ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಂದು ಶೌಚಾಲಯದ ಗುಂಡಿಯಲ್ಲಿ ಶವ ಹೂತಿಟ್ಟ ಮಗ..!

ಈ ಸುದ್ದಿಯನ್ನು ಶೇರ್ ಮಾಡಿ

Son--01

ಚನ್ನಪಟ್ಟಣ, ಜು.28- ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಗನೇ ಹೆತ್ತ ತಾಯಿಯನ್ನು ಕೊಂದು ಶೌಚಾಲಯದ ಗುಂಡಿಯಲ್ಲಿ ಹೂತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗವಾರ ಗ್ರಾಮದ ಲೇ.ನರಸಿಂಹಯ್ಯ ಎಂಬುವರ ಪತ್ನಿ ಗೌರಮ್ಮ (70) ಕೊಲೆಯಾದ ದುರ್ದೈವಿ. ನಾಗಮ್ಮ ಅವರಿಗೆ ಇಬ್ಬರು ಹೆಣ್ಣುಮಕ್ಕಳು, ಇಬ್ಬರು ಗಂಡು ಮಕ್ಕಳಿದ್ದಾರೆ. ಕಿರಿಯ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದರೆ, ಹಿರಿಯ ಮಗ ಸುರೇಶ ಆಟೋ ಚಾಲಕ ವೃತ್ತಿ ಮಾಡಿಕೊಂಡು ನಾಗವಾರ ಗ್ರಾಮದಲ್ಲಿ ವಾಸವಾಗಿದ್ದಾನೆ.

ನಾಗಮ್ಮ ಪ್ರತ್ಯೇಕವಾಗಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಪಿತ್ರಾರ್ಜಿತ ಆಸ್ತಿಯಾದ ಎರಡು ಎಕರೆ ಜಮೀನು ಹೊಂದಿದ್ದ ತಾಯಿ ನಾಗಮ್ಮ ಜತೆ ಹಿರಿಯ ಮಗನಾದ ಸುರೇಶ ಅಲಿಯಾಸ್ ಕ್ಯಾರೆಹಾವು ಪ್ರತಿನಿತ್ಯ ಜಗಳ ಮಾಡುತ್ತಿದ್ದ ಎನ್ನಲಾಗಿದೆ.

ಮೂರು ದಿನಗಳ ಹಿಂದೆ ಸುರೇಶ ತೋಟದ ಬಳಿ ಹೋಗಿ ಅಲ್ಲಿದ್ದ ತಾಯಿ ಜತೆ ಜಗಳವಾಡಿದ್ದಾನೆ. ಈ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತಿರುಗಿದಾಗ ಅಲ್ಲಿಯೇ ತಾಯಿಯನ್ನು ಕೊಲೆ ಮಾಡಿ ನಂತರ ಶವವನ್ನು ತನ್ನ ಆಟೋದಲ್ಲಿ ಮನೆ ಬಳಿ ತಂದು ಶೌಚಾಲಯದ ಗುಂಡಿಯಲ್ಲಿ ಹಾಕಿ ಮಣ್ಣು ಮುಚ್ಚಿದ್ದಾನೆ.
ಇಂದು ಮುಂಜಾನೆಯಿಂದ ಈ ಶೌಚಾಲಯದ ಗುಂಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಎಂ.ಕೆ.ದೊಡ್ಡಿ ಪೊಲೀಸರು ಗುಂಡಿಯನ್ನು ತೆಗೆದಾಗ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin