ಬೆಂಗಳೂರಿನ ಈ ಏರಿಯಾಗಳಲ್ಲಿ ಮತ್ತೆ ಕಂಪ್ಲೀಟ್ ಸೀಲ್‍ಡೌನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.22- ಕೊರೊನಾ ಮಹಾಮಾರಿ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಸೋಂಕಿತರು ಹೆಚ್ಚಿರುವ ಪ್ರದೇಶಗಳನ್ನು ಸಂಪೂರ್ಣ ಸೀಲ್‍ಡೌನ್ ಮಾಡಲು ತೀರ್ಮಾನಿಸಿದೆ.

ಸೋಂಕಿತರ ಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಸೀಲ್‍ಡೌನ್ ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದು , ಇಂದಿನಿಂದಲೇ ಕೆಲ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲು ತೀರ್ಮಾನಿಸಿದ್ದೇವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ತಿಳಿಸಿದರು.

ವಿ.ವಿ.ಪುರಂ , ಕಲಾಸಿಪಾಳ್ಯ, ಟಿಪ್ಪು ನಗರ, ಚಿಕ್ಕಪೇಟೆ, ಎಸ್ಪಿ ರೋಡ್, ಚಾಮರಾಜಪೇಟೆ ಮತ್ತಿತರ ಕೆಲ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗುತ್ತಿದೆ.

ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಸೋಂಕು ಕಾಣಿಸಿಕೊಂಡಿರುವುದರಿಂದ ಅವುಗಳನ್ನು ಪಾದರಾಯನಪುರದ ಮಾದರಿಯಲ್ಲಿ ಸಂಪೂರ್ಣ ಸೀಲ್‍ಡೌನ್ ಮಾಡಿ ಆಯಾ ಪ್ರದೇಶಗಳಿಂದ ಯಾರೂ ಹೊರ ಹೋಗದಂತೆ , ಒಳ ಬರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸೋಂಕಿತರು ಹೆಚ್ಚಿರುವ ಪ್ರದೇಶಗಳನ್ನು ಸೀಲ್‍ಡೌನ್ ಮಾಡುವುದರಿಂದ ಮಾತ್ರ ಕೊರೊನಾ ಮಹಾಮಾರಿ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಸಾಧ್ಯ. ಈ ಸಂಬಂಧ ಪೊಲೀಸರೊಂದಿಗೂ ಮಾತುಕತೆ ನಡೆಸಿ ಅವರ ಸಹಕಾರದೊಂದಿಗೆ ಹಾಟ್‍ಸ್ಪಾಟ್ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗುವುದು ಎಂದು ಅವರು ಹೇಳಿದರು.

ಸೀಲ್‍ಡೌನ್ ಪ್ರದೇಶಗಳ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗುವುದು. ಆ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಪ್ರಾರ್ಥನಾ ಮಂದಿರಗಳನ್ನು ಬಂದ್ ಮಾಡಲಾಗುವದು. ಅಲ್ಲಿನ ನಾಗರಿಕರಿಗೆ ಆನ್‍ಲೈನ್ ಮೂಲಕ ಅಗತ್ಯ ವಸ್ತುಗಳ ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಟಿಪ್ಪುನಗರ , ಎಸ್ಪಿ ರಸ್ತೆ ಸೀಲ್‍ಡೌನ್: 6 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿ ಇಬ್ಬರನ್ನು ಬಲಿ ತೆಗೆದುಕೊಂಡಿರುವ ಟಿಪ್ಪು ನಗರಕ್ಕೆ ಶಾಸಕ ಜಮೀರ್ ಅಹಮದ್‍ಖಾನ್‍ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಯುಕ್ತ ಅನಿಲ್‍ಕುಮಾರ್ ಅವರು ಕೂಡಲೇ ಇಡೀ ಪ್ರದೇಶವನ್ನು ಸೀಲ್‍ಡೌನ್ ಮಾಡುವಂತೆ ಸೂಚಿಸಿದರು.

ನಾಳೆಯಿಂದಲೇ ಇಡೀ ಪ್ರದೇಶದಲ್ಲಿ ರ್ಯಾಂಡಮ್ ಪರೀಕ್ಷೆ ನಡೆಸುವಂತೆ ಸ್ಥಳದಲ್ಲೇ ಅಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಒಂದೇ ದಿನ 12 ಮಂದಿಗೆ ಸೋಂಕು ಕಾಣಿಸಿಕೊಂಡಿರುವ ಎಸ್ಪಿ ರಸ್ತೆಯನ್ನು ಬಿಬಿಎಂಪಿ ಅಕಾರಿಗಳು ಸಂಪೂರ್ಣ ಸೀಲ್‍ಡೌನ್ ಮಾಡಿದ್ದಾರೆ.

ಜನನಿಬಿಡ ಎಸ್ಪಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು , ಮುಂಜಾಗ್ರತಾ ಕ್ರಮವಾಗಿ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆ ಸೇರಿದಂತೆ ಚಿಕ್ಕಪೇಟೆ ಸುತ್ತಮುತ್ತಲ ಪ್ರದೇಶಗಳನ್ನು ಬಂದ್ ಮಾಡಲಾಗಿದೆ.

# ಕಲಾಸಿಪಾಳ್ಯ, ಕೆ.ಆರ್.ಮಾರ್ಕೆಟ್ ಶಿಫ್ಟ್:
ಸಿಟಿ ಮಾರುಕಟ್ಟೆ ಸುತ್ತಮುತ್ತಲ ಪ್ರದೇಶಗಳಲ್ಲಿ ದಿನೇ ದಿನೇ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಲಾಸಿಪಾಳ್ಯ ಮತ್ತು ಕೆ.ಆರ್. ಮಾರುಕಟ್ಟೆಯನ್ನು ಹೊಸೂರು ರಸ್ತೆಯ ಸಿಂಗೇನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗುತ್ತಿದೆ.

ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 24 ಪೊಲೀಸರು ಸೇರಿದಂತೆ ಹಲವಾರು ಸ್ಥಳೀಯರ ಮೇಲೆ ಕೊರೊನಾ ಮಹಾಮಾರಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

Facebook Comments

Sri Raghav

Admin