ಯಶವಂತಪುರದಲ್ಲಿ ಸೋಮಶೇಖರ್ ಪರ ನಟ ಜಗ್ಗೇಶ್ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು- ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿ ದಿರುವ ಎಸ್.ಟಿ. ಸೋಮಶೇಖರ್ ಪರ ಚಿತ್ರನಟ, ನವರಸ ನಾಯಕ ಜಗ್ಗೇಶ್ ಇಂದು ಭರ್ಜರಿ ಪ್ರಚಾರ ನಡೆಸುವ ಮೂಲಕ ಬಿರುಸಿನ ಮತಯಾಚನೆ ಮಾಡಿದರು. ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡದೆ ದೂರ ಉಳಿಯುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದ ಅವರು, ಬೆಳಗ್ಗೆ ಕೆಂಗೇರಿಯ ಬಿಬಿಎಂಪಿ ಕಚೇರಿಯಲ್ಲಿ ಪಕ್ಷದ ಮುಖಂಡರ ಜೊತೆ ಸಭೆ ನಡೆಸಿ ಬಳಿಕ ದಿನಪೂರ್ತಿ ಮತಯಾಚನೆ ಮಾಡಿದರು.

ಕೆಂಗೇರಿಯಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಜಗ್ಗೇಶ್ ಮತ್ತು ಎಸ್.ಟಿ.ಸೋಮಶೇಖರ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿ ತಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶವನ್ನು ಮತದಾರರಿಗೆ ರವಾನಿಸಿದರು.  ನನಗೆ ಟಿಕೆಟ್ ಕೈ ತಪ್ಪಿದರೂ ಚಿಂತೆಯಿಲ್ಲ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಗೆಲುವಿಗೆ ನಾನು ಕಾಯಾ, ವಾಚಾ, ಮನಸಾ ದುಡಿಯುತ್ತೇನೆ.

ಎಸ್.ಟಿ. ಸೋಮಶೇಖರ್ ಬೇರೆಯಲ್ಲ, ನಾನು ಬೇರೆ ಅಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ. ಅವರು ಗೆಲ್ಲುವವರೆಗೂ ವಿರಮಿಸುವುದಿಲ್ಲ ಎಂದು ಜಗ್ಗೇಶ್ ಸ್ಪಷ್ಟಪಡಿಸಿದರು.  ನನ್ನ ರಾಜಕೀಯ ವಿರೋಧಿಗಳು ನಾನು ಪ್ರಚಾರಕ್ಕೆ ಬಾರದೆ ದೂರ ಉಳಿದಿದ್ದೇನೆ ಎಂದು ಅಪಪ್ರಚಾರ ಮಾಡುತ್ತಾರೆ. ಇದಕ್ಕೆ ಯಾರೊಬ್ಬರೂ ತಲೆಕೆಡಿಸಿಕೊಳ್ಳಬಾರದು. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಶಿರಸಾವಹಿಸಿ ಪಾಲಿಸುತ್ತೇನೆ. ಸೋಮಶೇಖರ್ ಗೆಲುವಿಗೆ ನಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳು ತ್ತೇನೆ. ಕೊನೆಯ ದಿನದವರೆಗೂ ಕ್ಷೇತ್ರದಲ್ಲೇ ಉಳಿದು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು.

ಈ ವೇಳೆ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಮಾತನಾಡಿ, ಜಗ್ಗೇಶ್ ನನ್ನ ಪರವಾಗಿ ಪ್ರಚಾರಕ್ಕೆ ಬಂದಿರುವುದು ನನಗೆ ಇನ್ನಷ್ಟು ಶಕ್ತಿ ಬಂದಿದೆ. ಜಗ್ಗೇಶ್ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರು. ಅವರು ನನ್ನ ಪರವಾಗಿ ಪ್ರಚಾರ ಮಾಡಲು ಬಂದಿರುವುದು ನನಗೆ ಅತೀವ ಸಂತಸ ತಂದಿದೆ ಎಂದರು.

ಬಳಿಕ ಜಗ್ಗೇಶ್ ಮತ್ತು ಎಸ್.ಟಿ. ಸೋಮಶೇಖರ್ ಸೇರಿದಂತೆ ಪಕ್ಷದ ಮುಖಂಡರು ದೊಡ್ಡಬಿದರೆ ಕಲ್ಲು ವಾರ್ಡ್ ಜ್ಞಾನಾಭಿವೃದ್ದಿ ಅಪಾರ್ಟ್‍ಮೆಂಟ್, ಉಲ್ಲಾಳ ವಾರ್ಡ್ ಮತ್ತಿತರೆಡೆ ಪ್ರಚಾರ ನಡೆಸಿ ಈ ಬಾರಿಯೂ ಮತ್ತೊಮ್ಮೆ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡಿದರು.

Facebook Comments