ಸೋನಿಯಾಗೆ ಅನಾರೋಗ್ಯ : ಚಿಕಿತ್ಸೆಗಾಗಿ ರಾಹುಲ್ ಜತೆ ವಿದೇಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.13-ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ನಿನ್ನೆ ರಾತ್ರಿ ತಮ್ಮ ಪುತ್ರ-ಸಂಸದ ರಾಹುಲ್ ಗಾಂದಿ ಅವರೊಂದಿಗೆ ವಿದೇಶಕ್ಕೆ ತೆರಳಿದ್ಧಾರೆ.

ಈ ಹಿನ್ನೆಲೆಯಲ್ಲಿ ಸೋನಿಯಾ ಮತ್ತು ರಾಹುಲ್ ಸಂಸತ್ತಿನ ಮುಂಗಾರು ಅಧಿವೇಶನದ ಬಹುತೇಕ ಅವಧಿಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಕಾಂಗ್ರಸ್ ಉನ್ನತ ಮೂಲಗಳು ಹೇಳಿವೆ.

ಸೋನಿಯಾ ಕೆಲವು ವಾರಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಜುಲೈ 30ರಂದು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.  ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗಾಗಿ ನಿನ್ನೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಪುತ್ರ ರಾಹುಲ್ ತಾಯಿಯ ಯೋಗಕ್ಷೇಮ ನೋಡಿಕೊಳ್ಳಲು ಜೊತೆಯಲ್ಲಿದ್ದಾರೆ. ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, 18 ದಿನಗಳ ಕಾಲ ನಡೆಯಲಿದೆ.

ಮುಂದಿನ ವಾರದ ನಂತರ ಸೋನಿಯಾ ಮತ್ತು ರಾಹುಲ್ ಭಾರತಕ್ಕೆ ಹಿಂದಿರುಗಲಿದ್ದಾರೆ. ಆ ನಂತರ ಅವರು ಕಲಾಪದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

Facebook Comments