ಕ್ರೀಡಾಕ್ಷೇತ್ರವನ್ನು ಕಟ್ಟಿಹಾಕಿದ ಕೊರೊನಾ, 1.21 ಲಕ್ಷ ಕೋಟಿ ನಷ್ಟ..!

ಈ ಸುದ್ದಿಯನ್ನು ಶೇರ್ ಮಾಡಿ

ಪ್ರತಿ ವರ್ಷ ಜಾಹೀರಾತು ಹಾಗೂ ಕ್ರೀಡಾಚಟುವಟಿಕೆಗಳಿಂದ ಕೋಟಿ ಕೋಟಿ ಸಂಭಾವನೆ ಜೇಬಿಗಿಳಿಸುತ್ತಿದ್ದ ಸ್ಟಾರ್ ಕ್ರೀಡಾಪಟುಗಳಿಗೂ ಈ ಬಾರಿ ಕೊರೊನಾ ಭಾರೀ ಶಾಕ್ ನೀಡಿದೆ..! ಐಪಿಎಲ್, ಪ್ರೊ ಕಬ್ಬಡ್ಡಿ, ಯುಎಸ್ ಓಪನ್, ಫುಟ್ಬಾಲ್ ಮುಂತಾದ ಜನಪ್ರಿಯ ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕ್ರೀಡಾಪಟುಗಳು ಈ ವರ್ಷ ಬಹುತೇಕ ಕ್ರೀಡಾಕೂಟಗಳಿಂದ ಹೊರಗುಳಿದಿದ್ದರಿಂದ ಅವರ ಸಂಭಾವನೆಗೆ ಭಾರೀ ಹೊಡೆತ ಬಿದ್ದಿದ್ದರೆ, ಅಂತಾರಾಷ್ಟ್ರೀಯ ಹಾಗೂ ಭಾರತೀಯ ಕ್ರೀಡಾ ರಂಗವೂ ಕೋಟಾನುಕೋಟಿ ನಷ್ಟ ಅನುಭವಿಸಿದೆ.

ಭಾರತದ ದೇಶದ ಕ್ರೀಡಾಲೋಕದಲ್ಲೇ ಅತ್ಯಂತ ಶ್ರೀಮಂತ ಕ್ರೀಡೆಯಾಗಿ ಬಿಂಬಿಸಿಕೊಂಡಿರುವ ಐಪಿಎಲ್ ಈ ವರ್ಷ ನಡೆಯದಿದ್ದರೆ ಸರ್ಕಾರ, ಬಿಸಿಸಿಐ , ಪ್ರಸಾರದ ಹಕ್ಕು ಪಡೆದ ಕಂಪೆನಿಗಳಿಗೆ ಸಹಸ್ರಾರು ಕೋಟಿ ನಷ್ಟವಾಗುತ್ತದೆ. ಭಾರತದಲ್ಲಿ ಅತ್ಯಂತ ಶ್ರೀಮಂತ ಕ್ರೀಡೆ ಐಪಿಎಲ್‍ನಂತೆ ಈಗಾಗಲೇ ಆರಂಭಗೊಳ್ಳಬೇಕಾಗಿದ್ದ ಪ್ರೊ ಕಬ್ಬಡಿ ಮೇಲೂ ಕೊರೊನಾ ಛಾಯೆ ಮೂಡಿದೆ. ಇನ್ನುಳಿದ ಕ್ರೀಡೆಗಳ ಆಯೋಜನೆಯಿಂದಲೂ ಬರುತ್ತಿದ್ದ ಕೋಟಿ ಕೋಟಿ ವರಮಾನಕ್ಕೂ ಬ್ರೇಕ್ ಬಿದ್ದಿದೆ.

ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಕ್ರೀಡಾ ಚಟುವಟಿಕೆಗಳು ಸ್ತಬ್ಧಗೊಂಡಿರುವುದರಿಂದ ಸುಮಾರು 30000 ಕೋಟಿ ನಷ್ಟ ಉಂಟಾಗಿ ಕ್ರೀಡಾ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದ್ದರೆ ವಿಶ್ವದಾದ್ಯಂತ ಕ್ರೀಡೆಯಿಂದಲೇ 1.21 ಲಕ್ಷ ಕೋಟಿ ನಷ್ಟವಾಗಿದೆ . ಕೊರೊನಾ ಮಾರಾಮಾರಿ ನಡುವೆಯೇ ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಕ್ರೀಡಾ ಲೋಕದಲ್ಲಿ ತೊಡಗಿಸಿಕೊಳ್ಳಬಹುದು ಎಂಬ ಮಾರ್ಗಸೂಚಿ ಹೊರಬಂದಿರುವುದರಿಂದ ಖಾಲಿ ಕ್ರೀಡಾಂಗಣದಲ್ಲೇ ಮಹತ್ತರ ಪಂದ್ಯಗಳನ್ನು ಆಯೋಜಿಸಲು ಕ್ರೀಡಾ ಮಂಡಳಿಗಳು ಮುಂದಾಗಿವೆ.

