ಗ್ರಾ.ಪಂ. ಕಟ್ಟಡಗಳು ಹಾಗೂ ಬೀದಿ ದೀಪಗಳಿಗೆ ಸೋಲಾರ್ ಅಳವಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.7- ಅರ್ಜಿದಾರರು ಒಂದೇ ದಿನದಲ್ಲಿ ದಾಖಲೆಗಳನ್ನು ಪಡೆಯಲು ಅನುಕೂಲವಾಗುವಂತೆ ರಾಜ್ಯದ ಎಲ್ಲ ಗ್ರಾಮಪಂಚಾಯ್ತಿ ಕಚೇರಿಗಳ ಕಟ್ಟಡಗಳಿಗೆ ಸೌರಶಕ್ತಿ ಅಳವಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಗ್ರಾಪಂ ಕಚೇರಿ ಕಟ್ಟಡಗಳು ಹಾಗೂ ಬೀದಿದೀಪಗಳಿಗೆ ಇನ್ನು ಮುಂದೆ ಸೌರಶಕ್ತಿ ಬಳಕೆ ಮಾಡಲಾಗುವುದು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕೊರತೆಯಿಂದಾಗಿ ಅರ್ಜಿದಾರರು ವಾರಾಗಟ್ಟಲೇ ಕಾಯಬೇಕಿತ್ತು. ಇನ್ನು ಮುಂದೆ ಸೋಲಾರ್ ಅಳವಡಿಕೆಯಾದರೆ ಬೆಳಗ್ಗೆ ಅರ್ಜಿಗಳನ್ನು ಸಲ್ಲಿಸಿದರೆ ಒಂದೇ ದಿನದಲ್ಲಿ ದಾಖಲೆಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು. ಸೋಲಾರ್ ಅಳವಡಿಕೆಗೆ ದೇಶದ ಅತ್ಯಂತ ಅನುಭವ ಇರುವ ಸಂಸ್ಥೆಯೊಂದಕ್ಕೆ ವಹಿಸಲಾಗುವುದು. ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿದ್ದು,ಈ ಮೂಲಕ ವಿದ್ಯುತ್ ಸ್ವಾವಲಂಬಿಯಾಗಿ ಮಾಡುವ ಸದುದ್ದೇಶ ಇಲಾಖೆಗಿದೆ ಎಂದರು.

ಹೊಸದಾಗಿ ಆಯ್ಕೆಯಾದ 90,729 ಗ್ರಾಪಂ ಸದಸ್ಯರಿಗೆ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೂಲಕ ತರಬೇತಿ ನೀಡಲಾಗುವುದು. ಒಟ್ಟು 285 ಕೇಂದ್ರಗಳಲ್ಲಿ 5 ದಿನಗಳ ತರಬೇತಿ ವ್ಯವಸ್ಥೆ ಮಾಡಲಾಗಿದ್ದು, ಮೇ 15ರೊಳಗೆ ಎಲ್ಲ ಸದಸ್ಯರಿಗೂ ತರಬೇತಿ ನೀಡುವುದಾಗಿ ಸ್ಪಷ್ಟಪಡಿಸಿದರು. ರಾಜ್ಯದಲ್ಲಿ 49 ಹೊಸ ತಾಲ್ಲೂಕುಗಳನ್ನು ರಚನೆ ಮಾಡಲಾಗಿದೆ. ಗ್ರಾಮೀಣ ಪಂಚಾಯ್ತಿಗಳನ್ನು ಡಿಜಟಲೀಕರಣ ಮಾಡಲಾಗಿದೆ ಎಂದು ಹೇಳಿದರು.

ವ್ಯರ್ಥವಾಗುವ ಮಳೆನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಕ್ಯಾಚ್ ದ ರೈನ್( ಜಲಶಕ್ತಿ) ವಿನೂತನ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಕೆರೆಕಟ್ಟೆಗಳು, ಹಳ್ಳಕೊಳ್ಳಗಳು, ಚೆಕ್‍ಡ್ಯಾಂ, ಬೋರ್‍ವೆಲ್ ಸೇರಿದಂತೆ ಮತ್ತಿತರ ಕಡೆ ಇಂಗುಗುಂಡಿಗಳ ಮೂಲಕ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆ ಎಂದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಈ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ. ಇದೇ 9ರಂದು ಹುಬ್ಬಳ್ಳಿಯಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕøತ ನರೇಂದ್ರ ಶರ್ಮ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಉಳಿದಂತೆ ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

100 ದಿನದಲ್ಲಿ ಎಲ್ಲಾ ಕ್ಷೇತ್ರಗಳಿಗೂ ಯೋಜನೆ ತಲುಪಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಜೂನ್-ಜುಲೈನಲ್ಲಿ ಮಳೆಗಾಲ ಆರಂಭವಾಗುವುದರಿಂದ ಆ ವೇಳೆ ಕಾಮಗಾರಿಯನ್ನು ನಡೆಸಲಾಗುವುದುಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗ ಕೆಲಸ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು. ಜಲ್ ಜೀವನ್ ಮಿಷನ್ ಯೋಜನೆಯಡಿ 2023ರೊಳಗೆ ರಾಜ್ಯದ ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವ ಗುರಿಯನ್ನು ಪೂರ್ಣಗೊಳಿಸಬೇಕು.

