ಬೆಂಗಳೂರಿನ ಮಾಲಿನ್ಯ ನಿಯಂತ್ರಣಕ್ಕೆ BBMP ಬೊಂಬಾಟ್ ಪ್ಲಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.12-ಅಭಿವೃದ್ದಿ ಹೆಸರಿನಲ್ಲಿ ಮರಗಳ ಮಾರಣಹೋಮ ಮಾಡಿ ಪರಿಸರ ಹಾನಿ ಮಾಡಿರುವ ಬಿಬಿಎಂಪಿ ಇದೀಗ ರಸ್ತೆಗಳಿಗೆ ನೀರು ಚಿಮುಕಿಸುವ ಮೂಲಕ ಪರಿಸರ ಕಾಪಾಡಲು ಹೊಸ ಪ್ಲಾನ್ ರೂಪಿಸಿದೆ. ಅರೇ ಇದೇನಿದು ನೀರು ಚಿಮುಕಿಸಿದರೆ ಪರಿಸರ ಮಾಲಿನ್ಯ ತಪ್ಪಿಸಬಹುದೆ ಎಂದು ಹುಬ್ಬೇರಿಸಬೇಡಿ, ನಮ್ಮ ಬಿಬಿಎಂಪಿ ಅಧಿಕಾರಿಗಳು ಮನಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲರು ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆಯಷ್ಟೇ.

ನಗರದ ವಾಯು ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಬಿಬಿಎಂಪಿ ಅಧಿಕಾರಿಗಳು ರಸ್ತೆ, ಕಟ್ಟಡ ಕಾಮಗಾರಿಗಳು ನಡೆಯುವ ಪ್ರದೇಶಗಳು ಹಾಗೂ ವಾಹನದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ನೀರು ಸಿಂಪಡಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಿದೆಯಂತೆ. ಧೂಳು ಹೆಚ್ಚಿರುವ ಪ್ರದೇಶಗಳಲ್ಲಿ ನೀರು ಸಿಂಪಡಣೆಗೆಂದೇ ಬಿಬಿಎಂಪಿ ಅಧಿಕಾರಿಗಳು ಕೋಟಿ ಕೋಟಿ ಹಣ ಖರ್ಚು ಮಾಡಿ ಆರು ನೀರು ಚಿಮುಕಿಸುವ ವಾಹನಗಳ ಖರೀದಿಗೆ ಮುಂದಾಗಿದ್ದಾರೆ.

1.80 ಕೋಟಿ ಹಣ ಖರ್ಚು ಮಾಡಿ ಆರು ವಾಹನಗಳ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದು ಒಂದೆರಡು ವಾರದಲ್ಲಿ ಹೊಸ ವಾಹನಗಳು ನೀರು ಚಿಮುಕಿಸಲು ರಸ್ತೆಗಿಳಿಯಲಿವೆಯಂತೆ. ಕೊರೊನಾ ತೀವ್ರಗೊಂಡಿದ್ದ ಸಂದರ್ಭದಲ್ಲಿ ಸ್ಯಾನಿಟೈಸರ್ ಮಾಡಲು ಖರೀದಿಸಲಾಗಿದ್ದ ಎರಡು ವಾಹನಗಳನ್ನು ಈಗಾಗಲೇ ಘನತ್ಯಾಜ್ಯ ಮತ್ತು ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಹಸ್ತಾಂ ತರಿಸಲಾಗಿದ್ದು, ಆ ವಾಹನಗಳಲ್ಲಿ ಆಳವಡಿಸಿರುವ ಹೈ ಪ್ರೇಋಷರ್ ಪಂಪ್ ಮೂಲಕ ನೀರು ಸಿಂಪಡಿಸಿ ಗಾಳಿಯಲ್ಲಿರುವ ಧೂಳಿನ ಕಣಗಳನ್ನು ಕಡಿಮೆ ಮಾಡಲಾಗುತ್ತಿದೆಯಂತೆ.