ಈಗಾಗಲೇ ಕೆಲವು ಫುಟ್‍ಬಾಲ್ ಪಂದ್ಯಾವಳಿಗಳು ಖಾಲಿ ಮೈದಾನಗಳಲ್ಲೇ ನಡೆದಿವೆ, ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ಕೂಡ ಐಪಿಎಲ್ 13ನೆ ಆವೃತ್ತಿಯನ್ನು ಖಾಲಿ ಮೈದಾನಗಳಲ್ಲೇ ನಡೆಸಲು ಚಿಂತಿಸಿದ್ದರಾದರೂ ಪ್ರೇಕ್ಷಕರಿಲ್ಲದೆ ನಡೆಯುವ ಪಂದ್ಯಗಳು ಕೂಡ ನಷ್ಟದ ಹೊರೆಯನ್ನು ಹೆಚ್ಚಿಸುತ್ತವೆ.

ತಮ್ಮ ನೆಚ್ಚಿನ ತಾರೆಯರು ಆಡುವ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಟಿಕೆಟ್ ಪಡೆದು ಬರುತ್ತಿದ್ದರು, ಅದರ ಮೊತ್ತದಿಂದಲೇ ಕ್ರೀಡಾಂಗಣದ ನಿರ್ವಹಣೆಯನ್ನು ನಿಭಾಯಿಸಬಹುದು, ಆದರೆ ಖಾಲಿ ಮೈದಾನಗಳಲ್ಲಿ ಪಂದ್ಯಗಳು ನಡೆಯುವುದರಿಂದ ಆಟಗಾರರ ಸಂಭಾವನೆ ಹಾಗೂ ಕ್ರೀಡಾಂಗಣದ ನಿರ್ವಹಣೆಗಾಗಿ ಬಳಸುವ ಹಣವನ್ನು ಕ್ರೀಡಾ ಮಂಡಳಿಗಳೇ ನಿಭಾಯಿಸಬೇಕಾಗಿರುವುದರಿಂದ ಅದರಿಂದಲೂ ನಷ್ಟ ಉಂಟಾಗುತ್ತದೆ.

ಆದರೆ ಮತ್ತೊಂದು ಮೂಲಗಳ ಪ್ರಕಾರ ಮೈದಾನಕ್ಕೆ ಬರುವ ಪ್ರೇಕ್ಷಕರಿಂದ ಸಿಗುವ ಆದಾಯವು ನಷ್ಟವಾದರೂ ಕೂಡ ಪಂದ್ಯಾವಳಿಗಳ ಪ್ರಸಾರದಿಂದ ಆಗುವ ನಷ್ಟವನ್ನು ಸರಿದೂಗಿಸಬಹುದು ಎಂಬ ಲೆಕ್ಕಾಚಾರಗಳನ್ನು ಆಡಳಿತ ಮಂಡಳಿಗಳು ಹಾಕಿವೆ. ಕೋವಿಡ್ 19 ಅಬ್ಬರದಿಂದ ವಿಶ್ವದಾದ್ಯಂತ 1.21 ಲಕ್ಷ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು ಅಮೆರಿಕಾವೊಂದರಲ್ಲೇ 9 ಸಾವಿರ ಕೋಟಿ ರೂ. ನಷ್ಟವಾಗಿದೆ.

ಭಾರತದಲ್ಲೂ 30 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಕ್ರೀಡಾ ತಜ್ಞರು ಅಂದಾಜಿಸಿದ್ದರೆ, ಕ್ರೀಡೆಗೆ ಬಳಸುವ ಉಪಕರಣಗಳು ಮಾರಾಟವಾಗದೆ ಇರುವುದರಿಂದ 4700 ಕೋಟಿ ರೂ. ನಷ್ಟವಾಗಿದೆ ಎಂದು ಕ್ರೀಡಾ ಮಾರುಕಟ್ಟೆಯ ತಜ್ಞರು ಹೇಳಿದ್ದಾರೆ.

