ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಇಂದು ಚುನಾವಣೆ : ಮಂದಗತಿಯಲ್ಲಿ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ, ಅ.28- ಆಗ್ನೇಯ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ 8 ಗಂಟೆಗೆ ನಗರದ ಸರ್ಕಾರಿ ಪ್ರೌಢಶಾಲೆ ಯಲ್ಲಿ ಆರಂಭಗೊಂಡಿದ್ದು, ಮಂದಗತಿಯಲ್ಲೇ ಮತದಾನ ಮುಂದುವರೆದಿತ್ತು. ಆಗ್ನೇಯ ಪದವೀಧರ ಕ್ಷೇತ್ರ ಒಟ್ಟು ಐದು ಜಿಲ್ಲಾ ವ್ಯಾಪ್ತಿ ಒಳಗೊಂಡಿದ್ದು, ಕೊಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾಯನ್ನು ಹೊಂದಿದ್ದು, ಇಂದು ನಡೆಯುತಿರುವ ಮತದಾನದಲ್ಲಿ 109,105 ಮತದಾರರು 15 ಅಭ್ಯರ್ಥಿ ಗಳ ಭವಿಷ್ಯವನ್ನು ನಿರ್ಣಯಿಸುವರು.

ಚಿಕ್ಕಬಳ್ಳಾಪುರ ಜಿಲ್ಲಾಯ ಮತ ಕ್ಷೇತ್ರದಲ್ಲಿ ಒಟ್ಟು 15 ಸಾವಿರಕ್ಕು ಅಧಿಕ ಮತದಾರರು ಇದ್ದು, ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ.ಗೌಡ, ಕಾಂಗ್ರೆಸ್ ಪಕ್ಷದಿಂದ ರಮೇಶ್ ಬಾಬು ಜೆಡಿಎಸ್ ನಿಂದ ತೂಪಲ್ಲಿ ಆರ್.ಚೌಡರೆಡ್ಡಿ ಒಳಗೊಂಡಂತೆ ಪಕ್ಷೇತರರು ಸೇರಿದಂತೆ ಒಟ್ಟು 15 ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಈ ಪೈಕಿ ಚಿಕ್ಕಬಳ್ಳಾಪುರ ನಗರದ ಮತಗಟ್ಟೆಯಲ್ಲಿ ನಾಲ್ಕು ಕೊಠಡಿಗಳಲ್ಲಿ ಮತದಾನ ನಡೆಯುತಿದ್ದು, ಸರಿಸುಮಾರು 2800ಕ್ಕೂ ಅಧಿಕ ಮಂದಿ ಮತದಾರರು ಮತ ಚಲಾಯಿಸುವರು.
ಮತಗಟ್ಟೆ ಒಳಗೆ ಮತದಾನ ನಡೆಯುತಿದ್ದರೆ ಮತಗಟ್ಟೆ ಹೊರ ಭಾಗದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮತ್ತು ಪಕ್ಷೇತರರ ಬೆಂಬಲಿಗರು ಮತದಾರರನ್ನು ಓಲೈಸಲು ಕಸರತ್ತು ನಡೆಸುತಿದ್ದದ್ದು ಕಂಡು ಬಂದಿದ್ದರೂ ಸಹಾ ಯಾವುದೇ ತರನಾದ ಸಂಘರ್ಷ ಇಲ್ಲದೆ ಸೌಜ್ಯನ್ಯದಿಂದ ಮತದಾರರ ಓಲೈಕೆ ನಡೆಯುತಿರುವುದು ಚಿಕ್ಕಬಳ್ಳಾಪುರವು ಶಾಂತಿ ಸೌಹಾರ್ಧತೆಗೆ ಹೆಸರಾದ ಕ್ಷೇತ್ರ ಎಂಬುದಕ್ಕೆ ಉದಾಹರಣೆ ಎಂಬಂತಾಗಿತ್ತು.

ಮತಗಟ್ಟೆ ನಿರ್ವಹಣೆ ಹೊತ್ತ ತಹಸೀಲ್ದಾರ್ ನಾಗಪ್ರಶಾಂತ್ ಅವರು ಮತದಾನ ನಡೆಯುತಿದ್ದರ ಮೇಲುಸ್ತುವಾರಿ ವಹಿಸಿದ್ದರು. ಸ್ಥಳಕ್ಕೆ ಡಿವೈಎಸ್ಪಿ ಕೆ.ರವಿಶಂಕರ್, ವೃತ್ತ ನಿರೀಕ್ಷಕ ಪ್ರಶಾಂತ್, ನಗರ ಹಾಗೂ ಗ್ರಾಮಾಂತರ ಸಬ್‍ಇನ್ಸ್ ಪೆಕ್ಟರ್‍ಗಳಾದ ಹೊನ್ನೇಗೌಡ ಹಾಗೂ ಚೇತನ್ ಸೇರಿದಂತೆ ಇನ್ನಿತರ ಪೊಲೀಸ್ ಅಧಿಕಾರಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಏರ್ಪಡಿಸಿದ್ದರು.

Facebook Comments