Thursday, April 18, 2024
Homeರಾಜ್ಯಭಾರತೀಯ ಕುಸ್ತಿ ಫೆಡರೇಶನ್ ಸಂಸ್ಥೆ ಅಮಾನತು

ಭಾರತೀಯ ಕುಸ್ತಿ ಫೆಡರೇಶನ್ ಸಂಸ್ಥೆ ಅಮಾನತು

ನವದೆಹಲಿ, ಡಿ.24- ಭಾರತೀಯ ಕುಸ್ತಿ ಫೆಡರೇಶನ್‍ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ನೇತೃತ್ವದ ನೂತನ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಸ್ಥೆಯನ್ನು ಕ್ರೀಡಾ ಸಚಿವಾಲಯವು ಅಮಾನತುಗೊಳಿಸಿದೆ.ಕಳೆದ ಗುರುವಾರ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ನೂತನ ಅಧ್ಯಕ್ಷನಾಗಿ ಆಯ್ಕೆಯಾದ ಕೆಲವೇ ಗಂಟೆಗಳಲ್ಲಿ ದೇಶದ್ಯಾಂತ ಭಾರೀ ವಿವಾದ ಸೃಷ್ಟಿಯಾಗಿತ್ತು.

ಈ ಬೆಳಗಣಿಗೆಯಿಂದ ಮನನೊಂದ ಒಲಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ತಾವು ಕುಸ್ತಿಯನ್ನೇ ತ್ಯಜಿಸುವ ನಿರ್ಧಾರ ಪ್ರಕಟಿಸಿದ್ದರೆ, ಮತ್ತೊರ್ವ ಕ್ರೀಡಾಪಟು ವೀರೇಂದರ್ ಸಿಂಗ್ ಕೂಡಾ ತಮಗೆ ಲಭಿಸಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಶನಿವಾರ ಹಿಂತಿರುಗಿಸಿದ್ದರು.

ಈ ಬೆಳವಣಿಗೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಕ್ರೀಡಾ ಇಲಾಖೆ ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳಿಗೆ ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸಿದೆ ಎಂದು ಉಲ್ಲೇಖಿಸಿ ಸಚಿವಾಲಯವು ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಅಧಿಕೃತ ಪ್ರಕಟಣೆಯಲ್ಲಿ, ಕ್ರೀಡಾ ಸಚಿವಾಲಯವು ರಾಷ್ಟ್ರೀಯ ಸ್ಪರ್ಧೆಗಳ ಪ್ರಕಟಣೆಯು ತರಾತುರಿಯಲ್ಲಿತ್ತು ಮತ್ತು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿಲ್ಲ. ಪಾರದರ್ಶಕತೆ ಹಾಗೂ ಇತರ ಸಮಸ್ಯೆಗಳ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಹೊಸದಾಗಿ ಆಯ್ಕೆಯಾದ ಸಂಸ್ಥೆಯ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್ ಡಿಸೆಂಬರ್ 21 ರಂದು ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳು ಈ ವರ್ಷಾಂತ್ಯದ ಮೊದಲು ಪ್ರಾರಂಭವಾಗಲಿದೆ ಎಂದು ಘೋಷಿಸಿದರು ಎಂದು ಸಚಿವಾಲಯ ಉಲ್ಲೇಖಿಸಿದೆ. ಇದು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ ಎಂದು ಸಚಿವಾಲಯ ವಿವರಿಸಿದೆ.

ನಾನು ದೇಶದ್ರೋಹಿನೋ, ಪ್ರೇಮಿನೋ ಅನ್ನೋದನ್ನ ತಾಯಿ ತೀರ್ಮಾನ ಮಾಡುತ್ತಾಳೆ : ಪ್ರತಾಪ್ ಸಿಂಹ

ಲೈಂಗಿಕ ಕಿರುಕುಳ ಆರೋಪಗಳಿಗೆ ಒಳಗಾಗಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯೂಎಫ್‍ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತನನ್ನೇ ಕುಸ್ತಿ ಸಂಸ್ಥೆಯ ನೂತನ ಮುಖ್ಯಸ್ಥರನ್ನಾಗಿ ಗುರುವಾರ ಆಯ್ಕೆ ಮಾಡಲಾಗಿತ್ತು. ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದ ಕುಸ್ತಿಪಟು ಅನಿತಾ ಶೆಯೊರಾನ್ ವಿರುದ್ಧ ಸಂಜಯ್ ಸಿಂಗ್ ಅವರು 47 ಮತಗಳ ಪೈಕಿ 40 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು. ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ, ಬೀದಿಗಿಳಿದು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದ ಕ್ರೀಡಾಪಟುಗಳು ಅನಿತಾ ಶೆಯೊರಾನ್ ಅವರಿಗೆ ಬೆಂಬಲ ನೀಡಿದ್ದರು.