2022ರ ಅಂತ್ಯಕ್ಕೆ ಯೋಜನೆಯನ್ನು ಮುಗಿಸಬೇಕಿತ್ತು. ಆದರೆ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಸೇರಿದಂತೆ ಮತ್ತಿತರ ಕಡೆ ಶಾಶ್ವತ ಕುಡಿಯುವ ನೀರು ಒದಗಿಸಲು ನದಿಮೂಲಗಳು ಇಲ್ಲ. ಹೀಗಾಗಿ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿರುವುದಾಗಿ ಹೇಳಿದರು.

ಉದ್ಯೋಗ ಖಾತ್ರಿ ಯೋಜನೆಯಡಿ 2019-20ರಲ್ಲಿ 13 ಕೋಟಿ ಮಾನವ ದಿನಗಳ ಗುರಿ ನೀಡಲಾಗಿತ್ತು. ರಾಜ್ಯ ಸರ್ಕಾರ ಗುರಿ ಮೀರಿ 15 ಕೋಟಿ ಮಾನವ ದಿನಗಳನ್ನು ಬಳಕೆ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.38ರಷ್ಟು ಹೆಚ್ಚಳವಾಗಿದೆ. ಜೊತೆಗೆ ಆರ್ಥಿಕ ಪ್ರಗತಿಯೂ ಏರಿಕೆಯಾಗಿದೆ. ಪ್ರವಾಹದಿಂದ ಉಂಟಾದ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಈಶ್ವರಪ್ಪ ವಿವರಿಸಿದರು.

ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿ 3,336 ಕಿ.ಮೀ ಉದ್ದ ರಸ್ತೆ ಹಾಗೂ 26 ಸೇತುವೆ ನಿರ್ಮಾಣ ಮಾಡಲಾಗಿದೆ. ಈಗಾಗಲೇ 1848 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಗ್ರಾಮ ವಿಕಾಸ್ ಯೋಜನೆಯಡಿ 1000 ಕೋಟಿ ವೆಚ್ಚದಲ್ಲಿ 970 ಗ್ರಾಮಗಳ ಅಭಿವೃದ್ಧಿ, ಮನೆ ಮನೆ ಗಂಗೆ ಯೋಜನೆಯಡಿ 3.75 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಕಲಿಸಿದ್ದೇವೆ ಎಂದು ತಿಳಿಸಿದರು.

ಇಲಾಖೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಡತಗಳ ವಿಲೇವಾರಿಗೂ ಆದ್ಯತೆ ನೀಡಲಾಗಿದೆ. ಕೇವಲ ಎರಡೂವರೆ ವರ್ಷದಲ್ಲಿ 11,409 ಕಡತಗಳನ್ನು ವಿಲೇವಾರಿ ಮಾಡಿದ್ದೇವೆ. ಸದ್ಯ 1632 ಕಡತಗಳು ಮಾತ್ರ ಬಾಕಿ ಇವೆ ಎಂದು ತಿಳಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಗಳಿಗೆ 1888 ಕೋಟಿ, 2020-21ರಲ್ಲಿ 1643 ಕೋಟಿ ರೂ. ವೆಚ್ಚ ಮಾಡಲಾಗಿದೆ. 43 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಲಾಗಿದ್ದು, 15,656 ವಿವಿಧ ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಲಾಗಿದೆ.

ಸ್ವಚ್ಛ ಭಾರತ್ ಮಿಷನ್‍ನಡಿ 2019-20ರಲ್ಲಿ 2,63,340 ವೈಯಕ್ತಿಕ ಶೌಚಾಲಯಗಳು ಹಾಗೂ 245 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 2020-21ರಲ್ಲಿ 2,14,093 ವೈಯಕ್ತಿಕ ಶೌಚಾಲಯಗಳು, 86 ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದರು.

ನಮ್ಮ ಇಲಾಖೆಯಲ್ಲಿ ನಾವು ಸಾಕಷ್ಟು ಪರಿಶ್ರಮ ವಹಿಸಿ ಜನಪರವಾದ ಕೆಲಸ ಮಾಡಿದ್ದೇವೆ. ಇಷ್ಟೆಲ್ಲ ಕೆಲಸ ಮಾಡಿದ ಮೇಲೆಯೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ನಾವು ಏನೂ ಮಾಡಿಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

Facebook Comments