ಸ್ಯಾನಿಟೈಸರ್ ಮಾಡಲು 1.2ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದ್ದ ಎರಡು ವಾಹನಗಳಿ ಗಿಂತ ಅತ್ಯಾಧುನಿಕವಾದ ಆರು ವಾಹನಗಳನ್ನು 1.80 ಕೋಟಿ ರೂ.ವೆಚ್ಚದಲ್ಲಿ ಖರೀದಿಸಲಾಗುತ್ತಿದೆ. ಹೊಸದಾಗಿ ಖರೀದಿಸಿದ ವಾಹನಗಳ ಮೂಲಕ ಸಂಸ್ಕರಿಸಿದ ನೀರನ್ನು ಧೂಳು ಹೆಚ್ಚಿರುವ ಪ್ರದೇಶಗಳಲ್ಲಿ ಸಿಂಪಡಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

# ಅಪಸ್ವರ:

ಆದರೆ, ಬಿಬಿಎಂಪಿಯ ಈ ಹೊಸ ಯೋಜನೆಗೆ ಪರಿಸರ ತಜ್ಞರು ಅಪಸ್ವರ ಹೊರಡಿಸಿದ್ದಾರೆ. ನಗರದ ಮಾಲಿನ್ಯ ತಗ್ಗಿಸಲು ರಸ್ತೆ ಬದಿಗಳಲ್ಲಿ ಸಾಕಷ್ಟು ಗಿಡ ಮರಗಳನ್ನು ನೆಡಬೇಕು. ಇದರ ಜತೆಗೆ ಅವನತಿಯಲ್ಲಿರುವ ಕೆರೆ-ಕುಂಟೆಗಳನ್ನು ಪುನರುಜ್ಜೀವನ ಗೊಳಿಸುವುದರಿಂದ ಮಾತ್ರ ಸಾಧ್ಯ. ಬಿಬಿಎಂಪಿ ಅಧಿಕಾರಿಗಳು ಧೂಳು ತುಂಬಿರುವ ಪ್ರದೇಶಗಳಲ್ಲಿ ನೀರು ಸಿಂಪಡಣೆ ಮಾಡುವುದರಿಂದ ಯಾವುದೆ ಪ್ರಯೋಜನವಿಲ್ಲ ಎನ್ನುತ್ತಾರೆ ಕೆಲವರು.

ನೀರು ಸಿಂಪಡಣೆ ಮಾಡಿದಾಗ ಮೇಲ್ಬಾಗ ದಲ್ಲಿರುವ ಧೂಳಿನ ಕಣಗಳು ತಳಭಾಗಕ್ಕೆ ತಲಪುತ್ತದೆ. ಮತ್ತೆ ವಾಹನಗಳ ಸಂಚಾರ ಆರಂಭವಾದರೆ, ಮತ್ತೆ ಧೂಳು ಪರಿಸರಕ್ಕೆ ಸೇರಿಕೊಳ್ಳಲಿದೆ ಎಂದು ಅಭಿಪ್ರಾಯಪಡುತ್ತಾರೆ ತಜ್ಞರು.

# ಏನಿದರ ಉದ್ದೇಶ:

ಮರಗಳ ಮಾರಣ ಹೋಮ ದಿಂದ ನಗರದಲ್ಲಿ ಉಷ್ಣಾಂಶ ಏರಿಕೆಯಾಗುತ್ತಲೆ ಇದೆ. ಹೀಗಾಗಿ ಬೀಸಿಗಾಳಿ ಹೆಚ್ಚಾಗಿ ಗಾಳಿಯೊಂದಿಗೆ ಧೂಳು ಸೇರುತ್ತಿರುವುದರಿಂದ ಹೆಚ್ಚು ವಾಯು ಮಾಲಿನ್ಯವಾಗುತ್ತಿದೆ. ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನೀರು ಚಿಮುಕಿಸುವ ಹೊಸ ಯೋಜನೆಗೆ ಚಾಲನೆ ನೀಡಿದೆ.

ಬೆಂಗಳೂರು ನಗರದಲ್ಲಿ ಹೆಚ್ಚಿರುವ ಮಾಲಿನ್ಯ ತಡೆ ಉದ್ಧೇಶದಿಂದ ಆರು ನೀರು ಚಿಮುಕಿಸುವ ವಾಹನ ಖರೀದಿಗೆ ಕೇಂದ್ರ ಸರ್ಕಾರ 1.80 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರ ಜತೆಗೆ ನಗರದ ಪ್ರಮುಖ 40 ವೃತ್ತಗಳಲ್ಲಿ ಕಾರಂಜಿ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದ್ದು,ಈ ಯೋಜನೆಯೂ ಆದಷ್ಟು ಶೀಘ್ರ ಚಾಲನೆಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

Facebook Comments