ಸ್ತಬ್ಧಗೊಂಡ ಪ್ರೊ ಕಬ್ಬಡ್ಡಿ:
ಇತ್ತೀಚಿಗೆ ಐಪಿಎಲ್‍ನಂತೆ ಪ್ರೊ ಕಬ್ಬಡ್ಡಿ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ, ಐಪಿಎಲ್ ಹರಾಜಿನಲ್ಲಿ ಕ್ರಿಕೆಟ್ ಆಟಗಾರರು ಲಕ್ಷ, ಕೋಟಿ ರೂ.ಗಳಿಗೆ ಬಿಕರಿಯಾದಂತೆ ಪ್ರೊ ಕಬ್ಬಡ್ಡಿ ಹರಾಜಿನಲ್ಲಿ ಕಬ್ಬಡ್ಡಿ ಆಟಗಾರರು ಕೂಡ ದೊಡ್ಡ ಮೊತ್ತವನ್ನೇ ಜೇಬಿಗಿಳಿಸುವ ಮೂಲಕ ಬಿಕರಿಯಾಗುತ್ತಾರೆ. ಜುಲೈನಲ್ಲಿ ಪೆÇ್ರ ಕಬ್ಬಡ್ಡಿ ನಡೆಯಬೇಕು ಆದರೆ ಪಂದ್ಯಾವಳಿ ನಡೆಯುವುದು ಅನುಮಾನವಾಗಿದೆ. ಒಂದು ವೇಳೆ ಸರಣಿ ನಿಂತು ಹೋದರೆ 500 ಕೋಟಿ ರೂ. ನಷ್ಟವಾಗುತ್ತದೆ ಎಂದು ಅಂದಾಜಿಸಲಾಗಿದೆ, ಇದರ ಹೊಡೆತ ಆಟಗಾರರು, ಫ್ರಾಂಚೈಸಿಗಳು ಹಾಗೂ ಆಡಳಿತ ಮಂಡಳಿಗಳ ಮೇಲೂ ಬೀರಲಿವೆ.

ಒಲಿಂಪಿಕ್‍ಗೂ ಕೊರೊನಾ ಭೀತಿ:
ಕ್ರೀಡಾ ಲೋಕದಲ್ಲಿ ಸಾಕಷ್ಟು ಕ್ರೇಜ್ ಹುಟ್ಟುಹಾಕಿರುವ ಒಲಿಂಪಿಕ್‍ನ ಅತಿಥ್ಯವನ್ನು ಈ ಬಾರಿ ಜಪಾನ್ ವಹಿಸಿಕೊಂಡಿತ್ತು. ಒಲಿಂಪಿಕ್‍ನಿಂದ ಸಾವಿರಾರು ಕೋಟಿ ಲಾಭ ಬರುತ್ತದೆ ಎಂದು ಕೂಡ ಅಂದಾಜಿಸಲಾಗಿತ್ತಾದರೂ ಈಗ ಕೊರೊನಾದ ಭೀತಿಯಿಂದಾಗಿ ಟೂರ್ನಿಯೇ ರದ್ದುಗೊಳ್ಳುವ ಮೂಲಕ ಜಪಾನ್‍ಗೆ 56 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಈ ವರ್ಷ ಒಲಿಂಪಿಕ್ಸ್ ನಡೆಯದಿರುವುದರಿಂದ ಮುಂದಿನ ವರ್ಷ ನಡೆಯಲಿರುವ ಒಲಿಂಪಿಕ್ಸ್‍ನಲ್ಲಿ 20 ಕೋಟಿ ರೂ. ವೆಚ್ಚವನ್ನು ಕಯಡಿತಗೊಳಿಸುವ ಮೂಲಕ ಸಂಘಟಕರಿಗೆ ಆಗುವ ನಷ್ಟವನ್ನು ಸರಿದೂಗಿಸುವತ್ತಲೂ ಚಿತ್ತ ಹರಿಸಲಾಗಿದೆ ಎಂದು ಜಪಾನ್‍ನ ಮಾಧ್ಯಮಗಳು ಸುದ್ದಿಯನ್ನು ಪ್ರಕಟಿಸಿವೆ.

ಬಿಸಿಸಿಐಗೂ ಲಾಸ್:
ಐಪಿಎಲ್ ಟೂರ್ನಿ ನಡೆಯದಿದ್ದರೆ ಬಿಸಿಸಿಐಗೆ 5000 ಕೋಟಿ ರೂ. ಲಾಸ್ ಆಗಲಿದೆ ಎಂದು ಹೇಳಲಾಗುತ್ತಿದೆ, ಇದನ್ನು ತಪ್ಪಿಸಲು ಬಿಸಿಸಿಐ ಅಧ್ಯಕ್ಷ ಸೌರವ್‍ಗಂಗೂಲಿ ಖಾಲಿ ಮೈದಾನಗಳಲ್ಲೇ ಐಪಿಎಲ್ ನಡೆಸಲು ಚಿಂತಿಸಿದ್ದಾರೆ, ಐಪಿಎಲ್ ಬ್ರಾಂಡ್ ಮೌಲ್ಯ 47,500 ಕೋಟಿ ರೂ. ಆಗಿದ್ದು, ಇದರಿಂದ ಬಿಸಿಸಿಐಗೆ 5000 ಕೋಟಿ ರೂ.ಗಳ ಲಾಭ ಬರಲಿದೆ, ಒಂದು ವೇಳೆ ಟೂರ್ನಿ ನಿಂತು ಹೋದರೆ 5 ಸಾವಿರ ಕೋಟಿ ರೂ. ಬಿಸಿಸಿಐಗೆ ನಷ್ಟವಾಗಲಿದೆ.

