ಈ ವಾರ ತೆರೆ ಮೇಲೆ ‘ಸೂಜಿದಾರ’ ಪೋಣಿಸಲಿದ್ದಾರೆ ಹರಿಪ್ರಿಯಾ

ಈ ಸುದ್ದಿಯನ್ನು ಶೇರ್ ಮಾಡಿ

ಚಂದನವನದಲ್ಲಿ ಹೊಸ ಬಗೆಯ ಪ್ರಯತ್ನಗಳಿಗೆ ಸದಾ ಪ್ರೇಕ್ಷಕರು ಗಮನ ಹರಿಸೋದು ಸರ್ವೆ ಸಾಮಾನ್ಯ. ಆ ನಿಟ್ಟಿನಲ್ಲಿ ಸೂಜಿದಾರ ಎಂಬ ವಿನೂತನ ಚಿತ್ರ ತೆರೆ ಮೇಲೆ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ನೀರ್‍ದೋಸೆ ಬೆಡಗಿ ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಹೊಸ ರೀತಿಯ ಪಾತ್ರಗಳ ಹುಡುಕಾಟದಲ್ಲಿದ್ದ ನಟಿ ಹರಿಪ್ರಿಯಾ ಅವರಿಗೆ ಸೂಜಿದಾರ ಚಿತ್ರದ ಪದ್ಮಾಳ ಪಾತ್ರವನ್ನು ನಿರ್ದೇಶಕ ಮನೇಶ್ ಬಡಿಗೇರ ಬಂದು ಹೇಳಿದಾಗ ಬಯಸಿದ ಪಾತ್ರ ತನ್ನನ್ನೇ ಹುಡುಕಿಕೊಂಡು ಬಂದದ್ದು ತುಂಬಾ ಖುಷಿ ನೀಡಿದೆ.

ರಂಗಭೂಮಿ ಪ್ರತಿಭೆಗಳ ಜೊತೆ ಕೆಲಸ ಮಾಡುವ ಮೂಲಕ ಒಂದಷ್ಟು ವಿಷಯಗಳನ್ನು ಕಲಿತಂತಾಯಿತು. ಅಲ್ಲದೆ, ಇಂಥ ಎಕ್ಸ್‍ಪೆರಿಮೆಂಟಲ್ ಚಿತ್ರಕ್ಕೆ ಬಂಡವಾಳ ಹಾಕಿರುವ ನಿರ್ಮಾಪಕರ ಸಹಕಾರವನ್ನು ಮೆಚ್ಚಲೇಬೇಕು.

ನನ್ನಲ್ಲಿರುವ ಮತ್ತೊಬ್ಬ ಕಲಾವಿದೆಯನ್ನು ಈ ಚಿತ್ರದ ಮೂಲಕ ಹೊರಹಾಕಿರುವುದಾಗಿ ಅವರು ಮೊನ್ನೆ ನಡೆದ ಚಿತ್ರದ ಟ್ರೈಲರ್ ಅನಾವರಣ ಸಮಾರಂಭದಲ್ಲಿ ಹೇಳಿದ್ದಾರೆ. ಇತ್ತ ಕಲಾತ್ಮಕವೂ ಅಲ್ಲದೆ ಅತ್ತ ಕಮರ್ಷಿಯಲ್ ಅಲ್ಲದ ಬ್ರಿಡ್ಜ್ ಸಿನಿಮಾ ಸೂಜಿದಾರ ಎನ್ನಬಹುದು.

ಈ ಚಿತ್ರವನ್ನು ಇದೇ ಮೊದಲ ಬಾರಿಗೆ ಮನೇಶ್ ಬಡಿಗೇರ್ ನಿರ್ದೇಶನ ಮಾಡಿದ್ದಾರೆ. ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಸಂಚಿತ್ ಫಿಲಂಸ್‍ನ ವೆಂಕಟ್‍ಗೌಡ ವಹಿಸಿಕೊಂಡಿದ್ದು, 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದಾರಂತೆ.

ಈ ಚಿತ್ರಕ್ಕೆ ಈಗಾಗಲೇ ಚಿತ್ರಮಂದಿರದಿಂದ ಹೆಚ್ಚು ಬೇಡಿಕೆ ಬರುತ್ತಿದೆಯಂತೆ. ಹರಿಪ್ರಿಯಾ ಜೊತೆ ರಂಗಭೂಮಿ ಪ್ರತಿಭೆ ಯಶ್ವಂತ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈಗಾಗಲೇ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ಐದೂವರೆ ಲಕ್ಷಕ್ಕೂ ಹೆಚ್ಚು ಚಿತ್ರಾಸಕ್ತರಿಂದ ವೀಕ್ಷಣೆಗೊಂಡು ಅಪಾರ ಮೆಚ್ಚುಗೆ ಪಡೆದಿದೆ. ಲೇಖಕ ಇಂದ್ರಕುಮಾರ್ ಅವರ ಸಣ್ಣಕಥೆಯನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರಕ್ಕೆ ಚಿತ್ರ ಕಥೆ ಹಾಗೂ ಸಂಭಾಷಣೆಯನ್ನು ರಚಿಸಲಾಗಿದೆ.

ಪ್ರದೀಪ್ ವರ್ಮ ಚಿತ್ರದ ಹಿನ್ನೆಲೆ ಸಂಗೀತ ನಿರ್ವಹಿಸಿದ್ದು, ಭಿನ್ನ ಷಡ್ಜ ಚಿತ್ರದ ಹಾಡುಗಳನ್ನು ಕಂಫೋಜ್ ಮಾಡಿ, ಅಶೋಕ್ ವಿ.ರಾಮನ್ ಛಾಯಾಗ್ರಹಣ ಮಾಡಿದ್ದಾರೆ.

ಅಭಿಜಿತ್ ಕೋಟೆಗಾರ್ ಮತ್ತು ಸಚ್ಚೀಂದ್ರನಾಥ್ ನಾಯಕ್ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮೈಮನ ಫೋಣಿಸೋ ಸೂಜಿದಾರ ಎಂಬ ಅಡಿಬರಹ ಹೊತ್ತು ಈ ಚಿತ್ರ ಬಿಡುಗಡೆಯಾಗುತ್ತಿದೆ.

ಕಾಲವೆಂಬ ಕೊನೆಯಿಲ್ಲದ ದಾರ ನಮ್ಮನ್ನೆಲ್ಲ ನೇಯುತ್ತಿದೆ ಎಂಬ ಸಂದೇಶ ಈ ಚಿತ್ರದಲ್ಲಿದೆ. ಹೊಸತನ ನಿರೀಕ್ಷಿಸುವ ಸಿನಿ ಪ್ರಿಯರಿಗಾಗಿ ಬೆಳ್ಳಿ ಪರದೆ ಮೇಲೆ ಸೂಜಿದಾರ ಬರುತ್ತಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