ಕಾಂಗ್ರೆಸ್ ಸಂಸ್ಥಾಪನ ದಿನ ಕಾರ್ಯಕ್ರಮಕ್ಕೆ ಸೋನಿಯಾ-ರಾಹುಲ್ ಗೈರು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.28- ದೇಶದ ಐತಿಹಾಸಿಕ ಪಕ್ಷ ಕಾಂಗ್ರೆಸ್‍ನ 136ನೇ ಸಂಸ್ಥಾಪನಾ ದಿನದ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷೆ, ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಿರಿಯ ಮುಖಂಡ ಎ.ಕೆ. ಆಂಟೋನಿ ಅವರು ಗೈರು ಹಾಜರಾಗಿದ್ದಾರೆ. ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಡ್ರಾ ಹಾಗೂ ಪಕ್ಷದ ಹಿರಿಯ ಮುಖಂಡರು ಪಾಲ್ಗೊಂಡಿದ್ದರು.

ಹಿರಿಯ ಮುಖಂಡರಾದ ಗುಲಾಂ ನಬಿ ಆಜಾದ್ ಹಾಗೂ ಆನಂದ ಶರ್ಮ ಕಾರ್ಯಕ್ರಮ ನಿರೂಪಣೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದು ಮತ್ತೇ ಪಕ್ಷ ಸೇರಿಕೊಂಡ ಸಚಿನ್ ಪೈಲಟ್ ಸಂಸ್ಥಾಪನಾ ದಿನದ ಪ್ರಮುಖ ಆಕರ್ಷಣೆಯಾಗಿದ್ದರು.

ವಿದೇಶಕ್ಕೆ ಹಾರಿದ ರಾಹುಲ್:
ಈ ಕುರಿತು ಮಾತನಾಡಿದ ಪ್ರಿಯಾಂಕ ಗಾಂಧಿ ಇತ್ತೀಚಿನ ದಿನಗಳಲ್ಲಿ ಸೋನಿಯಾ ಗಾಂಧಿ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ರಾಹುಲ್ ಗಾಂಧಿ ಅವರು ಸ್ವಂತ ಕೆಲಸದಲ್ಲಿ, ಕೆಲ ದಿನಗಳ ಮಟ್ಟಿಗೆ ವಿದೇಶ ಪ್ರಯಾಣ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲಾಗಲಿಲ್ಲ. ಅವರು ನಿನ್ನೆಯೇ (ಭಾನುವಾರ) ಪ್ರಯಾಣ ಬೆಳೆಸಿದರು ಎಂದರು.

ಕೇಂದ್ರ ಸರ್ಕಾರ ರೈತರ ಧ್ವನಿಯನ್ನು ಕೇಳಬೇಕು ಹಾಗೂ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಆದರೆ, ರೈತರ ಬೃಹತ್ ಆಂದೋಲನವನ್ನು ತುಳಿಯುವ ಕೆಲಸ ಮಾಡುತ್ತಿದೆ. ಇದೊಂದು ರಾಜಕೀಯ ಪಿತೂರಿ. ಸಾವಿರಾರು ರೈತರು ರಾಜಧಾನಿ ದೆಹಲಿ ಬಾಗಿಲಲ್ಲಿ ಚಳಿಯನ್ನು ಎದುರಿಸಿ ಕುಳಿತುಕೊಂಡು ಸರ್ಕಾರದ ಹೊಸ ಕೃಷಿ ಕಾಯಿದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

ದೇಶದ ಸರಹದ್ದುಗಳನ್ನು ಸೈನಿಕರು ರಕ್ಷಿಸುತ್ತಿದ್ದರೆ, ದೇಶದ ಜನತೆ ಹೊಟ್ಟೆಯನ್ನು ತುಂಬಿಸುವ ರಕ್ಷಕ ಅನ್ನದಾತರು. ಅವರಿಗೆ ಬೆಲೆ ಕೊಡಬೇಕು ಎಂದರು. ಆದರೆ, ಯಾವ ದೇಶಕ್ಕೆ ಹೋದರು ಎಂಬ ಬಗ್ಗೆ ಮಾತ್ರ ಪ್ರಿಯಾಂಕ ಸೂಚಿಸಲಿಲ್ಲ.

Facebook Comments