ಜಲ ಮಂಡಲಿ, ಬಿಡಿಎ, ಬಿಬಿಎಂಪಿ ಅಧಿಕಾರಿಗಳ ಗೈರು ಹಾಜರಿಗೆ ಸಚಿವರ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.14- ನಾಗರೀಕರು ಹೇಳುವ ಸಮಸ್ಯೆಗಳ ಬಗ್ಗೆ ಸ್ಥಳದಲ್ಲಿಯೇ ಕೆಲವು ಕಾಮ ಗಾರಿ ಕೈಗೆತ್ತಿಕೊಳ್ಳಬೇಕಾಗುತ್ತದೆ. ಆದರೆ ಇದನ್ನು ನಿರ್ವಹಿಸಬೇಕಾದ ಬೆಂಗಳೂರು ಜಲಮಂಡಲಿ, ಬಿಡಿಎ, ಬೆಸ್ಕಾಂ ಸೇರಿದಂತೆ ಹಲವು ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿರುವುದು ಸರಿಯಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತೀವ್ರ ತರಾಟೆಗೆ ತೆಗೆದುಕೊಂಡರು.

ಗಾಂಧಿನಗರ ಹೊಸಕೆರೆ ಅಭಿವೃದ್ಧಿ ಮತ್ತು ಕೆರೆಗೆ ಹರಿದು ಬರುತ್ತಿದ್ದ ಒಳಚರಂಡಿ ನೀರು ಸ್ಥಗಿತಗೊಳಿಸಿದ್ದು ಮುಂದೆ ಯಾವುದೇ ಕಾರಣಕ್ಕೂ ಒಳಚರಂಡಿ ನೀರು ಹರಿಯದಂತೆ ಕ್ರಮಕೈಗೊಳ್ಳುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ ಸಚಿವರು, ಮುಂಜಾನೆಯಿಂದಲೆ ಹಲವಾರು ಕಾಮಗಾರಿ ಉದ್ಘಾಟನೆ ನೆರೆವೇರಿಸಿ ಬಳಿಕೆ ಕೆರೆ ಅಭಿವೃದ್ಧಿ ಪರಿಶೀಲನೆ ನಡೆಸಿದರು.

ಈ ವೇಳೆ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಎಲ್.ಮಾರ್ಕಂಡೇಯ, ಸಹಾಯಕ ಅಭಿಯಂತರ ಶ್ರೀಧರ್ ಅವರನ್ನು ಪ್ರಶ್ನಿಸಿದ ಸಚಿವರು, ನಿಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಒಂದು ತಾಸು ಇಲ್ಲಿಗೆ ಬರಲು ಪುರುಸೋತ್ತಿಲ್ಲವೆ ಎಂದರು. ಜಲಮಂಡಲಿ, ಬಿಡಿಎ ಅಧಿಕಾರಿ ಗಳೇ ಇಲ್ಲ , ಜನರು ಸಮಸ್ಯೆ ಹೇಳುತ್ತಾರೆ, ಸ್ಥಳದಲ್ಲಿದ್ದರೆ ಪರಿಹರಿಸ ಬಹುದಲ್ಲ, ಡಾಂಬರೀಕರಣ ಮಾಡಿದ ಮೇಲೆ ಜಲಮಂಡಲಿ, ಬೆಸ್ಕಾಂ, ಬಿಡಿಎ ಸೇರಿದಂತೆ ಕೆಲವರು ರಸ್ತೆ ಅಗೆದು ಹೋಗುತ್ತಾರೆ, ಜನ ನಮಗೆ ಸಮಸ್ಯೆ ಹೇಳಿಕೊಳ್ಳುತ್ತಾರೆ. ಅದನ್ನು ಪರಿಹರಿಸಲು ಅಧಿಕಾರಿಗಳು ಬೇಕಲ್ಲವೆ ಎಂದು ಪ್ರಶ್ನಿಸಿದರು.

ಪೂನಂಮಹಲ್, ಮಿನಿಗಾಂಧಿನಗರ, ಮೆಡ್‍ಸೋಲ್ ಆಸ್ಪತ್ರೆ, ಕೆಪಿಎಸ್‍ಸಿ ಬಡಾವಣೆಯಲ್ಲಿ ಶುದ್ಧ ನೀರಿನ ಘಟಕ ಉದ್ಘಾಟನೆ, ಮುದ್ದನ ಪಾಳ್ಯ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ, ಗಿಡದ ಕೋನೇನಹಳ್ಳಿಯಲ್ಲಿ ಸರ್ಕಾರಿ ಶಾಲಾ ಕೊಠಡಿಗಳಿಗೆ ಚಾಲನೆ ನೀಡಿದರು.ಬಿಬಿಎಂಪಿ ಸದಸ್ಯೆ ಶಾರದ ಮುನಿರಾಜು ಮಾತನಾಡಿ, ಪ್ರತಿಯೊಬ್ಬ ರಿಗೂ ಶುದ್ದನೀರು ದೊರೆಕಿಸಿಕೊಡ ಲಾಗುತ್ತಿದೆ, ಜೊತೆಗೆ ಕಾವೇರಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಲವಾರು ನಾಗರೀಕರಿಗೆ ಉಚಿತವಾಗಿ ನೀರಿನ ಕ್ಯಾನ್‍ಗಳನ್ನು ವಿತರಿಸಿದರು.  ಪುರಸಭೆ ಮಾಜಿ ಉಪಾಧ್ಯಕ್ಷ ಜಿ.ಮುನಿರಾಜು, ಮುಖಂಡಾರಾದ ನಿಶಾಂತ್, ಸೋಮಶೇಖರ್, ಕಿರಣ್‍ಕುಮಾರ್, ಕದರಪ್ಪ, ಸಬೀಹ ಅಂಜುಂ ಮತ್ತಿತರರಿದ್ದರು.

Facebook Comments