್ಯಾನರ್‍ಗಳು ಸೋಂಕಿತರನ್ನು ಪತ್ತೆಹಚ್ಚುವಲ್ಲಿ ಸಂಪೂರ್ಣ ವಿಫಲವಾಗಿವೆ.

ನಗರದಲ್ಲಿರುವ ಬಹುತೇಕ ಶಾಪ್, ಕಚೇರಿಗಳು, ಹೊಟೇಲ್‍ಗಳು ಮತ್ತು ಮಾಲ್‍ಗಳಲ್ಲಿ ಥರ್ಮಲ್ ಸ್ಕ್ಯಾನರ್ ಬಳಕೆ ಮಾಡಲಾಗುತ್ತಿದೆ. ಆದರೆ, ಸ್ಕ್ಯಾನರ್‍ಗಳು ಅಸಿಂಪ್ಟಮ್ಯಾಟಿಕ್ ಸೋಂಕಿತರನ್ನು ಪತ್ತೆಹಚ್ಚುವಲ್ಲಿ ವಿಫಲವಾಗುತ್ತಿವೆ.

ಜ್ವರ, ಕೆಮ್ಮು, ನೆಗಡಿ ಇರದ ಅಸಿಂಪ್ಟಮ್ಯಾಟಿಕ್ ಸೋಂಕಿತರು ಸಾಮಾನ್ಯ ಜನರಂತೆ ಓಡಾಡಿಕೊಂಡಿದ್ದರೂ ಅವರ ದೇಹದ ಉಷ್ಣಾಂಶ ಕಂಡುಹಿಡಿಯುವಲ್ಲಿ ಥರ್ಮಲ್ ಸ್ಕ್ಯಾನರ್ ಸಂಪೂರ್ಣ ವಿಫಲವಾಗಿದೆ.

ತೀವ್ರ ಜ್ವರ ಇದ್ದ ವ್ಯಕ್ತಿಗಳ ಉಷ್ಣಾಂಶ ಮಾತ್ರ ಥರ್ಮಲ್ ಸ್ಕ್ಯಾನರ್‍ಗಳು ಪತ್ತೆಹಚ್ಚುತ್ತಿರುವುದರಿಂದ ಅಸಿಂಪ್ಟಮ್ಯಾಟಿಕ್ ಸೇರಿದಂತೆ ಇತರ ಸೋಂಕಿತರನ್ನು ಪತ್ತೆಹಚ್ಚಲು ಸ್ಮೆಲ್‍ಕಾರ್ಡ್ ಬಳಕೆ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.

Facebook Comments

Sri Raghav

Admin