ಚರ್ಚೆಗೆ ಸಮಯದ ಮಿತಿ ಇರಲಿ : ಸ್ಪೀಕರ್ ಕಾಗೇರಿ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22-ಪ್ರಸಕ್ತ ವಿಧಾನಸಭೆ ಅಧಿವೇಶನ ಸೆ.26ರವರೆಗೆ ಮಾತ್ರ ನಡೆಯಲಿದ್ದು, ಸದಸ್ಯರು ಸಮಯದ ಮಿತಿ ಅರಿತು ಕಾರ್ಯಕಲಾಪಕ್ಕೆ ಸಹಕಾರ ನೀಡಬೇಕೆಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ವಿಧಾನಸಭೆ ಸಮಾವೇಶಗೊಂಡ ಕೂಡಲೇ ಸಭಾಧ್ಯಕ್ಷರು ನಿನ್ನೆ ನಡೆದ ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ನಿಗದಿಯಾಗಿದ್ದ ಅಧಿವೇಶನದಲ್ಲೇ ಎರಡು ದಿನ ಕಡಿತವಾಗಿದೆ. ಹೀಗಾಗಿ ಸೆ.26ಕ್ಕೆ ಅಧಿವೇಶನ ಮುಕ್ತಾಯವಾಗಲಿದೆ ಎಂದರು.

ಪ್ರತಿ ದಿನ ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಮಧ್ಯಾಹ್ನ 3ಗಂಟೆಯಿಂದ ಸಂಜೆ 6.30ರವರೆಗೆ ಸದನ ನಡೆಸಲು ಸಭೆಯಲ್ಲಿ ನಿರ್ಣಯವಾಗಿದೆ. ಕೊರೊನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಸುವುದೇ ಸವಾಲಾಗಿದೆ. ಪ್ರತಿಯೊಬ್ಬರೂ ವೈಯಕ್ತಿಕ ಜವಾಬ್ದಾರಿ ಅರಿತು ಶಿಸ್ತುಬದ್ಧವಾಗಿ ಸದನ ನಡೆಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಚುಕ್ಕೆ ರಹಿತ ಪ್ರಶ್ನೋತ್ತರವನ್ನು ಸದಸ್ಯರಿಗೆ ಇ-ಮೇಲ್ ಮುಖಾಂತರ ಕಳುಹಿಸಿಕೊಡಲಾಗುವುದು. ಸದನದಲ್ಲಿ ತಿಳಿಸುವ ಪ್ರಶ್ನೆಗಳ ಉತ್ತರವನ್ನು ಸದನದಲ್ಲೇ ಮಂಡನೆ ಮಾಡಲಾಗುವುದು. ಆದ್ಯತೆ ಮೇಲೆ ವಿಧೇಯಕಗಳ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಆರು ತಿಂಗಳ ನಂತರ ಸದನ ಸೇರಿದ್ದೇವೆ. ಸಮಯ ಬಹಳ ಕಡಿಮೆ ಇದ್ದು, ಸದಸ್ಯರು ಸಹಕರಿಸಬೇಕು ಎಂದು ಹೇಳಿದರು.

Facebook Comments