‘ರಾಜಕೀಯ ಕೊಳಚೆಯಲ್ಲಿ ನಿಂತು ವಾಸನೆ ಎಂದು ಹೇಳೋದ್ರಲ್ಲಿ ಅರ್ಥವಿಲ್ಲ’ : ಸ್ಪೀಕರ್ ರಮೇಶ್ ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9-ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ನಂತರ ಶಾಸಕ ಸ್ಥಾನಕ್ಕೆ ನೀಡಲಾಗಿರುವ ರಾಜೀನಾಮೆ ಪತ್ರಗಳ ಕುರಿತು ನಿರ್ಧಾರ ಪ್ರಕಟಿಸುವುದಾಗಿ ಸ್ಪೀಕರ್ ರಮೇಶ್‍ಕುಮಾರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಎಂದರೆ ಕೊಳಚೆ ಪ್ರದೇಶದಲ್ಲಿ ನಿಂತು ವಾಸನೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹಾಗಾಗಿ ರಾಜಕೀಯ ಎಂಬ ಕೊಳಚೆಪ್ರದೇಶದಲ್ಲಿರುವ ನಾನು ಎಲ್ಲ ಪರಿಸ್ಥಿತಿಗಳಿಗೂ ಹೊಂದಿಕೊಂಡು ಹೋಗಬೇಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಶಾಸಕರ ರಾಜೀನಾಮೆ ಅತ್ಯಂತ ಕೆಟ್ಟ ಬೆಳವಣಿಗೆ. ಜನ ಸಾಮಾನ್ಯರಿಗೆ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸುವ ಅರ್ಧ ಭಾಗದ ಅಧಿಕಾರವನ್ನು ಅಷ್ಟೇ ನೀಡಿದ್ದೇವೆ. ಅವರನ್ನು ಸರಿಯಾಗಿ ಕೆಲಸ ಮಾಡದಿದ್ದಾಗ ವಾಪಸ್ ಕರೆಸಿಕೊಳ್ಳುವ ಅಧಿಕಾರ ಅವರಿಗಿಲ್ಲ.

ಶಾಸಕರನ್ನು ಆರಿಸಿಕಳುಹಿಸುವುದು ಜನಸಾಮಾನ್ಯರು. ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಜನರ ಅಭಿಪ್ರಾಯ ಆಲಿಸುವುದು ಬಹಳ ಮುಖ್ಯವಾಗಿರುತ್ತದೆ. ಹೀಗಾಗಿ ನಾನು ಜನಸಾಮಾನ್ಯರ ಅಭಿಪ್ರಾಯವನ್ನ ಕೇಳುತ್ತೇನೆ ಎಂದರು.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಎಂಬುದು ಮದುವೆಯಂತಾಗಿದೆ. ಮದುವೆಯಲ್ಲಿ ತಾಳಿ ಕಟ್ಟುವುದು, ಪುರೋಹಿತ ಹೇಳಿದ ಮಂತ್ರ ಅರ್ಥ ಮಾಡಿಕೊಳ್ಳುವುದು ಪ್ರಮುಖವಾಗಬೇಕು. ಆದರೆ ವಾದ್ಯ, ತಾಳಮೇಳ ಅಡುಗೆಯವರೇ ಮದುವೆಯಲ್ಲಿ ಪ್ರಮುಖರಾಗುತ್ತಿದ್ದಾರೆ.

ಮದುವೆಗೆ ಬಂದ ಜನ ವರ ತಾಳಿ ಕಟ್ಟಿದ್ದನಾ , ಪುರೋಹಿತರ ಮಂತ್ರ ಅರ್ಥವಾಯಿತೋ ಇಲ್ಲವೋ ಎಂಬ ಯಾವುದನ್ನೂ ಗಮನಿಸುವುದಿಲ್ಲ. ಅಕ್ಷತೆ ಹಾಕುವಷ್ಟು ವ್ಯವಧಾನ ಜನರಿಗಿಲ್ಲ. ತಾಳಮೇಳಗಳ ಸದ್ದೆ ಜಾಸ್ತಿಯಾಗಿರುತ್ತದೆ. ಆಡಂಬರವೇ ಹೆಚ್ಚಾಗಿದ್ದು, ಸಂಪ್ರದಾಯದ ಮದುವೆ ನಶಿಸಿ ಹೋಗಿದೆ. ಅದೇ ರೀತಿ ಪ್ರಜಾಪ್ರಭುತ್ವದಲ್ಲಿ ವಿಧಾನಮಂಡಲದ ಚರ್ಚೆಗಳು ನಗಣ್ಯವಾಗುತ್ತಿವೆ.

ಜನಸಾಮಾನ್ಯರ ಸಮಸ್ಯೆಗಳಿಗಿಂತಲೂ ರಾಜಕೀಯ ಚರ್ಚೆಗಳೇ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.  ಶಾಸಕರ ರಾಜೀನಾಮೆ ವಿಷಯದಲ್ಲಿ ಕಾನೂನಾತ್ಮಕವಾಗಿ ಜನಸಾಮಾನ್ಯರ ಅಭಿಪ್ರಾಯದಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ. ಹೇಳಿದಂತೆ ನಡೆದುಕೊಳ್ಳುವುದು ನನ್ನ ಹವ್ಯಾಸ. ಶನಿವಾರ 11.30ರವರೆಗೆ ಕಚೇರಿಯಲ್ಲಿದ್ದೆ. ನಾನು ಹೊರಟ ಮೇಲೆ ಶಾಸಕರು ಕಚೇರಿಗೆ ಬಂದಿದ್ದಾರೆ. ಅದಕ್ಕೂ ಮೊದಲು ಯಾರು ನನ್ನನ್ನು ಸಂಪರ್ಕಿಸಿರಲಿಲ್ಲ.

ರಾಜೀನಾಮೆ ಸಲ್ಲಿಸುವುದಾಗಿ ಹೇಳಿರಲಿಲ್ಲ. ಯಾವುದೇ ಮಾಹಿತಿ ಇಲ್ಲದೆ ಇರುದುದ್ದರಿಂದ ಅನ್ಯ ಕಾರ್ಯ ನಿಮಿತ್ತ ಹೊರಗೆ ಹೋಗಿದ್ದೆ. ಆನಂತರ ಶಾಸಕರು ಆಗಮಿಸಿದ್ದು, ಅವರ ರಾಜೀನಾಮೆಯನ್ನು ತೆಗೆದುಕೊಂಡು ಸ್ವೀಕೃತಿ ಪತ್ರ ವನ್ನು ನನ್ನ ಆಪ್ತ ಸಹಾಯಕರಿಗೆ ನೀಡುವಂತೆ ಸೂಚನೆ ನೀಡಿದ್ದೆ.

ಅದರಂತೆ ಅವರು ನಡೆದುಕೊಂಡಿದ್ದಾರೆ. ಈಗ ಕಚೇರಿಗೆ ಹೋಗುತ್ತೇನೆ. ರಾಜೀನಾಮೆ ಪತ್ರಗಳನ್ನು ಪರಿಶೀಲಿಸುತ್ತೇನೆ. ಅದೇ ಸಂದರ್ಭಗಳಲ್ಲಿ ಬೇರೆ ಬೇರೆ ಆಕ್ಷೇಪಗಳು, ದೂರುಗಳು ಬಂದಿದ್ದರೆ ಅವುಗಳನ್ನೂ ಪರಿಶೀಲಿಸುವುದಾಗಿ ಅವರು ತಿಳಿಸಿದರು.

Facebook Comments

Sri Raghav

Admin