ಬೆಂಗಳೂರಲ್ಲಿ ಕಂಡ ಕಂಡಲ್ಲಿ ಧಮ್ ಹೊಡೆಯೋರಿಗೆ ಕಾದಿದೆ ಗ್ರಹಚಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.14- ಇನ್ನು ಮುಂದೆ ಸಾರ್ವಜನಿಕ ಪ್ರದೇಶಗಳಲ್ಲಿ ತಂಬಾಕು ಸೇವನೆ ಮಾಡುವುದು, ಧೂಮಪಾನ ಮಾಡುವುದು ಕಂಡುಬಂದರೆ ಭಾರೀ ದಂಡ ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಿಬಿಎಂಪಿ ನಗರದಲ್ಲಿ ಧೂಮಪಾನ ರಹಿತ ಕಾನೂನುಗಳ ಕಠಿಣ ಜಾರಿಗೆ ಮನಸ್ಸು ಮಾಡಿದೆ.  ಧೂಮಪಾನ ಮುಕ್ತ ಬೆಂಗಳೂರು ನಿರ್ಮಾಣಕ್ಕೆ ನಾವು ಕಟಿಬದ್ಧರಾಗಿದ್ದು, ಇನ್ನು ಮುಂದೆ ಕಂಡಕಂಡಲ್ಲಿ ಧೂಮಪಾನ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಬ್ಲೂಮ್‍ಬರ್ಗ್ ಸಹಯೋಗದಲ್ಲಿ ಜಾಗತಿಕ ಮಟ್ಟದ 54 ನಗರಗಳಲ್ಲಿ ತಂಬಾಕು ನಿಯಂತ್ರಣಗೊಳಿಸುವ ಬಗ್ಗೆ ಸೂಚನೆ ನೀಡಲಾಗಿದ್ದು, 54 ನಗರಗಳಲ್ಲಿ ಬೆಂಗಳೂರನ್ನು ಪರಿಗಣಿಸಲಾಗಿದೆ. ಹೀಗಾಗಿ ಇಡೀ ನಗರವನ್ನು ಧೂಮಪಾನ ಮುಕ್ತ ವಲಯವನ್ನಾಗಿ ಮಾರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಮಾಡಲು ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ತಂಬಾಕು ನಿಯಂತ್ರಣ ಕಾನೂನನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದರು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರಿಗೆ ಪೊಲೀಸ್ ಸಹಯೋಗದೊಂದಿಗೆ ದಂಡ ವಿಧಿಸಲಾಗುತ್ತಿದೆ. ಧೂಮಪಾನ ನಿಷೇಧಿತ ಪ್ರದೇಶಗಳೆಂದು ನಾಮಫಲಕಗಳನ್ನು ಅಳವಡಿಸಲಾಗಿದೆ. ಬೀದಿ ನಾಟಕಗಳ ಮೂಲಕ ತಂಬಾಕು ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ನಗರದಲ್ಲಿ ತಂಬಾಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಇತ್ತೀಚೆಗೆ ಇಂಡೋನೇಷ್ಯಾದಲ್ಲಿ ನಡೆದ ತಂಬಾಕು ನಿಯಂತ್ರಣ ಕುರಿತ ಏಷ್ಯಾ ಪೆಸಿಫಿಕ್ ನಗರಗಳ ಸಮಾವೇಶದಲ್ಲಿ ನಗರಕ್ಕೆ ಉತ್ತಮ ಸಾಧನೆ ನಗರಿ ಎಂಬ ಪ್ರಶಸ್ತಿ ಲಭಿಸಿದೆ ಎಂದು ಅವರು ಹೇಳಿದ್ದಾರೆ.

2017-18ರಲ್ಲಿ ನಗರದ ಶೇ.21ರಷ್ಟು ಪ್ರದೇಶಗಳಲ್ಲಿ ಧೂಮಪಾನ ನಿಷೇಧಿಸಿದೆ ಎಂಬ ನಾಮಫಲಕಗಳನ್ನು ಅಳವಡಿಸಲಾಗಿದೆ. ಇದೀಗ ಶೇ.50ರಷ್ಟು ನಾಮಫಲಕಗಳನ್ನು ಅಳವಡಿಸಲಾಗಿದ್ದು, ಅತಿ ಶೀಘ್ರದಲ್ಲೇ ಇಡೀ ನಗರವನ್ನು ಧೂಮಪಾನ ಮುಕ್ತ ಬೆಂಗಳೂರನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅನಿಲ್‍ಕುಮಾರ್ ವಿವರಿಸಿದರು.

Facebook Comments