ಕಂಡ ಕಂಡಲ್ಲಿ ಉಗುಳಿ ಕೊರೋನಾ ಹರಡಬೇಡಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.21- ಕಂಡ ಕಂಡಲ್ಲಿ, ಎಲ್ಲೆಂದರಲ್ಲಿ ಉಗುಳಿದರೆ ಅದರ ಫಲವನ್ನು ತಾವೇ ಅನುಭವಿಸುವುದರ ಜತೆಗೆ ಅಮಾಯಕರ ಜೀವನದೊಂದಿಗೆ ಚೆಲ್ಲಾಟವಾಡಿ ಅವರ ಜೀವಕ್ಕೂ ಕಂಟಕ ತರುವ ಪರಿಸ್ಥಿತಿ ಎದುರಾಗಿದೆ.  ಹೀಗಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ರಸ್ತೆಗಳು, ಪಾರ್ಕ್‍ಗಳು, ಉದ್ಯಾನವನ ಹೀಗೆ ಎಲ್ಲೆಂದರಲ್ಲಿ ಉಗಿಯುವುದಕ್ಕೆ ಕಡಿವಾಣ ಹಾಕದಿದ್ದರೆ ಹಲವಾರು ರೋಗ- ರುಜಿನಗಳಿಗೆ ತುತ್ತಾಗಬೇಕಾಗುತ್ತದೆ.

ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರು ವುದರಿಂದ ಈ ಯುಗ ವೈರಾಣುಯುಗವಾಗಿ ಪರಿವರ್ತನೆಯಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಮನುಷ್ಯ ಕುಲವನ್ನು ನಾಶ ಪಡಿಸುವ ಸಾವಿರಾರು ವೈರಾಣುಗಳ ಸೃಷ್ಟಿಗೆ ನಾವೇ ಕಾರಣಕರ್ತರಾಗುತ್ತೇವೆ.  ಪಾನ್‍ಬೀಡಾ, ಹೊಗೆಸೊಪ್ಪು, ಪಾನ್‍ಪರಾಗ್, ಆರ್‍ಎಂಡಿ,ಸ್ಟಾರ್, ಸೂಪರ್, ತಂಬಾಕು ಮಿಶ್ರಿತ ಉತ್ಪನ್ನಗಳಾದ ಹನ್ಸ್, ಕೂಲ್‍ಲಿಪ್ ಮತ್ತಿತರ ಪದಾರ್ಥಗಳನ್ನು ಸೇವಿಸುವವರು ಎಲ್ಲೆಂದರಲ್ಲಿ ಉಗುಳುತ್ತಾರೆ. ಇದರಿಂದ ಉತ್ಪತ್ತಿಯಾಗುವ ವೈರಾಣುಗಳು ಉಗುಳುವವರನ್ನಲ್ಲದೆ ಅಕ್ಕಪಕ್ಕದವರಿಗೂ ಹಾನಿಕಾರಕವಾಗಿ ಪರಿಣಮಿಸುತ್ತಿದೆ.

ಕಂಡ ಕಂಡಲ್ಲಿ ಉಗುಳುವವರಿಗೆ ದಂಡ ವಿಧಿಸುವ ಕಾನೂನು ಜಾರಿಗೆ ಬಂದಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ. ಬಸ್ ನಿಲ್ದಾಣ, ರೈಲು ನಿಲ್ದಾಣ, ಸಾರ್ವಜನಿಕ ಶೌಚಾಲಯಗಳು, ರಸ್ತೆಗಳು, ಪಾರ್ಕ್‍ಗಳು, ಸುರಂಗ ಮಾರ್ಗಗಳು, ತಡೆಗೋಡೆಗಳು, ಆಸ್ಪತ್ರೆ ಗೋಡೆಗಳು ಎಲ್ಲೆಂದರಲ್ಲಿ ಉಗುಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪಾನ್‍ಬೀಡಾ ಸ್ಟಾಲ್‍ಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ.

