ಬೆಂಗಳೂರಲ್ಲಿ ಫಲಾನುಭವಿಗಳಿಗೆ 1ಲಕ್ಷ ಮನೆ ವಿತರಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.9- ನಗರದಲ್ಲಿ ಒಂದು ಲಕ್ಷ ಮನೆ ನಿರ್ಮಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸಲು ತೀರ್ಮಾನಿಸಲಾಗಿದೆ. ಸರ್ಕಾರದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ವಸತಿ ಸಚಿವ ವಿ.ಸೋಮಣ್ಣ ಕರೆ ನೀಡಿದರು. ಗೋವಿಂದರಾಜನಗರ ವಾರ್ಡ್‍ನಲ್ಲಿ ಕನಕಗಿರಿ ಉದ್ಯಾನವನ, ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಕಬ್ಬಡಿ ಕ್ರೀಡಾಂಗಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾ ರ್ಪಣೆ ಮಾಡಿ ಅವರು ಮಾತನಾಡಿದರು.

ರಾಜ್ಯದಲ್ಲಿ 3 ಲಕ್ಷ ಕುಟುಂಬಗಳಿಗೆ ವಸತಿ ಭಾಗ್ಯ ಸಿಗಲಿದೆ. ರಾಷ್ಟ್ರೀಯ ಕ್ರೀಡಾಪಟುಗಳಿಗೆ ನಿವೇಶನಗಳನ್ನು ವಿತರಿಸುವ ಮೂಲಕ ರಾಜ್ಯದಲ್ಲಿ ವಸತಿ ಭಾಗ್ಯ ಕಲ್ಪಿಸಲು ತಮ್ಮ ಸರ್ಕಾರ ಬದ್ಧವಿದೆ ಎಂದರು. ರಾಜಕಾರಣಿಗಳು ಉತ್ತಮ ಕೆಲಸ ಮಾಡಿ ಜನನಾಯಕರಾಗಿ ಬೆಳೆಯಬೇಕು. ಜನ ಪಾವತಿಸುವ ತೆರಿಗೆ ಹಣವನ್ನು ಸದ್ಭಳಕೆ ಮಾಡಿಕೊಂಡು ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಮಾತನಾಡಿ ಕಳೆದ 5 ವರ್ಷಗಳ ಹಿಂದೆ ಜನರಿಗೆ ನೀಡಿದ ಭರವಸೆಯಂತೆ ಇಡೀ ವಾರ್ಡ್‍ನಲ್ಲಿ ಶೇ.100ರಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಗೋವಿಂದರಾಜ ನಗರವನ್ನು ಮಾದರಿ ವಾರ್ಡ್ ಆಗಿ ಮಾಡಿದ್ದೇನೆ.

ನನ್ನ ಈ ಕಾರ್ಯಕ್ಕೆ ನನ್ನ ರಾಜಕೀಯ ಗುರುಗಳಾದ ವಿ.ಸೋಮಣ್ಣ ಮತ್ತು ಸ್ಥಳೀಯರ ಆಶೀರ್ವಾದವೇ ಕಾರಣ ಎಂದರು. ಮೇಯರ್ ಗೌತಮ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಡಾ.ಅರುಣ್ ಸೋಮಣ್ಣ ಮತ್ತಿತರರು ಹಾಜರಿದ್ದರು.

Facebook Comments