ರಾಹುಲ್‍ಗಾಂಧಿಗೆ ಮತ್ತೆ ಎಐಸಿಸಿ ಅಧ್ಯಕ್ಷ ಪಟ್ಟ..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.19- ಕಾಂಗ್ರೆಸ್ ನಾಯಕತ್ವದ ವಿರುದ್ಧ ಪ್ರಶ್ನೆ ಎತ್ತಿದ್ದ 23 ನಾಯಕರೂ ಸೇರಿದಂತೆ ಹಿರಿಯ ಕಾಂಗ್ರೆಸಿಗರ ಜತೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಮಾಲೋಚನಾ ಸಭೆ ನಡೆಸಿದ್ದು, ಮುಂದಿನ ನಾಯಕತ್ವದ ಬಗ್ಗೆ ಮಹತ್ವದ ತೀರ್ಮಾನ ತೆಗೆದು ಕೊಂಡಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬಹಳ ದೀರ್ಘಕಾಲದ ಬಳಿಕ ಸೋನಿಯಗಾಂಧಿ ಅವರು ಹಿರಿಯ ಕಾಂಗ್ರೆಸಿಗರ ಸಭೆ ನಡೆಸಿದ್ದು, ಮಹತ್ವದ ಬೆಳವಣಿಗೆಯಾಗಿದೆ.

ಕಳೆದ ಎಐಸಿಸಿ ಅಧಿವೇಶನಕ್ಕೂ ಮುನ್ನ ಕಾಂಗ್ರೆಸ್‍ನ ಹಿರಿಯ ನಾಯಕರಾದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಗುಲಾಬ್‍ನಬಿ ಹಾಜಾದ್, ಉಪ ನಾಯಕ ಆನಂದ್ ಶರ್ಮ, ಮಾಜಿ ಮುಖ್ಯಮಂತ್ರಿ ಬೂಪೇಂದ್ರಸಿಂಗ್ , ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್, ಸಂಸದರಾದ ಮನೀಷ್ ತಿವಾರಿ, ವಿವೇಕ್ ತಂಕಾ, ಶಶಿತರೂರ್, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‍ನಾಥ್, ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಈ ಹಿಂದೆ ರಾಹುಲ್‍ಗಾಂಧಿ ನಾಯಕತ್ವದ ವಿರುದ್ಧ ದನಿ ಎತ್ತಿದ್ದರು.

ಗಾಂಧಿ ಕುಟುಂಬದ ನಿಷ್ಟರಾಗಿ ಗುರುತಿಸಿಕೊಂಡಿರುವ ಎ.ಕೆ.ಆ್ಯಂಟನಿ, ಅಂಬಿಕಾಸೋನಿ, ಅಶೋಕ್ ಗೆಹಲೋಟ್, ಹರೀಶ್ ರಾಹೋತ್, ಪವನ್ ಬನ್ಸಲ್ ಸೇರಿದಂತೆ ಹಲವಾರು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ ಚುನಾವಣೆಯನ್ನು ಯಾರ ನಾಯಕತ್ವದಲ್ಲಿ ಎದುರಿಸಬೇಕೆಂಬ ಪ್ರಶ್ನೆ ಕಾಂಗ್ರೆಸ್ ಮುಂದಿದೆ.

ಸೋನಿಯಾಗಾಂಧಿ ಅವರು ಹಂಗಾಮಿ ಅಧ್ಯಕ್ಷರಾಗಿದ್ದಾರೆ. ಆದರೆ, ಪಕ್ಷವನ್ನು ಸದೃಢವಾಗಿ ಕಟ್ಟಲು ಪರ್ಯಾಯ ನಾಯಕತ್ವದ ಹುಡುಕಾಟ ನಡೆದಿದೆ. ಈ ನಡುವೆ ನಿನ್ನೆ ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲ ಅವರು ಹೇಳಿಕೆ ನೀಡಿದ್ದು, ಕಾಗ್ರೆಸ್‍ನ ಶೇ.99.9ರಷ್ಟು ನಾಯಕರು ರಾಹುಲ್‍ಗಾಂಧಿ ಅವರೇ ಮತ್ತೆ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಬಯಸುತ್ತಿದ್ದಾರೆ ಎಂದಿದ್ದಾರೆ.

ಈ ಮೊದಲು ಅಧ್ಯಕ್ಷರಾಗಿದ್ದ ರಾಹುಲ್‍ಗಾಂಧಿ ಅವರು ಲೋಕಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅನಂತರ ಸೋನಿಯಾಗಾಂಧಿ ಅವರು ಹಂಗಾಮಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್ ಒಳವಲಯದಲ್ಲಿನ ಬೆಳವಣಿಗೆಯನ್ನು ನೋಡಿದರೆ ಮತ್ತೆ ರಾಹುಲ್‍ಗಾಂಧಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟುವಂತಹ ಸೂಚನೆಗಳು ಕಂಡು ಬರುತ್ತಿವೆ.

Facebook Comments