ಸಿದ್ಧಗಂಗಾ ಶ್ರೀಗಳ ಕಾಯಕ, ದಾಸೋಹ ಜಗತ್ತಿಗೇ ಮಾದರಿ : ಸೋಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಕಾಯಕ ಹಾಗೂ ದಾಸೋಹ ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ ಹೇಳಿದರು. ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ನಗರದ ಮೂಡಲಪಾಳ್ಯ ವಾರ್ಡ್‍ನ ಜ್ಞಾನಸೌಧದಲ್ಲಿ ಏರ್ಪಡಿಸಿದ್ದ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಶಿವಯೋಗಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಎರಡನೆ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬದುಕಿನುದ್ದಕ್ಕೂ ನಿರಂತರ ಕಾಯಕದಲ್ಲಿ ನಿಷ್ಠೆ ಮೆರೆದು ಸದ್ದಿಲ್ಲದೆ ದಾಸೋಹ ಸಂಸ್ಕøತಿಯನ್ನು ಜಗತ್ತಿಗೆ ಸಾರಿ ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಶ್ರೀಗಳು ಬೆಳಕಾಗಿದ್ದರು ಎಂದರು.

ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಸಿದ್ಧಗಂಗಾ ಶ್ರೀಗಳ ಸೇವೆ, ತ್ಯಾಗಕ್ಕೆ ಎಂದಿಗೂ ಬೆಲೆ ಕಟ್ಟಲಾಗದು. ಶಿಕ್ಷಣ, ದಾಸೋಹದ ಮೂಲಕ ಜಗತ್ತಿಗೆ ಬೆಳಕಾದ ಶ್ರೀಗಳ ಸೇವೆ ಅನನ್ಯವಾಗಿದೆ ಎಂದು ತಿಳಿಸಿದರು. ವಸತಿ ಸಚಿವ ವಿ.ಸೋಮಣ್ಣ ಮಾತನಾಡಿ, ಶ್ರೀ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹಾಗೂ ಶ್ರೀ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೃಪಾಶೀರ್ವಾದವೇ ನನ್ನ ಯಶಸ್ಸು ಹಾಗೂ ಬೆಳವಣಿಗೆಗೆ ಕಾರಣ ಎಂದು ಸ್ಮರಿಸಿದರು.

ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಶ್ರೀಗಳ ಹೆಸರನ್ನು ಚಿರಸ್ಥಾಯಿಯಾಗಿಸಲು ಕ್ಷೇತ್ರದ ಮೂಡಲಪಾಳ್ಯ ವಾರ್ಡ್‍ನಲ್ಲಿ ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಹೆಸರಿನಲ್ಲಿ ಜ್ಞಾನಸೌಧ ನಿರ್ಮಾಣ ಮಾಡಲಾಗಿದೆ. ಇಲ್ಲಿ ಕೆಎಎಸ್, ಐಎಎಸ್, ಐಆರ್‍ಎಸ್, ಐಎಫ್‍ಎಸ್‍ಗಳಿಗೆ ತರಬೇತಿ ನೀಡುವ ಮಹತ್ಕಾರ್ಯ ಮಾಡಲಾಗುತ್ತಿದೆ. ಪ್ರತಿಭಾವಂತರಿಗೆ ಇದು ಉಜ್ವಲ ಬದುಕು ಹಾಗೂ ಭವಿಷ್ಯ ರೂಪಿಸಲಿದೆ ಎಂದರು.

ಕವಿ ಸಿದ್ದಲಿಂಗಯ್ಯ ಮಾತನಾಡಿ, 21ನೇ ಶತಮಾನದಲ್ಲಿ ಬಸವತತ್ವಕ್ಕೆ ಜೀವಂತಿಕೆ ತಂದ ಮಹಾಮಹಿಮರು ಶ್ರೀ ಶಿವಕುಮಾರ ಶ್ರೀಗಳು. ಕಾಯಕ, ದಾಸೋಹದ ಮೂಲಕ ವಿಶ್ವವಿಖ್ಯಾತರಾಗಿದ್ದರು. ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದರು. ಅವರು ಇಂದಿಗೂ ನಮ್ಮೆಲ್ಲರೊಂದಿಗೆ ಇದ್ದಾರೆ ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ, ಚಿಂತಕ ತಿಪ್ಪೇಸ್ವಾಮಿ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಕಾರ್ಯಾಧ್ಯಕ್ಷ ಅರುಣ್ ಸೋಮಣ್ಣ, ಕೋಶಾಧ್ಯಕ್ಷ ನವೀನ್ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಪಾಲನೇತ್ರ ಮತ್ತಿತರರಿದ್ದರು.

Facebook Comments