ವಿಶೇಷ ಅಧಿವೇಶನಕ್ಕೆ ಕಾಂಗ್ರೆಸ್ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.26- ಕೊರೊನಾ ಸೋಂಕು ನಿಯಂತ್ರಣ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನಕ್ಕೆ ಆಗ್ರಹ ಮಾಡಿದ್ದರೂ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು. ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹ ಮಾಡಲಾಗಿತ್ತು. ಆದರೆ ಸರ್ಕಾರ ಪರಿಗಣಿಸಿಲ್ಲ. ಮತ್ತು ಈ ಸಂದರ್ಭದಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿದ ಬಗ್ಗೆ ಶ್ವೇತಪತ್ರ ಹೊರಡಿಸುವಂತೆಯೂ ಆಗ್ರಹಿಸಲಾಗಿತ್ತು. ಆದರೆ ಈ ಯಾವುದರ ಬಗ್ಗೆಯೂ ಸರ್ಕಾರ ಸ್ಪಂದಿಸಿಲ್ಲ ಎಂದರು.

ನಾವು ಏನಾದರೂ ಮಾಡುವುದಕ್ಕೆ ಹೋದರೆ ಅವರ್ಯಾರೋ ಉಪಮುಖ್ಯಮಂತ್ರಿ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಹೀಗಾಗಿ ನಾನು ಏನೂ ಮಾತಾಡುವುದಿಲ್ಲ. ಹೀಗಾಗ ಸರ್ಕಾರದ ವಿವೇಚನೆಗೆ ಬಿಡುತ್ತೇನೆ. ಲಾಕ್‍ಡೌನ್ ಮುಗಿದು ಸೋಂಕು ಹೆಚ್ಚಾದ ಬಳಿಕ ಶಾಸಕರ ಸಭೆ ಕರೆದಿದ್ದಾರೆ. ಬೆಂಗಳೂರು ನಗರ ಶಾಸಕರೇ ಅಭಿಪ್ರಾಯ ಹೇಳುತ್ತಾರೆ. ಹೀಗಾಗಿ ನಾನು ಏನೂ ಮಾತಾಡುವುದಿಲ್ಲ ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಗರದ ಶಾಸಕರ ಅಭಿಪ್ರಾಯ ಪಡೆಯಲು ಸಭೆ ಕರೆಯಾಗಿದೆ. ಲಾಕ್‍ಡೌನ್ ಮಾಡಬೇಕೆ, ಬೇಡವೇ ಎಂಬ ಬಗ್ಗೆ ಸಲಹೆ ಸಂಬಂಧ ಸರ್ಕಾರ ಸಭೆ ಕರೆದಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ಶಾಸಕರು ಕೂಡ ಸಭೆ ನಡೆಸಿದರು. ಸರ್ಕಾರದ ವಿಫಲತೆ ಬಗ್ಗೆ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೀಡುವ ಸಲಹೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

Facebook Comments