ಹೀಗಾಗಿಯೇ ಐಟಿ-ಬಿಟಿ ಸಿಟಿಯ ಹೈಟೆಕ್ ನಗರಗಳ ರಸ್ತೆಗಳ ಮೇಲೂ ಉಗುಳುವವರ ಸಂಖ್ಯೆಗೇನೂ ಕಡಿಮೆ ಇಲ್ಲದಂತಾಗಿದೆ.ಎಲ್ಲೆಂದರಲ್ಲಿ ಉಗಿಯುವವರಿಗೆ ದಂಡ ವಿಧಿಸಬೇಕಾದ ಪೊಲೀಸರು ಕಣ್ಮುಚ್ಚಿ ಕುಳಿತಿರುವುದರಿಂದ ಕಂಡ ಕಂಡಲ್ಲಿ ಉಗಿಯುವವರಿಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಕೊರೊನಾ ವೈರಸ್ ಹಾವಳಿ ನಂತರವಾದರೂ ಎಲ್ಲೆಂದರಲ್ಲಿ ಉಗಿಯುವುದಕ್ಕೆ ಸ್ವಯಂ ಕಡಿವಾಣ ಹಾಕಿಕೊಳ್ಳುವ ಆವಶ್ಯಕತೆ ಇದೆ.

ಇಲ್ಲದಿದ್ದರೆ ಅದರಿಂದ ತಮಗೆ ಮತ್ತು ತಮ್ಮ ಕುಟುಂಬದವರಿಗೆ ಎದುರಾಗುವ ಅನಾಹುತಗಳಿಗೆ ನೀವೇ ಜವಾಬ್ದಾರರಾಗುತ್ತೀರಿ ಎನ್ನುವುದನ್ನು ಮರೆಯಬೇಡಿ. ಹಣೆಬರಹಕ್ಕೆ ಹೊಣೆ ಯಾರು ಎಂಬ ಉಡಾಫೆ ಧೋರಣೆಯನ್ನು ಇನ್ನು ಮುಂದಾದರೂ ಬಿಡಬೇಕು. ನಮ್ಮ ತಾತನ ಕಾಲದಿಂದ ಉಗುಳುತ್ತಿದ್ದೇವೆ. ಏನೂ ಆಗಿಲ್ಲ, ಈಗ ಏನಾಗುತ್ತೆ ಎಂಬ ನಿರ್ಲಕ್ಷ್ಯ ಬೇಡ. ಏಕೆಂದರೆ, ನಾವು ಬದುಕುತ್ತಿರುವುದು ವೈರಾಣು ಯುಗದಲ್ಲಿ. ಭವಿಷ್ಯದಲ್ಲಿ ಲಕ್ಷಾಂತರ ವೈರಾಣುಗಳ ಹುಟ್ಟಿಗೆ ನಾವೇ ಕಾರಣಕರ್ತ ರಾಗುತ್ತೇವೆ.

ನಮ್ಮ ಮಕ್ಕಳು ಮತ್ತು ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದಾದರೂ ಇದುವರೆಗೂ ಗೊತ್ತಿದ್ದೂ ಕುರುಡರಂತೆ ಮಾಡುತ್ತಿದ್ದ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.  ಇಲ್ಲಿ ಉಗುಳಬೇಡಿ ಎಂಬ ನಾಮಫಲಕ ಅಳವಡಿಸಿರುವ ಪ್ರದೇಶಗಳಲ್ಲೇ ಉಗುಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂಥವರಿಗೆ ಬುದ್ಧಿ ಹೇಳುವುದು ಆಕಾಶಕ್ಕೆ ಉಗುಳಿದಂತಾಗುತ್ತದೆ.

ಹೀಗಾಗಿ ಕಂಡಕಂಡಲ್ಲಿ ಉಗುಳುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಡಬೇಕು.ಸಾರ್ವಜನಿಕ ಪ್ರದೇಶಗಳಲ್ಲಿ ಉಗಿಯುವ ಉಡಾಫೆ ಜನರಿಗೆ ಭಾರೀ ಪ್ರಮಾಣದ ದಂಡ ವಿಧಿಸುವ ಮೂಲಕ ಎಚ್ಚರಿಕೆ ಸಂದೇಶ ರವಾನಿಸುವ ಅವಶ್ಯಕತೆ ಇದೆ.

Facebook Comments