ಬಡವರ ದೈನಂದಿನ ಜೀವನಕ್ಕೆ ತೊಂದರೆಯಾಗದಂತೆ ಕ್ರಮ : ಎಸ್ .ಟಿ ಸೋಮಶೇಖರ್

ಈ ಸುದ್ದಿಯನ್ನು ಶೇರ್ ಮಾಡಿ

ಯಶವಂತಪುರ, ಏ.10- ಬಡವರು ಹಾಗೂ ವಲಸೆ ಕಾರ್ಮಿಕರಿಗೆ ತಿಂಡಿ, ಊಟ ದಿನಸಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್ .ಟಿ ಸೋಮಶೇಖರ್ ತಿಳಿಸಿದ್ದಾರೆ. ಸೂಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮಸಂದ್ರ ಗ್ರಾಮದಲ್ಲಿ ವಿಶ್ವ ಒಕ್ಕಲಿಗರ ಮಹಾ ವೇದಿಕೆ ವತಿಯಿಂದ ಬಡವರಿಗೆ ದಿನಸಿ ವಿತರಿಸಿ ಮಾತನಾಡಿದರು.

ಮುಂಬರುವ ದಿನಗಳಲ್ಲಿ ಕೊರೊನಾ ನಿರ್ಣಾಯಕ ಘಟ್ಟಕ್ಕೆ ತಲುಪುತ್ತಿದ್ದು ಪರಿಸ್ಥಿತಿ ಬಿಗಡಾಯಿಸದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಜನಸಂದಣಿ ತಪ್ಪಿಸಲು ಬಡವರು ತಂಗಿರುವ ಸ್ಥಳಗಳಿಗೆ ತೆರಳಿ ಆಹಾರ ಪೊಟ್ಟಣ ದಿನಸಿ ಹಾಗೂ ದಿನ ಬಳಕೆ ವಸ್ತುಗಳನ್ನು ಉಚಿತವಾಗಿ ವಿತರಿಸುವ ಮೂಲಕ ನಿರಾಶ್ರಿತರ ದೈನಂದಿನ ಜೀವನಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು .

ವಿಶ್ವ ಒಕ್ಕಲಿಗರ ಮಹಾವೇದಿಕೆ ಕ್ಷೇತ್ರಾಧ್ಯಕ್ಷ ಅಶೋಕ್ ಮಾತನಾಡಿ, ವೇದಿಕೆ ವತಿಯಿಂದ ರಾಮಸಂದ್ರ ಗ್ರಾಮ ಹಾಗೂ ಅಕ್ಕಪಕ್ಕದ ಬಡಾವಣೆಗಳಲ್ಲಿರುವ ಸುಮಾರು 250 ಬಡ ಕುಟುಂಬಗಳಿಗೆ ಅಕ್ಕಿ ಬೇಳೆ ಎಣ್ಣೆ ಕಾಳು ಒಳಗೊಂಡ ದಿನಿಸಿ ಕಿಟ್ಟನ್ನು ವಿತರಿಸಲಾಯಿತು ಎಂದರು. ಈ ವೇಳೆ ಸೂಲಿಕೆರೆ, ಕೆಂಚನಪುರ ಗ್ರಾಮಗಳಲ್ಲೂ ಬಡವರಿಗೆ ದಿನಸಿ ವಿತರಿಸಲಾಯಿತು.

ಬಿಜೆಪಿ ವಕ್ತಾರ ಅಶ್ವಥನಾರಾಯಣ್, ವಿಶ್ವ ಒಕ್ಕಲಿಗರ ಮಹಾವೇದಿಕೆ ಕ್ಷೇತ್ರ ಕಾರ್ಯದರ್ಶಿ ಕನ್ನಡವೇ ಸತ್ಯ ರಂಗಣ್ಣ, ಮುಖಂಡರಾದ ತಿಮ್ಮಯ್ಯ, ಮಾದಯ್ಯ, ಹರೀಶ್ ದೇವರಾಜ್ , ಮುರಳೀಧರ್ ವೆಂಕಟರಮಣ, ತಿಮ್ಮೇಗೌಡ ಹಾಗೂ ಅಶ್ವಿನಿ ಇದ್ದರು.

Facebook Comments