ಯಾರಿಗೆ ರಾಜೀನಾಮೆ ನೀಡಬೇಕೆಂಬ ಕನಿಷ್ಠ ಜ್ಞಾನ ಶಾಸಕರಿಗಿರಬೇಕು : ಸ್ಪೀಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.3- ಶಾಸಕರಾದವರಿಗೆ ಯಾರಿಗೆ ರಾಜೀನಾಮೆ ಕೊಡಬೇಕು ಎಂಬ ತಿಳುವಳಿಕೆ ಇರಬೇಕು. ರಾಷ್ಟ್ರಪತಿಗೆ ಬೇಕಾದರೂ ಕೊಡಲಿ ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್‍ಸಿಂಗ್ ಅವರು ರಾಜ್ಯಪಾಲರನ್ನು ಭೇಟಿಯಾದ ಬಗ್ಗೆ ಗಮನ ಸೆಳೆದಾಗ ಬಿಡುವಿದ್ದರೆ ದೆಹಲಿಗೂ ಹೋಗಿ ರಾಷ್ಟ್ರಪತಿಗೂ ಕೊಡಲಿ.

ಯಾರೇ ಒಬ್ಬ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಕಾನೂನು ರೀತಿ ನಿಯಮಾವಳಿಗಳನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಕರ್ನಾಟಕ ವಿಧಾನಸಭೆಯ ಸದಸ್ಯರಾಗಿರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅದರ ಬಗ್ಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಯಾರು ಬೇಕಾದರೂ ಆಕ್ಷೇಪ ವ್ಯಕ್ತಪಡಿಸಬಹುದು.

ಸಭಾಧ್ಯಕ್ಷರಿಗೆ ಪರಮಾಧಿಕಾರ ಇಲ್ಲ. ಸಂವಿಧಾನ, ಕಾನೂನು ನಿಯಮಾವಳಿ ಪ್ರಕಾರ ಜವಾಬ್ದಾರಿಯನ್ನು ಅವರು ನಿರ್ವಹಿಸಬೇಕು ಅಷ್ಟೆ. ಶಾಸಕರ ರಾಜೀನಾಮೆ ಒಪ್ಪುವ, ಒಪ್ಪದಿರುವ ತೀರ್ಮಾನ ಮಾಡಬಹುದು ಎಂದರು.

ಆನಂದ್‍ಸಿಂಗ್ ಅವರು ರಾಜೀನಾಮೆ ನೀಡಿರುವ ಪತ್ರ ತಲುಪಿದೆ. ಅವರು ಒಂದು ಪಕ್ಷದ ಶಾಸಕರಾಗಿದ್ದಾರೆ. ಆ ಪಕ್ಷದ ಹಾಗೂ ಜನರ ಆಕ್ಷೇಪವೇನಾದರೂ ಇದೆಯೋ ಗೊತ್ತಿಲ್ಲ. ರಾಜೀನಾಮೆಗೆ ಕಾರಣವೂ ಗೊತ್ತಿಲ್ಲ. ಚುನಾಯಿತ ಪ್ರತಿನಿಧಿಯ ನಡವಳಿಕೆ ಇಷ್ಟವಾಗದಿದ್ದರೆ ಅವರನ್ನು ವಾಪಸ್ ಕಳುಹಿಸುವ ಅವಕಾಶವೂ ಇಲ್ಲ ಎಂದು ತಿಳಿಸಿದರು.

ಹೆಚ್ಚು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆ ಎಂಬ ಆಶಯವಿತ್ತು. ಹೀಗಾಗಿ ಸಾರ್ವಜನಿಕರ ಅಭಿಪ್ರಾಯ ಕೇಳಬೇಕಾದ ಸಂದರ್ಭವಿದೆ. ತಾವು ಯಾರನ್ನೂ ರಾಜೀನಾಮೆ ಬಗ್ಗೆ ಆಕ್ಷೇಪ ಕೊಡಿ ಎನ್ನುವುದಿಲ್ಲ. ಆಕ್ಷೇಪ ಬರದಿದ್ದರೆ ಏನೂ ಮಾಡಲಾಗುವುದಿಲ್ಲ.

ಇಬ್ಬರು ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಯಾರು ಹೇಳಿದ್ದಾರೆ. ಎರಡು ಕೊಟ್ಟಿದ್ದರೆ ಒಂದು ಇಟ್ಟುಕೊಂಡು ಮತ್ತೊಂದು ಬಚ್ಚಿಟ್ಟುಕೊಳ್ಳಲು ಆಗುತ್ತಾ ಎಂದು ಹೇಳಿದರು.

Facebook Comments

Sri Raghav

Admin