ವಿಧಾನಭೆಯಲ್ಲಿ ಕಿಕ್ಕೇರಿಸಿತ್ತು ‘ಎಣ್ಣೆ’ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Rameshಬೆಳಗಾವಿ(ಸುವರ್ಣಸೌಧ), ಡಿ.11- ಸಂಪೂರ್ಣ ಪಾನ ನಿಷೇಧದ ಪ್ರಶ್ನೆಗೆ ಉತ್ತರ ನೀಡಬೇಡಿ. ಪ್ರಶ್ನೆ ಕೇಳಿದ ಶಾಸಕರು ಸಂಜೆ ಭೇಟಿಯಾಗಲಿ, ಚರ್ಚೆ ಮಾಡಿ ಆನಂತರ ನಿರ್ಧಾರ ಮಾಡೋಣ ಎಂದು ಹೇಳುವ ಮೂಲಕ ಸ್ಪೀಕರ್ ರಮೇಶ್‍ಕುಮಾರ್ ಅವರು ವಿಧಾನಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಘಟನೆ ನಡೆಯಿತು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು, ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಲ್ಲದೆ, ರಾಜ್ಯದಲ್ಲಿ ಪಾನ ನಿಷೇಧ ಜಾರಿಗೆ ತರುವ ಚಿಂತನೆ ಇದೆಯೇ ಎಂದು ಇಲಾಖೆ ಜವಾಬ್ದಾರಿಯನ್ನೂ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಪ್ರಶ್ನಿಸಿದರು.

ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ರಮೇಶ್‍ಕುಮಾರ್ ಅವರು, ಮೊದಲ ಪ್ರಶ್ನೆಗೆ ಉತ್ತರ ನೀಡಿ, ಎರಡನೇ ಪ್ರಶ್ನೆ ಪಾನೀಯ ನಿಷೇಧದ ಬಗ್ಗೆ ಇದೆ. ಅದು ಶಾಸಕರು ಕೇಳಿರುವ ಲಿಖಿತ ಪ್ರಶ್ನೆಯಲ್ಲಿ ಅಡಕವಾಗಿಲ್ಲ. ಹಾಗಾಗಿ ಅದಕ್ಕೆ ಉತ್ತರ ನೀಡಬೇಡಿ. ಶಾಸಕರು ಸಂಜೆ ಬರಲಿ ಚರ್ಚೆ ಮಾಡಿ ಆನಂತರ ನಿರ್ಧಾರ ಮಾಡೋಣ ಎಂದರು. ಸಂಜೆ ಚರ್ಚೆಯಾದರೆ ಪಾನೀಯ ನಿಷೇಧವಾಗುವುದಿಲ್ಲ ಎಂದು ಶಾಸಕ ಸಿ.ಟಿ.ರವಿ ಹೇಳಿದಾಗ, ಸಂಜೆಯ ಚರ್ಚೆಗೆ ನೀವೂ ಬರಬಹುದು ಎಂದು ಸ್ಪೀಕರ್ ಆಹ್ವಾನ ನೀಡಿದರು. ಇದು ಸದನವನ್ನು ನಗೆಗಡಲಿನಲ್ಲಿ ಮುಳುಗಿಸಿ ಹಗುರವಾದ ವಾತಾವರಣ ಸೃಷ್ಟಿಸಿತು.

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪಾನ ನಿಷೇಧದ ಬಗ್ಗೆ ಪ್ರಶ್ನೆ ಮಾಡುವುದು ಅಪ್ಪಚ್ಚು ರಂಜನ್ ಅವರಿಗೆ ರಾಜಕೀಯವಾಗಿ ಹಾನಿ ಮಾಡುತ್ತದೆ. ಮಡಿಕೇರಿ ಜನ ಇದನ್ನು ಒಪ್ಪುವುದಿಲ್ಲ ಎಂದು ಹಾಸ್ಯ ಮಿಶ್ರಿತ ಧಾಟಿಯಲ್ಲೇ ಉತ್ತರಿಸಿದರು. ನಂತರ ವಿಷಯ ಗಂಭೀರ ಚರ್ಚೆಗೆ ಹೊರಳಿತು. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಶ್ನೆಗೆ ಉತ್ತರ ನೀಡುತ್ತಾ, ಅಬಕಾರಿ ಇಲಾಖೆಯಲ್ಲಿ 5485 ಹುದ್ದೆಗಳು ಮಂಜೂರಾಗಿದ್ದು, 2901 ಹುದ್ದೆಗಳು ಭರ್ತಿಯಾಗಿವೆ. 2584 ಹುದ್ದೆಗಳು ಖಾಲಿ ಇವೆ ಎಂದರು.

ಖಾಲಿ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಲಾಗಿದೆ. 2011ರಲ್ಲಿ ಕೆಪಿಎಸ್‍ಸಿ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪ್ರಕ್ರಿಯೆಯಲ್ಲಿ 6 ಅಬಕಾರಿ ಉಪಅಧೀಕ್ಷಕರ ನೇಮಕಾತಿಗೆ ಮುಂದಾಗಿತ್ತು. ಆದರೆ ಹೈಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ. 2007ರಲ್ಲಿ 5 ಉಪ ಅಧೀಕ್ಷಕರ ನೇಮಕಾತಿಗೆ ಕೆಪಿಎಸ್‍ಸಿ ಪರೀಕ್ಷೆ ನಡೆಸಿದೆ. 177 ಉಪನಿರೀಕ್ಷಕರ ಆಯ್ಕೆ ಪಟ್ಟಿಯನ್ನು ಕೆಪಿಎಸ್‍ಸಿ ಪ್ರಕಟಿಸಿದೆ. 59 ಹುದ್ದೆಗಳ ನೇಮಕಾತಿಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. 1003 ಅಬಕಾರಿ ರಕ್ಷಕರ ಹುದ್ದೆಗಳಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟವಾಗಿದೆ. 31 ಎಫ್‍ಡಿಎ, 2 ಬೆರಳಚ್ಚುಗಾರರ ಹುದ್ದೆಗಳಿಗೂ ನೇಮಕಾತಿ ನಡೆಯುತ್ತಿದೆ. ವಾಹನ ಚಾಲಕರ ವೃಂದದಲ್ಲಿ ಖಾಲಿ ಇರುವ 183 ಹುದ್ದೆಗಳ ನೇಮಕಾತಿಗೂ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಬಿ.ಕೆ.ಪವಿತ್ರ ಪ್ರಕರಣದ ಇತ್ಯರ್ಥದ ನಂತರ ಮುಂಬಡ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಅಬಕಾರಿ ಇಲಾಖೆ ಸರ್ಕಾರಕ್ಕೆ ಆದಾಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲಿ ಕೆಲಸ ಮಾಡುವವರಿಗೆ 25 ವರ್ಷಗಳಿಂದ ಬಡ್ತಿ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.

Facebook Comments