‘ಸಿದ್ದರಾಮಯ್ಯ ಹೀರೋನೂ ಅಲ್ಲ, ವಿಲನ್ನೂ ಅಲ್ಲ’ ಬಿಎಸ್ವೈ ರಿಯಲ್ ಹೀರೋ”

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಅ.27-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೀರೋನೂ ಅಲ್ಲ , ವಿಲನ್ನೂ ಅಲ್ಲ. ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರೇ ಹೀರೋ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ಹೇಳಿದರು.  ನಗರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಬಗ್ಗೆ ನೀಡಿರುವ ಹೇಳಿಕೆ ಕುರಿತಂತೆ ಪ್ರಶ್ನಿಸಿದಾಗ ಈ ರೀತಿ ಉತ್ತರಿಸಿದರು.

ಸಿದ್ದರಾಮಯ್ಯ ಅವರು ಏನೆಂಬುದು ನಮಗೆ ಗೊತ್ತಿದೆ. ಐದು ವರ್ಷಗಳ ಕಾಲ ಅವರೊಂದಿಗೆ ಕೆಲಸ ಮಾಡಿದ್ದೇವೆ. ಅಸೆಂಬ್ಲಿ ಹೊರಗಡೆ, ಒಳಗಡೆ ಅವರು ಹೇಗೆ ಮಾತನಾಡುತ್ತಾರೆ ಎಂಬುದು ನಮಗೆ ಗೊತ್ತಿದೆ. ಅವರ ದಮ್ಮಿನ ಬಗ್ಗೆ ಈಗ ಮಾತನಾಡುವುದು ಬೇಡ ಎಂದು ಮಾರ್ಮಿಕವಾಗಿ ನುಡಿದರು.

ಅಧಿವೇಶನ ಕರೆಯುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಧಿವೇಶನ ಕರೆದರೆ ವಿರೋಧ ಪಕ್ಷದವರಾದ ಸಿದ್ದರಾಮಯ್ಯ ಅವರು ಬಂದು ನೆಟ್ಟಗೆ ಮಾತನಾಡುವುದಿಲ್ಲ. ಕಲಾಪ ಬಹಿಷ್ಕರಿಸಿ ಹೋಗುತ್ತಾರೆ. ಈ ರೀತಿ ಮಾಡಿದರೆ ಅಧಿವೇಶನ ಕರೆದು ಪ್ರಯೋಜನವೇನು. ಹಣ ಏಕೆ ವೆಚ್ಚ ಮಾಡಬೇಕು ಎಂದರು.

ಆರ್.ಆರ್.ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಸೆಟ್‍ಟಾಪ್ ಬಾಕ್ಸ್ ವಿತರಿಸುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಮುನಿರತ್ನ ಅವರು ಕೇಬಲ್ ಬಿಸ್ನೆಸ್ ಮಾಡುತ್ತಾರೆ. ಕಳೆದ ನಾಲ್ಕೈದು ವರ್ಷಗಳಿಂದ ಆ ವ್ಯವಹಾರ ನಡೆಸುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಅನುಮತಿ ಪಡೆದೇ ಸೆಟ್‍ಟಾಪ್ ಬಾಕ್ಸ್ ವಿತರಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಚುನಾವಣಾ ಗಿಮಿಕ್ ಇಲ್ಲ ಎಂದು ಹೇಳಿದರು.

Facebook Comments