ಸಂಜಯ್ ಸಿಂಗ್ ಅವರು ಈ ಹಿಂದೆ ಉತ್ತರ ಪ್ರದೇಶ ಕುಸ್ತಿ ಸಂಸ್ಥೆಯ ಉಪಾಧ್ಯಕ್ಷರಾಗಿದ್ದರು. 2019ರಿಂದ ಡಬ್ಲ್ಯೂಎಫ್‍ಐನ ಹಿಂದಿನ ಕಾರ್ಯಕಾರಿ ಮಂಡಳಿಯ ಜಂಟಿ ಕಾರ್ಯದರ್ಶಿಯಾಗಿದ್ದರು. ಉತ್ತರ ಪ್ರದೇಶದ ಕೈಸರ್‍ಗಂಜ್‍ನಿಂದ ಆರು ಬಾರಿ ಸಂಸದರಾಗಿರುವ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಕಳೆದ 12 ವರ್ಷಗಳಿಂದ ಕುಸ್ತಿ ಸಂಸ್ಥೆ ಮುಖ್ಯಸ್ಥರಾಗಿದ್ದರು.

ಏನಾಗಿತ್ತು?:
ಈ ಹಿಂದೆ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದಿದ್ದರಿಂದ ದೂರು ದಾಖಲಾಗಿತ್ತು. ನಂತರ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು.

ಕೊನೆಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದರು. ಈ ವರ್ಷಾರಂಭದಲ್ಲಿ ಬ್ರಿಜ್ ಭೂಷಣ್ ಅಧ್ಯಕ್ಷಗಿರಿಯಿಂದ ಕೆಳಗಿಳಿದಿದ್ದರು. ನಂತರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕುಸ್ತಿಪಟುಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ವಾರಣಾಸಿ ಮೂಲದ ಸಂಜಯ್ ಸಿಂಗ್, ಬ್ರಿಜ್ ಭೂಷಣ್ ಅವರ ನಿಕಟ ಸಹವರ್ತಿಯಾಗಿದ್ದಾರೆ. ಸಂಜಯ್ ಸಿಂಗ್ ಅವರು ಕಾಮನ್‍ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆರಾನ್ ಅವರ ವಿರುದ್ಧ ಒಟ್ಟು 47 ಮತಗಳ ಪೈಕಿ 40 ಮತಗಳನ್ನು ಪಡೆದು ಗೆದ್ದಿದ್ದಾರೆ.

ವಿರೋಧ:
ನಾನು ಕುಸ್ತಿ ಬಿಟ್ಟಿದ್ದರೂ ಚಿಂತಿತಳಾಗಿದ್ದೇನೆ. ನನ್ನ ಕಿರಿಯ ಮಹಿಳಾ ಕುಸ್ತಿಪಟುಗಳಿಗೆ ಏನು ಹೇಳಬೇಕು ಅನ್ನೋದೇ ಗೊತ್ತಾಗುತ್ತಿಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಬೇಸರ ವ್ಯಕ್ತಪಡಿಸಿದ್ದರು.2024ರ ಜೂನಿಯರ್ ನಾಷನಲ್ ಗೇಮ್ಸ್ ಕುರಿತು ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಾಕ್ಷಿ, ನಾನು ಕುಸ್ತಿಯನ್ನು ಬಿಟ್ಟಿದ್ದೇನೆ, ಆದರೂ ನಾನು ಚಿಂತಿತಳಾಗಿದ್ದೇನೆ. ಏಕೆಂದರೆ, ಏಪ್ರಿಲ್ 28 ರಿಂದ ಜೂನಿಯರ್ ನ್ಯಾಷನಲ್ ಲೆವೆಲ್ ಪಂದ್ಯಗಳು ನಡೆಯಲಿವೆ. ಉತ್ತರ ಪ್ರದೇಶದ ನಂದನಿನಗರ ಗೊಂಡಾದಲ್ಲಿ ಕುಸ್ತಿ ನಡೆಸಲು ನೂತನ ಕುಸ್ತಿ ಒಕ್ಕೂಟ ನಿರ್ಧರಿಸಿದೆ.

ಈ ಬಗ್ಗೆ ನನ್ನ ಕಿರಿಯ ಮಹಿಳಾ ಕುಸ್ತಿಪಟುಗಳು ಕರೆ ಮಾಡಿ ತಿಳಿಸಿದ್ದಾರೆ. ಅವರಿಗೆ ಏನು ಹೇಳಬೇಕು ಎನ್ನುವದೇ ತಿಳಿಯುತ್ತಿಲ್ಲ ಎಂದು ಬೇಸರ ಹೊರಹಾಕಿದ್ದರು. ಗೊಂಡಾ ಬ್ರಿಜ್‍ಭೂಷಣ್‍ನ ಭದ್ರಕೋಟೆ. ಈಗ ಜೂನಿಯರ್ ಮಹಿಳಾ ಕುಸ್ತಿಪಟುಗಳು ಯಾವ ಪರಿಸರದಲ್ಲಿ ಕುಸ್ತಿ ಮಾಡಲು ಹೋಗುತ್ತಾರೆ? ಅನ್ನೋದನ್ನ ಊಹಿಸಿ. ನಂದನಿನಗರ ಬಿಟ್ಟು ಬೇರೆಲ್ಲೂ ಆಯೋಜನೆ ಮಾಡಲು ಈ ದೇಶದಲ್ಲಿ ಜಾಗವಿಲ್ಲವೇ? ಏನು ಮಾಡಬೇಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದರು.

RELATED ARTICLES

Latest News