ಕೊರೊನಾ ತಡೆಗೆ ಸಕಲ ಸಿದ್ಧತೆ : ಸಚಿವ ಸೋಮಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.16- ನಗರದಲ್ಲಿ ಉಲ್ಬಣಗೊಳ್ಳುತ್ತಿರುವ ಕೊರೊನಾ ಸೋಂಕಿನ ಪ್ರಮಾಣವನ್ನು ಒಂದೂವರೆ ತಿಂಗಳೊಳಗೆ ತಹಬದಿಗೆ ತರಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಂದು ಪೂರ್ವ ವಲಯದ ಏಳು ವಿಧಾನಸಭಾ ಕ್ಷೇತ್ರಗಳ ಶಾಸಕರು ಹಾಗೂ ಬಿಬಿಎಂಪಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮೊದಲನೆ ಅಲೆ ಕಾಣಿಸಿಕೊಂಡ ಸಂದರ್ಭದಲ್ಲಿ ಒಂದೂವರೆ ತಿಂಗಳಲ್ಲಿ ಅದನ್ನು ತಹಬದಿಗೆ ತಂದಿದ್ದೆವು. ಈಗ ಎರಡನೇ ಅಲೆ ಕಾಣಿಸಿಕೊಂಡಿದೆ. ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೋಂಕು ತೊಲಗಿಸಲು ನಾವು ಸಿದ್ಧತೆ ಮಾಡುತ್ತಿದ್ದೇವೆ ಎಂದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕೊಠಡಿ, 2-3 ಫೀವರ್ ಕ್ಲಿನಿಕ್ ಹಾಗೂ ಕೋವಿಡ್ ಕೇರ್ ಸೆಂಟರ್‍ಗಳನ್ನು ತಕ್ಷಣದಿಂದಲೇ ಆರಂಭಿಸಲು ನಾವು ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

ಸೋಂಕು ಕಾಣಿಸಿಕೊಂಡ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗಬಹುದು. ಅವಶ್ಯಕತೆಯುಳ್ಳವರು ಸಮೀಪದ ಹೋಟೆಲ್‍ಗಳನ್ನು ಉಪಯೋಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಶವ ಸಾಗಿಸುವ 49 ವಾಹನಗಳು ನಗರದಲ್ಲಿವೆ. ಯಾವುದೇ ಕೊರತೆ ಇಲ್ಲ. ಅಗತ್ಯವಿದ್ದರೆ ಸಂಖ್ಯೆ ಹೆಚ್ಚಳ ಮಾಡುತ್ತೇವೆ. ಈಗ ವಾರ್ಡ್‍ಗೊಂಡು ಆ್ಯಂಬುಲೆನ್ಸ್ ಇದೆ. ಅದನ್ನು 2ಕ್ಕೆ ಹೆಚ್ಚಳ ಮಾಡುತ್ತೇವೆ. ಈ ಮೂಲಕ 24/7 ಸೋಂಕು ನಿಯಂತ್ರಣದ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇವೆ ಎಂದು ಸೋಮಣ್ಣ ತಿಳಿಸಿದರು.

ಇದುವರೆಗೂ ಸೋಂಕು ಕಾಣಿಸಿಕೊಂಡವರು ಆಸ್ಪತ್ರೆಗೆ ದಾಖಲಾಗಲು ಬಿಯು ನಂಬರ್ ಕಡ್ಡಾಯವಾಗಿತ್ತು. ಇನ್ನು ಮುಂದೆ ಬಿಯು ನಂಬರ್ ಇಲ್ಲದೆಯೇ ಬೇಕಾದ ಆಸ್ಪತ್ರೆಗೆ ದಾಖಲಾಗಲು ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್ ಟೆಸ್ಟ್ ನಿಗದಿ ಮಾಡಲಾಗಿದೆ. ರಾಜ್ಯದಲ್ಲಿಕಾಣಿಸಿಕೊಳ್ಳುವ ಸೋಂಕಿಗಿಂತ ನಗರದಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿರುವುದರಿಂದ 3 ಲಕ್ಷಕ್ಕಿಂತ ಹೆಚ್ಚು ಲಸಿಕೆ ನೀಡುವಂತೆ ಸಿಎಂಗೆ ಮನವಿ ಮಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗಾಗಿ ಲಸಿಕೆ ಕೊರತೆ ಇರುವುದಿಲ್ಲ ಎಂದರು.

ಇನ್ನು ಎರಡು ದಿನದಲ್ಲಿ ಅಂಬೇಡ್ಕರ್ ವೈದ್ಯಕೀಯ ಕಾಲೇಜಿಗೆ 10 ವೆಂಟಿಲೇಟರ್ ಕೊಡಲಾಗುತ್ತದೆ. ಎಲ್ಲೆಲ್ಲಿ ಸೋಂಕು ಹೆಚ್ಚು ಕಾಣಿಸುತ್ತದೆಯೋ ಅಲ್ಲಿ ಆರ್‍ಟಿಪಿಸಿಆರ್ ತಪಾಸಣೆ ಕೇಂದ್ರ ಸ್ಥಾಪಿಸಿ ತಪಾಸಣೆ ದ್ವಿಗುಣಗೊಳಿಸುತ್ತೇವೆ. ಅತಿ ಹೆಚ್ಚು ಬಡ ಮಧ್ಯಮ ವರ್ಗದವರು ವಾಸಿಸುವ ಶಿವಾಜಿನಗರದಲ್ಲಿ 150 ಹಾಸಿಗೆಗಳನ್ನು ಒಳಗೊಂಡ ಚರಕ ಸ್ಪೆಷಾಲಿಟಿ ಆಸ್ಪತ್ರೆಯನ್ನು ಭಾನುವಾರ ನಾವು ಉದ್ಘಾಟಿಸುತ್ತಿದ್ದೇವೆ ಎಂದು ತಿಳಿಸಿದರು.

ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ ರೂಂಗಳನ್ನು ಸ್ಥಾಪಿಸಿ ಅಲ್ಲಿಗೆ ಒಬ್ಬ ಸಹಾಯಕ ಆಯುಕ್ತರನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಿಸುತ್ತೇವೆ ಎಂದು ಸೋಮಣ್ಣ ಹೇಳಿದರು. ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಸ್ಯಾನಿಟೈಸ್ ಮಾಡುವ ಮೂಲಕ ಕೊರೊನಾ ಸೋಂಕು ಹತ್ತಿಕ್ಕಲು ಸರ್ಕಾರ ಹಾಗೂ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಜನ ಆತಂಕಗೊಳ್ಳದೆ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕೆಂದು ಅವರು ಇದೇ ವೇಳೆ ಮನವಿ ಮಾಡಿದರು.

ಶಾಸಕರಾದ ಅಖಂಡ ಶ್ರೀನಿವಾಸ್, ಹ್ಯಾರಿಸ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತ, ಐಎಎಸ್ ಅಧಿಕಾರಿಗಳಾದ ಮನೋಜ್‍ಕುಮಾರ್ ಮೀನ, ಮಹೇಂದ್ರ ಜೈನ್ ಮತ್ತಿತರರ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Facebook Comments