ಮರಣೋತ್ತರ ಪರೀಕ್ಷೆಯಲ್ಲಿ ನಟಿ ಸೌಜನ್ಯ ಸಾವಿನ ಸೀಕ್ರೆಟ್ ಬಯಲು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.18- ಹಲವು ಅನುಮಾನಗಳಿಗೆ ಕಾರಣವಾಗಿದ್ದ ಸ್ಯಾಂಡಲ್ ವುಡ್ ನಟಿ ಸೌಜನ್ಯ ಸಾವಿನ ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎಂಬುದು ದೃಢಪಟ್ಟಿದೆ. ದೊಡ್ಡಬೆಲೆ ಗ್ರಾಮದ ಅಪಾರ್ಟ್‍ಮೆಂಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟಿ ಮೃತ ದೇಹ ಪತ್ತೆಯಾಗಿತ್ತು. ಸೌಜನ್ಯ ಎಂದೇ ಹೆಸರಾಗಿದ್ದ ಸವಿ ಮಾದಪ್ಪ ಅವರದು ಆತ್ಮಹತ್ಯೆಯಲ್ಲ ಕೊಲೆ ಎಂಬ ಅನುಮಾನ ವ್ಯಕ್ತಪಡಿಸಿ ಪೋಷಕರು ಕುಂಬಳಗೋಡು ಪೋಲೀಸರಿಗೆ ದೂರು ನೀಡಿದ್ದರು.

ದೂರಿನನ್ವಯ ಪೋಲಿಸರು ಸವಿ ಮಾದಪ್ಪ ಗೆಳೆಯ ವಿವೇಕ್ ಸೇರಿದಂತೆ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಹಲವು ಮಾಹಿತಿ ಸಂಗ್ರಹಿಸಿದ್ದರು. ಇದರ ಬೆನ್ನಲ್ಲೇ ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಆತ್ಮಹತ್ಯೆ ಎನ್ನುವುದು ದೃಢಪಟ್ಟು ಎಲ್ಲಾ ಸಂಶಯಗಳಿಗೆ ತೆರೆ ಎಳೆದಿದೆ.
ಸ್ವತಃ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮರಣೋತ್ತರ ಪರೀಕ್ಷೆಯ ವರದಿ ಪೋಲೀಸರ ಕೈ ಸೇರಿದ್ದು, ಅದರ ಪ್ರಕಾರ, ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢ ಪಟ್ಟಿದೆ.

ಸೆ.30ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಸವಿ ಮಾದಪ್ಪ ಡೆತ್ ನೋಟ್ ಬರೆದಿಟ್ಟಿದ್ದರು. ಆ ಪತ್ರದಲ್ಲಿ ಗೆಳೆಯ ವಿವೇಕ್ ಬಳಿ ಕ್ಷಮೆ ಕೇಳಿದ್ದರು. ಜೀವನದಲ್ಲಿ ಅಂದು ಕೊಂಡಿದ್ದು ಆಗಲಿಲ್ಲ. ಕೆಲಸದ ವಿಚಾರದಲ್ಲಿ ಯಶಸ್ಸು ಸಿಗಲಿಲ್ಲ. ಹಣಕಾಸಿನ ಸಮಸ್ಯೆಯಿಂದ ಸಾಲ ಮಾಡಿಕೊಳ್ಳುವಂತಾಯಿತು. ಹೆಣ್ಣುಮಕ್ಕಳಿಗೆ ಆಗುವ ದೈಹಿಕ ಸಮಸ್ಯೆಯಿಂದಲೂ ಸಾಕಷ್ಟು ನೋವು ಅನುಭವಿಸಬೇಕಾಯಿತು.

ಈ ಎಲ್ಲಾ ಕಾರಣದಿಂದ ಖಿನ್ನತೆ ಆವರಿಸಿತು. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸವಿ ಮಾದಪ್ಪ 5 ಪುಟಗಳ ಡೆತ್ ನೋಟïನಲ್ಲಿ ವಿವರಿಸಿದ್ದರು.

ಆತ್ಮಹತ್ಯೆ ಹಿಂದಿನ ದಿನ ಇನ್‍ಸ್ಟಾಗ್ರಾಮïನಲ್ಲಿ ಅವರು ಕೆಲವೊಂದು ಪೋಸ್ಟ್ ಗಳನ್ನು ಮಾಡಿದ್ದರು. ಯಾರನ್ನೂ ಕೀಳಾಗಿ ಕಾಣಬೇಡಿ. ನಗುತ್ತಾ ಇರುವ ವ್ಯಕ್ತಿಗಳ ಹಿಂದೆಯೂ ಸಾಕಷ್ಟು ನೋವಿರುತ್ತದೆ, ಆ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ ಎಂದು ಸವಿ ಬರೆದು ಕೊಂಡಿದ್ದರು.
ಕನ್ನಡ ಚಿತ್ರರಂಗದಲ್ಲಿ ಆಗತಾನೇ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ನಟಿ ಸವಿ ಮಾದಪ್ಪ ಅವರು ಆತ್ಮಹತ್ಯೆಗೆ ಶರಣಾಗಿದ್ದು ದುರಂತ.

Facebook Comments