ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಕುರಿತು ರೀ ಆಡಿಟ್ ಮಾಡಲು ಸಚಿವರ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.13- ಗುರುರಾಘವೇಂದ್ರ ಸಹಕಾರ ಬ್ಯಾಂಕ್‍ನಲ್ಲಿ ಬೃಹತ್ ಪ್ರಮಾಣದ ಅವ್ಯವಹಾರವನ್ನು ರೀ ಆಡಿಟ್ ಮಾಡಬೇಕು. ಅಲ್ಲದೆ, ಇದರ ಲೆಕ್ಕ ಪರಿಶೋಧನೆ ಮಾಡಿದವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

ಜೆಪಿ ನಗರದಲ್ಲಿರುವ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯಲ್ಲಿ ಸಹಕಾರ ಇಲಾಖೆಯ ಉನ್ನತಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಸಹಕಾರ ಬ್ಯಾಂಕ್‍ಗಳಲ್ಲಿ ಯಾವಾಗಲೂ ಶೇ.14ಕ್ಕೆ ಸಾಲ ಕೊಡಬೇಕು. ಆದರೆ, ಈ ಪ್ರಕರಣದಲ್ಲಿ ಶೇ.18 ರಷ್ಟು ಪಡೆಯುತ್ತಿದ್ದರೂ ಅಧಿಕಾರಿಗಳು ಗಮನಿಸಲಿಲ್ಲವೇ? ಕ್ರಮ ತೆಗೆದುಕೊಳ್ಳುವುದಕ್ಕಿಂತ ಮುಂಚಿತ ವಾಗಿ ಇದಕ್ಕೆ ಅವಕಾಶವನ್ನೇ ಕೊಡ ಬಾರದಿತ್ತು ಎಂದು ಸೂಚಿಸಿದರು.

ವಾಸ್ತವಾಂಶವನ್ನು ಪರಿಗಣನೆಗೆ ತೆಗೆದುಕೊಂಡು ಪ್ರಕರಣ ದಾಖಲಿಸಬೇಕಾಗುತ್ತದೆ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈವರೆಗೆ ಬ್ಯಾಂಕ್‍ನ ಅಧ್ಯಕ್ಷರ ಮೇಲೆ ಯಾವುದೇ ಎಫ್ ಐಆರ್ ದಾಖಲಾಗಿಲ್ಲ. ಹೀಗಾಗಿ ಅವರ ಮೇಲೂ ಸೇರಿದಂತೆ ಹೊಸದಾಗಿ ಎಫ್‍ಐಆರ್ ದಾಖಲಿಸಬೇಕು. ಸೆಕ್ಷನ್ 64ರಡಿ ತನಿಖೆ ಸಹ ನಡೆಯಲಿ. ಅಲ್ಲದೆ, ಎಷ್ಟು ವರ್ಷ ಅವಧಿಯ ರೀ ಆಡಿಟ್ ಆಗಬೇಕು ಎಂಬುದನ್ನು ಶೀಘ್ರ ನಿರ್ಧರಿಸಿ ವರದಿ ನೀಡಿ ಎಂದು ಸಚಿವ ಸೋಮಶೇಖರ್ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಡಿಟ್ ಸೇರಿದಂತೆ ಸಮಗ್ರ ತನಿಖೆ ಕೈಗೊಳ್ಳುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿ ಸೇರಿದಂತೆ ಇಲಾಖೆ ವತಿಯಿಂದ ಬೇಕಾದ ಸಹಕಾರ ಕೊಡಲಾಗುವುದು. ಎಲ್ಲ ರೀತಿಯ ಬೆಂಬಲವನ್ನು ನಾನು ಕೊಡಲಿದ್ದೇನೆ ಎಂದು ಸಚಿವರು ತಿಳಿಸಿದರು. ಅಲ್ಲದೆ, ಇಂಥ ಬೃಹತ್ ಪ್ರಮಾಣದ ಅಕ್ರಮದಲ್ಲಿ ಭಾಗಿ ಯಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಡಿವೈಎಸ್ಪಿ ಅಧಿಕಾರಿಗೆ ಸೂಚಿಸಿದರು.

ಇಲ್ಲಿ ಸಿಇಒ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಮಾತ್ರ ಅವ್ಯವಹಾರ ಮಾಡಿದ್ದಾರೆ. ಅವರು ಸಹ ಈ ಬಗ್ಗೆ ಡಿಕ್ಲರೇಷನ್ ಕೊಟ್ಟಿದ್ದಾರೆ. ಹೀಗಾಗಿ ಇವರ ಮೇಲೆ ಕಟ್ಟುನಿಟ್ಟಿನ ಕ್ರಮವಾಗಬೇಕು ಎಂದು ತೇಜಸ್ವಿ ಸೂರ್ಯ ಹೇಳಿದರು.

ಏನಿದು ಹಗರಣ?: ಈ ಸಹಕಾರ ಬ್ಯಾಂಕ್‍ನಲ್ಲಿ 927 ಕೋಟಿ ರೂ. ಸಾಲ ಪಡೆದುಕೊಳ್ಳಲಾಗಿದ್ದು, ಈ ಮೊತ್ತವನ್ನು ಕೇವಲ 27 ಮಂದಿ ಹೆಸರಿನಲ್ಲಿ ತೆಗೆದುಕೊಳ್ಳಲಾಗಿದೆ. ಹಾಗಾಗಿ ಈ ಬಗ್ಗೆ ಈಗಾಗಲೇ ಎಫ್‍ಐಆರ್ ದಾಖಲಾಗಿದೆ. ಒಟ್ಟಾರೆ 2 ಸಾವಿರ ಕೋಟಿಗೂ ಅಧಿಕ ವ್ಯವಹಾರಗಳು ಈ ಕೋ-ಆಪರೇಟಿವ್ ಬ್ಯಾಂಕ್‍ನಲ್ಲಿ ನಡೆದಿದೆ. ಪ್ರಸ್ತುತ ಆರ್‍ಬಿಐ ಮಧ್ಯಪ್ರವೇಶ ಮಾಡಿದ್ದು, ಪರಿಶೀಲನೆ ನಡೆಸಿ ಕೆಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಈಗ 35 ಸಾವಿರದ ವರೆಗೆ ಮಾತ್ರ ವ್ಯವಹಾರ ಮಾಡಬಹುದು ಎಂದು ಆದೇಶ ನೀಡಿದೆ. ಅಲ್ಲದೆ, ವೈದ್ಯಕೀಯ ಸೇರಿ ತೀರಾ ತುರ್ತು ಪರಿಸ್ಥಿತಿ ಇದ್ದವರಿಗೆ 50 ಸಾವಿರ ರೂ. ಹಾಗೂ ಹೃದಯ ಸಂಬಂಧಿ ರೋಗ ಇದ್ದವರಿಗೆ 1 ಲಕ್ಷ ಮತ್ತು ತೀರಾ ಅನಾರೋಗ್ಯದ ಸಂದರ್ಭದಲ್ಲಿ 5 ಲಕ್ಷ ರೂ.ವರೆಗೆ ಠೇವಣಿ ಹಿಂಪಡೆಯಲು ಅವಕಾಶ ನೀಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Facebook Comments