ಜನತಾ ಕಫ್ರ್ಯೂ ಯಶಸ್ವಿಗೊಳಿಸಿದ ರಾಜ್ಯದ ಜನರಿಗೆ ಸ್ಪೀಕರ್ ಕಾಗೇರಿ ಅಭಿನಂದನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.23- ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಸ್ಪಂದಿಸಿ ಸ್ವಯಂ ಪ್ರೇರಿತರಾಗಿ ಜನತಾ ಕಫ್ರ್ಯೂ ಯಶಸ್ವಿಗೊಳಿಸಿದ ರಾಜ್ಯದ ಜನರಿಗೆ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನೆ ಸಲ್ಲಿಸಿದರು.

ಇಂದು ಬೆಳಗ್ಗೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷರು ,ಜನತಾ ಕಫ್ರ್ಯೂ ಅಭೂತ ಪೂರ್ವವಾಗಿ ಯಶಸ್ವಿಯಾಗಿದೆ. ಪ್ರಧಾನಿಯವರ ಕರೆಗೆ ಜನರು ಓಗೊಟ್ಟು ಮನೆಯಲ್ಲೇ ಇದ್ದುಕೊಂಡು ಯಶಸ್ವಿಗೊಳಿಸಿದ್ದಾರೆ. ಮಾರಕ ಕೊರೋನಾ ತಡೆಗಟ್ಟಲು ರಾಜ್ಯ , ಕೇಂದ್ರ ಸರ್ಕಾರಗಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಕೋರಿದರು.

ಸಚಿವರು, ಶಾಸಕರು ತಮ್ಮನ್ನು ಭೇಟಿ ಮಾಡಿ ಕೊರೋನಾ ಭೀತಿಯ ಹಿನ್ನಲೆಯಲ್ಲಿ ಅಧಿವೇಶನ ಮುಂದೂಡುವಂತೆ ಮನವಿ ಮಾಡಿದ್ದಾರೆ. ಸದನದ ಕಾರ್ಯಕಲಾಪಗಳ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಲಾಗುವುದು ಎಂದು ಹೇಳಿದರು.

# ಅಧಿವೇಶನ ಮುಂದೂಡಿಕೆಗೆ ಆಗ್ರಹ:
ಕಾಂಗ್ರೆಸ್‍ನ ಆರ್.ವಿ.ದೇಶಪಾಂಡೆ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದು ಕೊಳ್ಳುತ್ತಿರುವ ಹಲವು ಕ್ರಮಗಳು ಸ್ವಾಗತಾರ್ಹ. ಜನತಾ ಕಫ್ರ್ಯೂ ಆಚರಿಸಿದ ಜನರಿಗೆ ಅಭಿನಂದನೆ ಸಲ್ಲಿಸಬೇಕು. ಕೋವಿಡ್-19ಅನ್ನು ಒಕ್ಕೊರಲಿನಿಂದ ಎದುರಿಸಬೇಕು. ಈ ರೋಗದಿಂದ ಇಡೀ ವಿಶ್ವಕ್ಕೆ ಮುಕ್ತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.

ಈಗಾಗಲೇ 9 ಜಿಲ್ಲೆಗಳು ಬಂದ್ ಆಗಿವೆ. ಸಿಎಂ ಬಜೆಟ್‍ಗೆ ಲೇಖಾನುದಾನ ಪಡೆದು ಅಧಿವೇಶನ ಮುಂದೂಡಬೇಕು. ಜನರಿಗೆ ನಿರ್ಬಂಧ ಹೇರಿ ಇಲ್ಲಿ ಅಧಿವೇಶನ ನಡೆಸಿದರೆ ಜನರು ತಪ್ಪು ತಿಳಿಯಬಹುದು ಈ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು. ಶಾಸಕ ಸತೀಶ್ ರೆಡ್ಡಿ ಮಾತನಾಡಿ ,ಸೋಂಕು ಹರಡುವುದನ್ನು ತಡೆಯಲು ಮಾ.31ರ ತನಕ ಗಾರ್ಮೆಂಟ್ಸ್‍ಗಳಿಗೆ ರಜೆ ಕೊಡಬೇಕು ಎಂದು ಒತ್ತಾಯಿಸಿದರು.

Facebook Comments

Sri Raghav

Admin