ಸೂರ್ಯಗ್ರಹಣ ಸಂಪನ್ನ, ನಭೋಮಂಡಲದ ವಿಸ್ಮಯ ಕಣ್ತುಂಬಿಕೊಂಡ ಜನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.21- ಈ ವರ್ಷದ ಮೊದಲ ಸೂರ್ಯಗ್ರಹಣದ ಸಂಭವಿಸಿದ ದಿನವಾದ ಇಂದು ಸೂರ್ಯ ನಭೋಮಂಡಲದಲ್ಲಿ ಪ್ರಕಾಶಮಾನವಾಗಿ ಉಂಗುರ ಆಕಾರದಲ್ಲಿ ಭಾರತ ಸೇರಿದಂತೆ ವಿಶ್ವದ ಹಲವೆಡೆ ಗೋಚರಿಸಿದ.

ಇಥಿಯೋಪಿಯಾ, ಸೆಂಟ್ರಲ್ ಆಫ್ರಿಕಾ, ಕಾಂಗೋ, ದಕ್ಷಿಣ ಪಾಕಿಸ್ತಾನ, ದುಬೈ, ಉತ್ತರಭಾರತ, ಪೂರ್ವ ಆಫ್ರಿಕಾ, ಯೂರೋಪ್, ಏಷ್ಯಾ, ಉತ್ತರ ಆಸ್ಟ್ರೇಲಿಯಾ ದೇಶಗಳಲ್ಲಿ ಈ ಅಪರೂಪದ ಸೂರ್ಯಗ್ರಹಣ ಗೋಚರಿಸಿತು.

ಇಂದು ಬೆಳಗ್ಗೆ 10.30ಕ್ಕೆ ಕಂಕಣ ಮತ್ತು ಪಾಶ್ರ್ವ ಸೂರ್ಯ ಗ್ರಹಣ ಆರಂಭವಾಯಿತು. ಮಧ್ಯಾಹ್ನ 12.10ರ ವೇಳೆಗೆ ಪಂಜಾಬ್, ಹರಿಯಾಣ, ಜಮ್ಮಕಾಶ್ಮೀರ ಭಾಗದಲ್ಲಿ ಕಂಕಣ ಸೂರ್ಯ ಕಾಣಿಸಿಕೊಂಡರೆ, ಕರ್ನಾಟಕ ಸೇರಿದಂತೆ ವಿವಿಧೆಡೆ ಪಾಶ್ರ್ವ ಸೂರ್ಯ ಗ್ರಹಣ ಗೋಚರಿಸಿತು.

ಈ ವರ್ಷದ ಮೊದಲ ಸೂರ್ಯ ಗ್ರಹಣ ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12.10ಕ್ಕೆ ಪೂರ್ಣ ಪ್ರಮಾಣದಲ್ಲಿ ಗೋಚರಿಸಿ 3 ಗಂಟೆ 4 ನಿಮಿಷಕ್ಕೆ ಬಿಡುಗಡೆ ಹೊಂದಿತು. ಭಾರತದಲ್ಲಿ ಅಪರೂಪದ ಕಂಕಣ ಸೂರ್ಯ ಗ್ರಹಣ ಮತ್ತು ಪಾಶ್ರ್ವ ಸೂರ್ಯಗ್ರಹಣ ಸುಮಾರು ಮೂರುವರೆ ತಾಸು ಸಂಭವಿಸಿದ್ದು ವಿಶೇಷವಾಗಿತ್ತು.  ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಹರಿಯಾಣ, ನವದೆಹಲಿ, ಜಮ್ಮುಕಾಶ್ಮೀರ ಹಲವೆಡೆ ಸೂರ್ಯ ಗ್ರಹಣವನ್ನು ಜನ ಕುತೂಹಲದಿಂದ ವೀಕ್ಷಿಸಿದರು

ಕರ್ನಾಟಕದಲ್ಲಿ ತುಮಕೂರು, ಮಂಡ್ಯ, ಮೈಸೂರು, ಚಿತ್ರದುರ್ಗ, ಬೆಂಗಳೂರು ಹಲವೆಡೆ ಗ್ರಹಣ ಗೋಚರಿಸಿತು. ಮಡಿಕೇರಿ ಹಾಗೂ ಬೆಂಗಳೂರು ಗ್ರಾಮಾಂತರ, ಉತ್ತರ ಕರ್ನಾಟಕದ ಹಲವೆಡೆ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ಗ್ರಹಣ ವೀಕ್ಷಣೆಗೆ ಅಡಚಣೆಯಾಯಿತು.

ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಬೆಂಗಳೂರಿನ ನೆಹರು ತಾರಾಲಯ ಸೇರಿದಂತೆ ವಿವಿಧೆಡೆ ಸಾಮೂಹಿಕ ಗ್ರಹಣ ವೀಕ್ಷಣೆಯನ್ನು ರದ್ದುಪಡಿಸಲಾಗಿತ್ತು. ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆ ಭಾಗ್ಯ ದೊರೆಯಲಿಲ್ಲ.

ಹಾಗಾಗಿ ಕುತೂಹಲವುಳ್ಳವರು ಮನೆಯಿಂದಲೇ ಸುರಕ್ಷತಾ ವಿಧಾನಗಳ ಮೂಲಕ ಗ್ರಹಣವನ್ನು ವೀಕ್ಷಿಸುತ್ತಿದದ್ದು ಕಂಡುಬಂತು.  ಭಾರತದಲ್ಲಿ ಗ್ರಹಣದ ವೇಳೆ ದೇವಾಲಯ, ಧಾರ್ಮಿಕ ಕೇಂದ್ರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಗ್ರಹಣ ಸಂಭವಿಸುವುದಕ್ಕೂ ಮುನ್ನವೇ ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ದೇವರ ವಿಗ್ರಹಗಳನ್ನು ದರ್ಬೆಯಿಂದ ನಿರ್ಬಂಧಿಸಿ ಮುಚ್ಚಲಾಗಿತ್ತು.

ಬೆಂಗಳೂರಿನ ಗವಿಪುರಂ ಗವಿಗಂಗಾಧೇಶ್ವರ, ಕಾಡುಮಲ್ಲೇಶ್ವರ, ಬನಶಂಕರಿ ದೇವಾಲಯ, ಮಹಾಲಕ್ಷ್ಮಿಲೇಔಟ್ ಆಂಜನೇಯ, ಗಾಳಿ ಆಂಜನೇಯ ಸ್ವಾಮಿ ದೇಗುಲ ಸೇರಿದಂತೆ ಬಹುತೇಕ ಎಲ್ಲ ದೇವಾಲಯಗಳನ್ನು ಮುಚ್ಚಲಾಗಿತ್ತು.  ಗ್ರಹಣ ಮೋಕ್ಷ ಕಾಲದ ನಂತರ ದೇವಾಲಯಗಳನ್ನು ಶುಚಿಗೊಳಿಸಿ, ದೇವರಿಗೆ ಪುನಃ ಅಭಿಷೇಕ ಮಾಡಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದದ್ದರಿಂದ ಗ್ರಹಣ ಗೋಚರಿಸಲಿಲ್ಲ.

Facebook Comments