ವಿಶ್ವದಾದ್ಯಂತ ಅತ್ಯಂತ ಶ್ರೀಮಂತ ಕ್ರೀಡೆ ಎಂದು ಬಿಂಬಿಸಿಕೊಂಡಿರುವ ಫುಟ್ಬಾಲ್ ರಂಗಕ್ಕೂ ಕೊರೊನಾ ಕಾಟ ಹಬ್ಬಿದೆ. 2018- 19ರಲ್ಲಿ ಫುಟ್ಬಾಲ್ ರಂಗದಿಂದಲೇ 25 ಸಾವಿರ ಕೋಟಿ ಬಂಡವಾಳ ಹರಿದು ಬಂದಿತ್ತು. ಇಂಗ್ಲೀಷ್ ಪ್ರೀಮಿಯರ್ ಲೀಗ್ ಕ್ಲಬ್‍ಗಳು ಕೂಡ 505 ಕೋಟಿ ಆದಾಯವನ್ನು ಗಳಿಸಿದ್ದರು. ಆದರೆ ಈ ವರ್ಷ ಕೊರೊನಾ ಕಾಟದಿಂದ ಫುಟ್ಬಾಲ್ ಕ್ಲಬ್‍ಗಳು ಸುಮಾರು 8500 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದಂತಾಗಿದೆ.

ಸ್ಪ್ಯಾನಿಷ್ ಫುಟ್ಬಾಲ್ ಲೀಗ್‍ನಿಂದ ಹಿಂದಿನ ಆವೃತ್ತಿಯಲ್ಲಿ 38,363 ಕೋಟಿ ರೂ.ಗಳು ಹರಿದುಬಂದಿತ್ತಲ್ಲದೆ, 1.85 ಲಕ್ಷ ಜನರಿಗೆ ಉದ್ಯೋಗ ಲಭಿಸಿತ್ತು. ಆದರೆ ಕೊರೊನಾ ಹಾವಳಿಯಿಂದ ಸಾವಿರಾರು ಕೋಟಿ ನಷ್ಟ ಉಂಟಾಗಿರುವುದಲ್ಲದೆ ಲಕ್ಷಾಂತರ ಕ್ರೀಡಾ ಮೈದಾನಗಳ ನಿರ್ವಹಣೆ ಮಾಡುತ್ತಿದ್ದವರು ಕೆಲಸವನ್ನು ಕಳೆದುಕೊಂಡಿದ್ದಾರೆ.

ಮಂಕಾದ ಯುಎಸ್ ಓಪನ್:
ಟೆನ್ನಿಸ್ ಲೋಕದಲ್ಲಿ ಅತ್ಯಂತ ವೈಭಯುತ ಸರಣಿಯೆಂದೇ ಬಿಂಬಿಸಿಕೊಂಡಿರುವ ಯುಎಸ್ ಓಪನ್ ಮೇಲೂ ಕೊರೊನಾ ಕಾರ್ಮೋಡ ಕವಿದಿದೆ. ಈ ಲೀಗ್ ಆಗಸ್ಟ್ 24 ರಿಂದ ನಡೆಯಲಿದೆ ಎಂದು ಅಂದಾಜಿಸಲಾಗಿದೆಯಾದರೂ ಪ್ರೇಕ್ಷಕರು ಈ ಹಿಂದಿನಂತೆ ಮೈದಾನದಲ್ಲಿ ಹಾಜರಾಗುವುದು ಅನುಮಾನ ಒಂದು ವೇಳೆ ಯುಎಸ್ ಓಪನ್ ನಡೆಯದಿದ್ದರೆ ಆಯೋಜಕರಿಗೆ 760 ಕೋಟಿ ರೂ. ನಷ್ಟ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.ಕೊರೊನಾ ಮಹಾಮಾರಿಯ ಹಾವಳಿ ತಗ್ಗಿ ಕ್ರೀಡಾಲೋಕಕ್ಕೆ ಮತ್ತೆ ಹಿಂದಿನ ವೈಭವಕ್ಕೆ ಮರಳುವಂತಾಗಲಿ.

Facebook Comments