ಬಹು ಮಹಡಿ ಕಟ್ಟಡಗಳು 500 ಮನೆಗಳಿಗೆ ಸೀಮಿತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.21- ನಗರದಲ್ಲಿ ಬಹುಮಹಡಿ ವಸತಿ ನಿರ್ಮಾಣಕ್ಕೆ ಗುತ್ತಿಗೆ ನೀಡುವುದನ್ನು 500 ಮನೆಗಳಿಗೆ ಸೀಮಿತಗೊಳಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ವಿಧಾನಸೌಧದಲ್ಲಿಂದು ರಾಜೀವ್‍ಗಾಂಧಿ ವಸತಿ ನಿಗಮ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನುಮುಂದೆ ಸಾವಿರಾರು ಮನೆಗಳ ನಿರ್ಮಾಣಕ್ಕೆ ಗುತ್ತಿಗೆ ನೀಡದಿರಲು ತೀರ್ಮಾನ ಮಾಡಲಾಗಿದೆ.

ಬೆಂಗಳೂರಿನಲ್ಲಿ 49 ಸಾವಿರ ಮನೆಗಳ ನಿರ್ಮಾಣದ ಟೆಂಡರನ್ನು ರದ್ದುಪಡಿಸಲಾಗಿದ್ದು, ಒಂದು ಅಥವಾ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ 500 ಮನೆಗಳ ನಿರ್ಮಾಣಕ್ಕೆ ಟೆಂಡರ್ ಕರೆಯಲು ತೀರ್ಮಾನಿಸಲಾಗಿದೆ. 600ರಿಂದ 800 ಮನೆ ನಿರ್ಮಾಣ ಮಾಡಬೇಕಾದ ವಿಶೇಷ ಪ್ರಕರಣ ಕಂಡು ಬಂದಾಗ ಅದನ್ನು ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯ ಫಲಾನುಭವಿಗಳನ್ನು ಗುರುತಿಸು ವಾಗ ಅರ್ಹರಿಗೆ ನೀಡುವುದಲ್ಲದೆ, ಹೆಣ್ಣುಮಕ್ಕಳ ಹೆಸರಿಗೆ ಕೊಡಲು ಉದ್ದೇಶಿಸಲಾಗಿದೆ.

ಫಲಾನುಭವಿಗಳ ಪಾಲನ್ನು 2ರಿಂದ 3 ಲಕ್ಷಕ್ಕೆ ಮಿತಿಗೊಳಿಸಲು ಉದ್ದೇಶಿಸಿದ್ದು, ಬ್ಯಾಂಕ್‍ನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಡಿ 46 ಸಾವಿರ ಅರ್ಜಿಗಳು ಬಂದಿದ್ದು, ಆರು ಸಾವಿರ ಮನೆಗಳ ನಿರ್ಮಾಣಕ್ಕೆ ಟೆಂಡರ್ ನೀಡಲಾಗಿದೆ. ಫೆ.15ರಿಂದ 20ರ ನಡುವೆ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.

ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಗೆ ನಗರದ 8 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 332 ಎಕರೆ ಜಮೀನು ಪಡೆದುಕೊಳ್ಳಲಾಗಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಕ್ಷೆ ಮಂಜೂರಾಗಿದೆ. ಅಗ್ನಿಶಾಮಕ ಇಲಾಖೆಯಿಂದಲೂ ಅನುಮತಿ ಪಡೆಯಲಾಗಿದ್ದು, ಕನಕಪುರ, ಆನೇಕಲ್, ನೆಲಮಂಗಲ ಅಭಿವೃದ್ಧಿ ಪ್ರಾಧಿಕಾರದಿಂದ ಒಂದೆರಡು ದಿನಗಳಲ್ಲಿ ಅನುಮತಿ ಪಡೆಯುವ ನಿರೀಕ್ಷೆ ಇದೆ. ಇನ್ನು ಮುಂದೆ ನೆಲ ಮತ್ತು ಮೂರು ಅಂತಸ್ತಿನ ಮನೆಗಳನ್ನು ಮಾತ್ರ ನಿರ್ಮಿಸಲಾಗುವುದು ಎಂದರು.

ಬೆಂಗಳೂರನ್ನು ಕೊಳಚೆ ರಹಿತ ಪ್ರದೇಶವನ್ನಾಗಿ ಮಾಡಲು ಉದ್ದೇಶಿಸಿದ್ದು, ಕೊಳಚೆ ನಿರ್ಮೂಲನಾ ಮಂಡಳಿಯಿಂದ 1.80 ಲಕ್ಷ ಮನೆ ನಿರ್ಮಾಣ ಮಾಡಲಾಗುವುದು. ನಗರದಲ್ಲಿ 392 ಕೊಳಗೇರಿ ಪ್ರದೇಶಗಳಿದ್ದು, 2022ರ ವೇಳೆಗೆ 40ಸಾವಿರ ಮನೆ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ 50ಸಾವಿರ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ರಾಜ್ಯವನ್ನು ಶೇ.90ರಷ್ಟು ಕೊಳಚೆ ರಹಿತ ಪ್ರದೇಶ ಮಾಡಬೇಕೆಂಬ ಉದ್ದೇಶವಿದೆ. ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಶೇ.10ರಷ್ಟು ಅನುದಾನ ಪಡೆದು ಗರಿಷ್ಠ ಒಂದು ಲಕ್ಷ ಮಿತಿಯೊಳಗೆ ಫಲಾನುಭವಿಗಳ ಪಾಲನ್ನು ನಿಗದಿಪಡಿಸುವ ಉದ್ದೇಶವಿದೆ ಎಂದರು.

ಪರ್ಯಾಯ ವ್ಯವಸ್ಥೆ:ಅಕ್ರಮ ವಲಸಿಗರೆಂದು ತೆರವುಗೊಳಿಸಲಾಗಿರುವ ಪ್ರದೇಶಗಳಲ್ಲಿ ರಾಜ್ಯದವರೇ ನೆಲೆಸಿದ್ದರೆ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದು . ನಗರದ ಕರಿಯಮ್ಮನಪಾಳ್ಯದಲ್ಲಿ ಜನರನ್ನು ತೆರವುಗೊಳಿಸಿರುವ ಬಗ್ಗೆ ಗಮನ ಸೆಳೆದಾಗ ರಾಜ್ಯದವರೇ ಆಗಿದ್ದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದರು.

ನಗರದಲ್ಲಿ ಅಕ್ರಮವಾಗಿ ನೆಲೆಸಿರುವವರ ಪತ್ತೆಗೆ ಬಿಬಿಎಂಪಿ ಸರ್ವೆ ಕಾರ್ಯವನ್ನು ಪ್ರಾರಂಭ ಮಾಡಿದೆ. ಇದೊಂದು ಸೂಕ್ಷ್ಮ ವಿಚಾರವಾಗಿದ್ದು, ಸ್ಥಳೀಯ ಸಂಸ್ಥೆಗಳು ಹಾಗೂ ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

Facebook Comments