ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬೆಂಗಳೂರು ಬಣಬಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.21- ಗ್ರಹಣದ ಎಫೆಕ್ಟ್‍ನಿಂದಾಗಿ ರಾಜಧಾನಿ ಬೆಂಗಳೂರು ಸಂಪೂರ್ಣ ಬಿಕೋ ಎನ್ನುತ್ತಿತ್ತು.  ಖಗ್ರಾಸ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಬರದ ಕಾರಣ ಸಿಲಿಕಾನ್ ಸಿಟಿ ಸಂಪೂರ್ಣ ಖಾಲಿಯಾಗಿತ್ತು.

ಮೊದಲೇ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದರು. ಈಗ ಅದರ ಜತೆಗೆ ಅಮಾವಾಸ್ಯೆಯಂದು ಕಂಕಣ ಸೂರ್ಯಗ್ರಹಣ ಇದ್ದುದರಿಂದ ಭಾನುವಾರವಾಗಿದ್ದರೂ ಕೂಡ ಜನರ ಓಡಾಟ ಸಂಪೂರ್ಣ ವಿರಳವಾಗಿತ್ತು.

ಮಹಾಮಾರಿ ಕೊರೊನಾ ತಡೆಗಟ್ಟಲು ಸರ್ಕಾರ ಲಾಕ್‍ಡೌನ್ ಘೋಷಿಸಿ ಸಾಕಷ್ಟು ಮಾರ್ಗಸೂಚಿಗಳನ್ನು ಜಾರಿಗೆ ತಂದಿತ್ತು. ಆರ್ಥಿಕ ಚಟುವಟಿಕೆ ಸಕ್ರಿಯಗೊಳಿಸುವ ಹಿನ್ನೆಲೆಯಲ್ಲಿ ಲಾಕ್‍ಡೌನ್ ಸಡಿಲಗೊಳಿಸಿತು. ಜನರ ಓಡಾಟಕ್ಕೆ ಕೆಲವೆಡೆ ನಿರ್ಬಂಧ ವಿಧಿಸಿತ್ತು.

ಕೊರೊನಾವನ್ನೂ ಲೆಕ್ಕಿಸದೆ ಜನರ ಸಹಜವಾಗಿಯೇ ಓಡಾಡುತ್ತಿದ್ದರು. ಲಾಕ್‍ಡೌನ್ ನಿಯಮಾವಳಿ, ಮಾರ್ಗಸೂಚಿಗಳನ್ನು ಮೂಲೆಗೆ ತಳ್ಳಿದ್ದರು. ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದ್ದರೂ ಕೂಡ ಜನ ಕೇರ್ ಮಾಡುತ್ತಿರಲಿಲ್ಲ.

ಆದರೆ, ಗ್ರಹಣದ ದಿನವಾದ ಇಂದು ಮಾತ್ರ ಜನರು ಅಷ್ಟಾಗಿ ಹೊರಬಂದಿರಲಿಲ್ಲ. ಕಂಕಣ ಸೂರ್ಯಗ್ರಹಣದಿಂದ ಜನಜೀವನದ ಮೇಲೆ ಪರಿಣಾಮ ಬೀರಲಿದೆ ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಜನ ಮನೆಯಲ್ಲೇ ಉಳಿದಿದ್ದರು. ಇಷ್ಟೇ ಅಲ್ಲದೆ ವ್ಯಾಪಾರ-ವಹಿವಾಟುಗಳು ಕೂಡ ನಡೆದಿಲ್ಲ.

ಬಹುತೇಕ ಅಂಗಡಿ-ಮುಂಗಟ್ಟುಗಳು ಕೂಡ ತೆರೆದಿರಲಿಲ್ಲ. ಹೊಟೇಲ್‍ಗಳು ಕೂಡ ಮುಚ್ಚಿದ್ದವು.ಕೊರೊನಾಗಿಂತ ಗ್ರಹಣದ ಎಫೆಕ್ಟ್ ಜನರ ಮೇಲೆ ಬೀರಿದಂತಿತ್ತು.

ಮೂಢನಂಬಿಕೆ, ಕಂದಾಚಾರಗಳನ್ನು ಆಚರಿಸಬಾರದು, ಗ್ರಹಣ ಖಗೋಳದಲ್ಲಿ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆ ಅಷ್ಟೆ. ಇದಕ್ಕಾಗಿ ಊಟ ತ್ಯಜಿಸುವುದು, ಮೌಢ್ಯಾಚಾರಣೆ ಮಾಡುವುದು ತಪ್ಪು ಎಂದು ಹಲವು ಪ್ರಗತಿಪರರು ಜಾಗೃತಿ ಮೂಡಿಸುವ ಕೆಲಸ ಮಾಡಿದರಾದರೂ ಬಹುತೇಕ ಜನ ಮನೆಯಿಂದ ಹೊರಬರಲಿಲ್ಲ.

ವೈಚಾರಿಕ, ವೈಜ್ಞಾನಿಕವಾಗಿ ಚಿಂತಿಸುವವರು ಗ್ರಹಣ ವೀಕ್ಷಣೆಯಲ್ಲಿ ತೊಡಗಿದ್ದರು. ಬರಿಗಣ್ಣಿನಿಂದ ಗ್ರಹಣ ನೋಡಬಾರದು ಎಂಬ ಹಿನ್ನೆಲೆಯಲ್ಲಿ ವಿವಿಧ ಕನ್ನಡಕಗಳ ಮೂಲಕ ಕುತೂಹಲದಿಂದ ಗ್ರಹಣವನ್ನು ವೀಕ್ಷಿಸುತ್ತಿದ್ದುದು ಕಂಡುಬಂತು.

Facebook Comments