ಹಿರಿಯ ಪತ್ರಕರ್ತ ಸೋಮಶೇಖರ ಯಡವಟ್ಟಿ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.16- ಕೊರೊನಾ ಸೋಂಕಿನಿಂದ ಹಿರಿಯ ಪತ್ರಕರ್ತ ಸೋಮಶೇಖರ ಯಡವಟ್ಟಿ (50) ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಮೂಲತಹಃ ಧಾರವಾಡದವರಾದ ಸೋಮಶೇಖರ್ ಯಡವಟ್ಟಿ ಈ ಟಿವಿ, ಕರುನಾಡ ಸಂಜೆ, ಉದಯವಾಣಿ ಸೇರಿ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು.

ಪ್ರಸ್ತುತ ಸಂಯುಕ್ತ ಕರ್ನಾಟಕದಲ್ಲಿ ಮುಖ್ಯವರದಿಗಾರರಾಗಿದ್ದರು. ಶುಕ್ರವಾರದವರೆಗೂ ಕೆಲಸ ಮಾಡಿದ್ದ ಅವರಿಗೆ ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡಿದೆ. ತೀವ್ರ ನಿತ್ರಾಣರಾಗಿದ್ದ ಅವರು ಕಷ್ಟ ಪಟ್ಟು ಮನೆ ಸೇರಿಕೊಂಡಿದ್ದಾರೆ.

ನಿನ್ನೆ ಮಧ್ಯಾಹ್ನದ ವೇಳೆಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಾಗಲು ಪ್ರಯತ್ನಿಸಿದರಾದರೂ ಬೆಡ್ ಸಿಕ್ಕಿಲ್ಲ. ಕೊನೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿ ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ದಾಖಲಾಗಿದ್ದರು. ಇಂದು ಮುಂಜಾನೆ 3.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.

ಪತ್ನಿ, ಒಬ್ಬ ಮಗ, ಮಗಳನ್ನು ಅಗಲಿದ್ದಾರೆ. ಪತ್ರಿಕೋದ್ಯಮದಲ್ಲಿ ನಿಷ್ಠೂರತೆ ಮೂಲಕ ಜನಪ್ರಿಯರಾಗಿದ್ದರು. ಕೋವಿಡ್ ಸೋಂಕಿನ ಕಾರಣಕ್ಕೆ ಸಂಬಂಕರಿಗೆ ಮೃತದೇಹ ಕೊಡದಿರಲು ಬಿಬಿಎಂಪಿ ನಿರ್ಧರಿಸಿದೆ.

ಸೋಮಶೇಖರ್ ಯಡವಟ್ಟಿ ಅವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ ಸೇರಿದಂತೆ ನಾಡಿನ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ. ಸೋಮಶೇಖರ್ ಅವರ ಅಕಾಲಿಕ ಮರಣವು ನನಗೆ ತೀವ್ರ ದುಃಖ ತಂದಿದೆ.

ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮುಖ್ಯ ವರದಿಗಾರರಾಗಿದ್ದ ಇವರು ರಾಜಕೀಯ ವರದಿಗಾರಿಕೆಗೆ ಮಾದರಿಯಾಗಿದ್ದ ಪತ್ರಕರ್ತರಾಗಿದ್ದರು. ಕಾರ್ಯನಿರತ ಪತ್ರಕರ್ತರ ವಲಯದಲ್ಲಿ ಮಾದರಿ ವ್ಯಕ್ತಿ ಯಾಗಿದ್ದ ಯಡವಟ್ಟಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತಂತೆ ಲೇಖನಗಳನ್ನು ಬರೆದು ಆಡಳಿತದಲ್ಲಿರುವ ಸರ್ಕಾರಗಳ ಗಮನ ಸೆಳೆಯುತ್ತಿದ್ದರು.

ಇವರ ಅಕಾಲಿಕ ಮರಣದಿಂದ ನನಗೆ ವೈಯಕ್ತಿಕಕವಾಗಿ ಒಬ್ಬ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದ ಸದಸ್ಯರಿಗೆ, ಪತ್ರಕರ್ತ ಸ್ನೇಹಿತರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin