ಖಾಸಗಿ ಆಸ್ಪತ್ರೆಗಳ ಅಸಹಕಾರಕ್ಕೆ ಶಾಸಕಿ ಸೌಮ್ಯರೆಡ್ಡಿ ಆಕ್ರೋಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.4- ಸರ್ಕಾರ ಅಧಿಸೂಚಿಸಿ ಪ್ರಕಟಿಸಿರುವ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸ್ಪಂದಿಸುತ್ತಿಲ್ಲ ಎಂದು ಜಯನಗರ ಕ್ಷೇತ್ರದ ಶಾಸಕಿ ಸೌಮ್ಯರೆಡ್ಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರ. ಪ್ರತಿನಿತ್ಯ ಸಾವಿರಾರು ಜನಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆಯ ಬಿಸಿ ಶಾಸಕರಿಗೆ ತಟ್ಟಿದೆ. ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ನಡು ರಸ್ತೆಯಲ್ಲಿ ಹೆಣಗಳು ಬೀಳುತ್ತಿವೆ. ಸರ್ಕಾರ ಕೋವಿಡ್ ನಿಯಂತ್ರಣ ಮತ್ತು ಚಿಕಿತ್ಸೆಗೆ ಎಲ್ಲಾ ಸೌಲಭ್ಯ ಕಲ್ಪಿಸಿರುವುದಾಗಿ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಪರಿಸ್ಥಿತಿ ಹದಗೆಟ್ಟು ಹೋಗಿದೆ.  ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿಯೂ ಆಗಿರುವ ಶಾಸಕಿ ಸೌಮ್ಯರೆಡ್ಡಿ ಅವರು, ಸರ್ಕಾರ ಚಿಕಿತ್ಸೆಗಾಗಿ ಗುರುತಿಸಿರುವ ಖಾಸಗಿ ಆಸ್ಪತ್ರೆಗಳು ಸ್ಪಂದಿಸುತ್ತಿಲ್ಲ.

ಒಂದರ ಹಿಂದೆ ಒಂದು ಆಸ್ಪತ್ರೆಗೆ ರಾತ್ರಿ ಒಂಬತ್ತು ಗಂಟೆವರೆಗೂ ಕರೆ ಮಾಡಿ ಸಾಕಾಯಿತು. ಆಸ್ಪತ್ರೆಯವರು ಸರಿಯಾಗಿ ಸ್ಪಂದಿಸುತ್ತಿಲ್ಲ, ಕೆಲವು ನಂಬರ್‍ಗಳು ಸ್ವಿಚ್‍ಆಫ್ ಆಗಿವೆ. ಕರೆ ಸ್ವೀಕರಿಸಿದವರು ಬೆಡ್ ಖಾಲಿ ಇಲ್ಲ ಎಂದು ಹೇಳುತ್ತಿದ್ದಾರೆ. ಐಸಿಯು, ಆಕ್ಸಿಜನ್ ಹೊಂದಿರುವ ಬೆಡ್‍ಗಳು ಲಭ್ಯವಾಗುತ್ತಿಲ್ಲ.

ತೀರಾ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಪರವಾಗಿ ಹಲವು ಬಾರಿ ಮನವಿ ಮಾಡಿದ ಬಳಿಕ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ರಾಜ್ಯದ ಆರೋಗ್ಯ ಸೇವೆ ಕರುಣಾಜನಕವಾಗಿದೆ. ಒಬ್ಬ ರೋಗಿಗೆ ಚಿಕಿತ್ಸೆ ಕೊಡಿಸಲು ಗಂಟೆ ಗಟ್ಟಲೆ ಪ್ರಯತ್ನಿಸಬೇಕಾದ ದುಸ್ಥಿತಿಯಿದೆ ಎಂದು ಅವರು ಟ್ವಿಟರ್‍ನಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದಿನೇ ದಿನೇ ಸೋಂಕು ಹೆಚ್ಚಾಗುತ್ತಿದೆ. ಪರೀಕ್ಷಾ ವರದಿಗಳು ವಿಳಂಬವಾಗುತ್ತಿವೆ. ಆ್ಯಂಬ್ಯುಲೆನ್ಸ್, ಬೆಡ್‍ಗಳು, ವೆಂಟಿಲೆಟರ್, ಐಸಿಯು ಬೆಡ್‍ಗಳ ಕೊರತೆ ತೀವ್ರವಾಗಿದೆ.

ಹದಗೆಡುತ್ತಿರುವ ಪರಿಸ್ಥಿತಿ ನೋಡಿದರೆ ನಿದ್ದೆ ಬರುತ್ತಿಲ್ಲ. ಐಟಿ ಸಿಟಿ ಬೆಂಗಳೂರಿನಲ್ಲಿ 6297 ಮಂದಿ ಸೋಂಕಿತರಿದ್ದಾರ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಜನರ ಕಷ್ಟ ನಿವಾರಣೆಗೆ ಏನಾದ್ರು ಮಾಡಿ ಎಂದು ಮನವಿ ಮಾಡಿದ್ದಾರೆ.ಶಾಸಕಿಯಾದ ನನ್ನ ಸಮಸ್ಯೆಯೇ ಇಷ್ಟು ಘೋರವಾಗಿದ್ದರೆ ಇನ್ನೂ ಜನಸಾಮಾನ್ಯರ ಪಾಡೇನು ಎಂದು ಅವರು ಪ್ರಶ್ನಿಸಿದ್ದಾರÉ.

Facebook Comments