ಸೋನಿಯಾ ಗಾಂಧಿ ಭಾರತದ ಪ್ರಧಾನಿ ಆಗಬೇಕು : ಕೇಂದ್ರ ಸಚಿವ ಅಠಾವಳೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.25- ಯುಪಿಎ ಅಧಿಕಾರಕ್ಕೆ ಬಂದರೆ ಸೋನಿಯಾಗಾಂಧಿ ಭಾರತದ ಪ್ರಧಾನಿಯಾಗಬೇಕು ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ.ರಾಮದಾಸ್ ಅಠಾವಳೆ ಹೇಳಿದ್ದಾರೆ. ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕಾದ ಉಪಾಧ್ಯಕ್ಷೆಯಾಗುವುದಾದರೆ ಸೋನಿಯಾ ಗಾಂಧಿ ಭಾರತದ ಪ್ರಧಾನಿಯಾಕಾಗಬಾರದು ಎಂದು ಪ್ರಶ್ನಿಸಿದ್ದಾರೆ.

ಸೋನಿಯಾ ಗಾಂಧಿ ಭಾರತೀಯ ಪ್ರಜೆಯಾಗಿದ್ದಾರೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಮತ್ತು ಈ ದೇಶದ ಸಂಸದೆ ಆಗಿರುವ ಅವರು ಪ್ರಧಾನಿ ಆಗುವುದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡಿ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದರು. ಕಮಲಾ ಹ್ಯಾರಿಸ್ ಅವರ ಎರಡನೇ ಹಿಂದಿನ ತಲೆಮಾರು ತಮಿಳುನಾಡಿನಲ್ಲಿ ನೆಲೆಸಿತ್ತು.

ಈಗಲೂ ಅವರ ಸಂಬಂಧಿಕರು ತಮಿಳುನಾಡಿನಲ್ಲಿದ್ದಾರೆ. ಅಮೆರಿಕಾದಲ್ಲಿ ನೆಲೆಸಿರುವ ಕಮಲಾ ಹ್ಯಾರಿಸ್ ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಭಾರತದಲ್ಲಿ ಸೋನಿಯಾ ಗಾಂಧಿ ಅವರನ್ನು ವಿದೇಶಿ ಮಹಿಳೆ ಎಂದು ನಿಂಧಿಸಲಾಗುತ್ತಿದೆ. ಬಿಜೆಪಿ ಮತ್ತು ಸಂಘ ಪರಿವಾರ 2004 ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ಇಟಲಿ ಮೂಲವನ್ನು ಕೆದಕಿತ್ತು.

ಭಾರತದಲ್ಲಿ ವಿದೇಶಿ ಮಹಿಳೆ ಅಧಿಕಾರ ಹಿಡಿಯಬಾರದು ಎಂಬರ್ಥದಲ್ಲಿ ಟೀಕೆಗಳು ಕೇಳಿ ಬಂದಿದ್ದವು. ಹಾಗಾಗಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದರು ಸೋನಿಯಾ ಗಾಂಧಿ ಪ್ರಧಾನಿಯಾಗಲು ಹಿಂದೇಟು ಹಾಕಿದರು. ಅವರ ಬದಲು ಮನಮೋಹನ್ ಸಿಂಗ್ ದೇಶದ ಪ್ರಧಾನಿಯಾಗಿದ್ದರು. 10 ವರ್ಷಗಳ ಕಾಲ ಯುಪಿಎ ಸರ್ಕಾರವನ್ನು ಮನಮೋಹನ್ ಸಿಂಗ್ ಮುನ್ನೆಡೆಸಿದ್ದರು.

ಈಗ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರದಲ್ಲಿ ಸಚಿವರಾಗಿರುವ ಆರ್‍ಪಿಐ ನಾಯಕ ರಾಮದಾಸ್ ಅಠಾವಳೆ ಯುಪಿಎ ಅಧಿಕಾರಕ್ಕೆ ಬಂದರೆ ಸೋನಿಯಾ ಗಾಂಧಿ ಪ್ರಧಾನಿಯಾಗಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಮುಜುಗರವು ಉಂಟಾಗಿದೆ.

Facebook Comments